ದಿನದ ಸುದ್ದಿ
ಕೋವಿಡ್ ನಿಯಂತ್ರಿಸಲು ದಾವಣಗೆರೆ ಜಿಲ್ಲೆಯಲ್ಲಿ ವಾರದಲ್ಲಿ 04 ದಿನ ಸಂಪೂರ್ಣ ಲಾಕ್‍ಡೌನ್ : ಸಚಿವ ಭೈರತಿ ಬಸವರಾಜ್
ಸುದ್ದಿದಿನ,ದಾವಣಗೆರೆ: ಕೋವಿಡ್ ಸೋಂಕಿನ 2ನೇ ಅಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸಲು ಜಿಲ್ಲೆಯಲ್ಲಿ ವಾರದ 04 ದಿನ ಸಂಪೂರ್ಣ ಲಾಕ್‍ಡೌನ್ ಮತ್ತು 03 ದಿನ ಸಾಮಾನ್ಯ ಲಾಕ್‍ಡೌನ್ ವಿಧಿಸಲು ಕ್ರಮ ಜರುಗಿಸುವಂತೆ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ -19 ನಿಯಂತ್ರಣದ ಕುರಿತು ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಹಾಗೂ ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ, ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಸರ್ಕಾರದ ಕ್ರಮಗಳಿಗೆ ಜನರು ಸಹಕಾರ ನೀಡುತ್ತಿಲ್ಲ. ಹೀಗಾದಲ್ಲಿ ಕೊರೋನಾ ನಿಯಂತ್ರಿಸಲು ಹೇಗೆ ಸಾಧ್ಯ, ಪರಿಸ್ಥಿತಿ ಕೈಮೀರುವ ಮೊದಲೇ ನಾವು ಎಚ್ಚರಿಕೆ ವಹಿಸಿ, ಕೋವಿಡ್ ಹರಡುವಿಕೆಯ ಸರಪಳಿಯನ್ನು ತುಂಡರಿಸುವ ಸಲುವಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕಠಿಣ ಕ್ರಮ ಜರುಗಿಸಲೇಬೇಕಿದೆ.
ಹೀಗಾಗಿ ಜಿಲ್ಲೆಯಲ್ಲಿ ವಾರದಲ್ಲಿ 04 ದಿನ ಸಂಪೂರ್ಣ ಲಾಕ್‍ಡೌನ್ ಹಾಗೂ 03 ದಿನ ಈಗಿರುವಂತೆ ಸಾಮಾನ್ಯ ಲಾಕ್‍ಡೌನ್ ಜಾರಿಗೊಳಿಸಬೇಕು. ಈಗಾಗಲೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿ ಕ್ರಮ ಕೈಗೊಂಡಿದ್ದು, ದಾವಣಗೆರೆ ಜಿಲ್ಲೆಯಲ್ಲಿಯೂ ಇದೇ ಮಾದರಿಯನ್ನು ಅನುಸರಿಸುವುದು ಸೂಕ್ತ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರುಗಳಾದ ಮಾಡಾಳ್ ವಿರುಪಾಕ್ಷಪ್ಪ, ಎಂ.ಪಿ. ರೇಣುಕಾಚಾರ್ಯ ಅವರು ಸಚಿವರಿಗೆ ಮನವಿ ಮಾಡಿದರು.
ಇದನ್ನೂ ಓದಿ | ದಾವಣಗೆರೆ | ನಗರದಿಂದ ಗ್ರಾಮಗಳಿಗೆ ಸೋಂಕು ರವಾನೆ
ಇದಕ್ಕೆ ಸ್ಪಂದಿಸಿದ ಸಚಿವರು, ಜಿಲ್ಲೆಯಲ್ಲಿ ಕೂಡಲೆ ವಾರದ 04 ದಿನ ಸಂಪೂರ್ಣ ಲಾಕ್‍ಡೌನ್ ಮತ್ತು 03 ದಿನ ಸಾಮಾನ್ಯ ಲಾಕ್‍ಡೌನ್ ವಿಧಿಸಲು ಅಗತ್ಯ ಕ್ರಮ ಕೈಗೊಂಡು, ಯಾವ ವಾರಗಳಂದು ಯಾವ ರೀತಿಯ ಲಾಕ್‍ಡೌನ್ ಇರಬೇಕು ಎಂಬುದನ್ನು ಜಿಲ್ಲಾಧಿಕಾರಿಗಳು ನಿರ್ಧರಿಸಿ, ಆದೇಶ ಹೊರಡಿಸಬೇಕು. ಸಂಪೂರ್ಣ ಲಾಕ್‍ಡೌನ್ ಅವಧಿಯಲ್ಲಿ ಒಂದು ನರಪಿಳ್ಳೆಯೂ ರಸ್ತೆಗಿಳಿಯದಂತೆ ಕಠಿಣ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕು ಎಂದು ಸಚಿವರು ಸಭೆಯಲ್ಲಿಯೇ ಆದೇಶ ನೀಡಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಪ್ರತಿಕ್ರಿಯಿಸಿ, ಲಾಕ್‍ಡೌನ್ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡದೇ ಹೋದರೆ ಕೋವಿಡ್ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಲಾಕ್‍ಡೌನ್ ಸಂದರ್ಭದಲ್ಲಿ ಪೊಲೀಸರು ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ, ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಕ್ರಮಗಳಿಗೆ ಇಲ್ಲಸಲ್ಲದ ಅಪಪ್ರಚಾರ ನೀಡುತ್ತಾರೆ.
ಮಾಧ್ಯಮಗಳೂ ಕೂಡ ಇದನ್ನು ಟೀಕಿಸುವುದು ಸರಿಯಲ್ಲ. ಜನರ ಪ್ರಾಣ ರಕ್ಷಣೆ ಮುಖ್ಯವಾಗಿದ್ದು ಇದಕ್ಕೆ ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243