ಬಹಿರಂಗ
ನಮ್ಮ ದೇಶದಲ್ಲಿ ಆಹಾರ ಸೇವನೆ – ಈ ದತ್ತಾಂಶ ಏನನ್ನು ತಿಳಿಸುತ್ತದೆ..?
- ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು
ಆಹಾರ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳಲ್ಲಿ ಒಂದು. ಅದರ ವೈವಿದ್ಯ ವಿಸ್ಮಯಕಾರಿಯಾದದ್ದು. ಆಹಾರ ಸೇವನೆಯನ್ನು ಮೌಲ್ಯಮಾಪನವನ್ನಾಗಿರಿಸಿಕೊಂಡು ವ್ಯಕ್ತಿಗಳನ್ನು ಅಳೆಯುವ ಚಾಳಿ ನಮ್ಮಲ್ಲಿ ಅನೇಕರಿಗಿದೆ. ಹಾಗೆಯೇ ತಾವು ಸೇವಿಸುತ್ತಿರುವ ಆಹಾರವೇ ಶ್ರೇಷ್ಠ ಎಂಬ ವ್ಯಸನ ಕೂಡ. ಅಲ್ಲದೇ ಸಸ್ಯಾಹಾರ ಸಾತ್ವಿಕ, ಮಾಂಸಾಹಾರ ತಾಮಸಿಕ ಎಂಬ ಪ್ರತಿಪಾದನೆಯನ್ನು ಆಗಾಗ್ಗೆ ಮಾಡಲಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ, ದನದ ಮಾಂಸ ಸೇವಿಸಿದರು ಎಂದು ಆರೋಪಿಸಿ, ಕೆಲವು ವ್ಯಕ್ತಿಗಳನ್ನು ಹತ್ಯೆ ಮಾಡಲಾಗಿದೆ. ಅನೇಕ ತೆರನಾದ ಹಿಂಸಾ ಪ್ರಕರಣಗಳೂ ಜರುಗಿವೆ. ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಹಲಾಲ್ ಮಾಂಸದ ಬಗೆಗೆ ಹುಯಿಲೆಬ್ಬಿಸಲಾಯಿತು. ನವೆಂಬರ್2021ರಲ್ಲಿ ಗುಜರಾತಿನ ವಡೋದರ, ರಾಜ್ಕೋಟ್, ಭಾವ್ನಗರ್ ಮತ್ತು ಜುನಾಗಡ್ ನ ಬಿಜೆಪಿ ಆಡಳಿತದಲ್ಲಿರುವ ನಗರಸಭೆಗಳು ಆಯಾಯ ಊರುಗಳ ಮಾಂಸಾಹಾರದ ಖಾನಾವಳಿಗಳನ್ನು ನಡೆಸುವವರ ವಿರುದ್ಧ ಕ್ರಮಗಳು ಹಾಗೂ ಕಾರ್ಯಾಚರಣೆಗಳನ್ನು ಜಾರಿ ಮಾಡಲು ಮುಂದಾಗಿದ್ದವು. ಕೆಲವು ದಿನಗಳ ಹಿಂದೆ ದಕ್ಷಿಣ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ ಮೇಯರ್ ಕಾರ್ಪೊರೇಶನ್ ನ ಆಯುಕ್ತರಿಗೆ ಪತ್ರವನ್ನು ಬರೆದು ನವರಾತ್ರಿ ಸಮಯದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳು ಮುಚ್ಚಬೇಕೆಂದು ತಿಳಿಸಿದ್ದಾರೆ.
2019-2020ರ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆಯ ಭಾಗವಾಗಿ ಬಿಡುಗಡೆಯಾಗಿರುವ ಆಹಾರ ಸೇವನೆಯ ಕೆಲವು ಅಂಕಿ-ಅಂಶಗಳು ಈ ವಿಚಾರದ ಮೇಲೆ ಕ್ಷಕಿರಣಗಳನ್ನು ಬೀರುತ್ತವೆ. ಆ ದತ್ತಾಂಶದ ಅನ್ವಯ 30 ರಾಜ್ಯಗಳ ಪೈಕಿ, ವಿಶ್ಲೇಷಣೆಗೊಳಪಡಿಸಿದ 15 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ 90 ಕ್ಕಿಂತಲೂ ಅಧಿಕ ಮಂದಿ ನಿತ್ಯ, ವಾರಕ್ಕೂಮ್ಮೆ ಅಥವಾ ಯಾವಾಗಲಾದರೊಮ್ಮೆ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುತ್ತಾರೆ ಎಂಬ ವಿಷಯ ಅನಾವರಣಗೊಂಡಿದೆ. ದತ್ತಾಂಶದಲ್ಲಿ ಇನ್ನೂ ಅನೇಕ ಆಸಕ್ತಿದಾಯಕ ಅಂಶಗಳಿವೆ. ಇದೇನೂ ಹೊಸ ಸಂಶೋಧನೆಯಲ್ಲ. ತಿಳಿದ ವಿಚಾರವೇ. ಆದರೆ ಅಂಕಿ-ಅಂಶಗಳ ಜೊತೆ ಆಹಾರ ಸೇವನೆಯ ಬಗೆಗಿನ ಸತ್ಯ ಪುನಃ ಸಾಬೀತಾಗಿದೆ, ಅಷ್ಟೇ.
ಆಹಾರ ಸೇವನೆ ವ್ಯಕ್ತಿಗತ ಇಷ್ಟ ಹಾಗೂ ಹಕ್ಕಿಗೆ ಸಂಬಂಧಿಸಿದ ವಿಷಯ. ಇದರ ಮೇಲೆ ಪ್ರಹಾರಗಳಾದರೇ, ಅದು ಆಹಾರ ಸಂಸ್ಕೃತಿಯ ಮೇಲೆ ಆಕ್ರಮಣವನ್ನು ಮಾಡಿದಂತೆಯೇ ಸರಿ.
(ಮ ಶ್ರೀ ಮುರಳಿ ಕೃಷ್ಣ
ಬೆಂಗಳೂರು
ಮಿಂಚಂಚೆ: msmurali1961@gmail.com)
ಸುದ್ದಿದಿನ.ಕಾಂ|ವಾಟ್ಸಾಪ್|9980346243