ದಿನದ ಸುದ್ದಿ
ದಾವಣಗೆರೆ | ಸರ್ಕಾರಿ ನೌಕರರ ಭವನದಲ್ಲಿ ಉಚಿತ ಕೋವಿಡ್ ಪರೀಕ್ಷೆ
ಸುದ್ದಿದಿನ,ದಾವಣಗೆರೆ : ಪ್ರತಿಯೊಬ್ಬ ನಾಗರೀಕರು ಸ್ವಯಂ ಪ್ರೇರಣೆಯಿಂದ ಕೋವಿಡ್-19 ಗಂಟಲು ಮಾದರಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಅತೀ ಬೇಗ ರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಮುಂದಾಗುವ ಗಂಡಾಂತರವನ್ನು ತಡೆಗಟ್ಟಬಹುದು ಎಂದು ದಾವಣಗೆರೆ ತಾಲ್ಲೂಕು ವೈದ್ಯಾಧಿಕಾರಿ ಡಾ.ದೇವರಾಜ್ ಪಟಗಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ದಾವಣಗೆರೆ ಇವರ ಆಶ್ರಯದಲ್ಲಿ ಸರ್ಕಾರಿ ನೌಕರರ ಸಭಾಂಗಣದಲ್ಲಿ ಗುರುವಾರ ಉಚಿತ ಕೋವಿಡ್-19 ಗಂಟಲು ಮಾದರಿ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಅವರು ಮಾತನಾಡಿ ನಾವುಗಳು ಈಗಾಗಲೇ ನಗರದ ವ್ಯಾಪ್ತಿಯಲ್ಲಿ ಬರುವ ನಿಟ್ಟುವಳ್ಳಿ ಇ.ಎಸ್.ಐ ಆಸ್ಪತೆ ಮುಂಭಾಗ, ವಿದ್ಯಾನಗರ ಕೆನರಾ ಬ್ಯಾಂಕ್ ಎದುರು, ಸೂಪರ್ ಮಾರ್ಕೆಟ್ ದಾವಣಗೆರೆ ಒನ್ ಬಳಿ, ಸರ್ಕಾರಿ ನೌಕರರ ಭವನ, ಹಾಗೂ ಇತರೆ ಹಲವಾರು ನಿಗದಿತ ಸ್ಥಳಗಳಲ್ಲಿ ಉಚಿತ ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಿ.ಪಾಲಾಕ್ಷಪ್ಪ ಇವರು ಮಾತನಾಡಿ ಕೊರೋನಾ ಪರೀಕ್ಷೆಗೆ ಸ್ವಯಂ ಪ್ರೇರಣೆಯಿಂದ ಪ್ರತಿಯೊಬ್ಬ ನಾಗರೀಕರು ಹಾಗೂ ಸರ್ಕಾರಿ ನೌಕರರು ಬಂದು ಪರೀಕ್ಷೆ ಮಾಡಿಸಿಕೊಳ್ಳುವಂತೆ ಕರೆ ನೀಡಿದರು.
ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್. ಉಮಾಪತಿ, ಮಾತನಾಡಿ, ಸಾಂಕ್ರಾಮಿಕ ರೋಗ ಕೋವಿಡ್-19 ಬಗ್ಗೆ ನಾವುಗಳು ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದ್ದು, ಸಾರ್ವಜನಿಕರು ಆರೋಗ್ಯಕರವಾದ ಶುದ್ಧವಾದ ಆಹಾರ, ನೀರು, ಗಾಳಿ ಸೇವಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸಬೇಕು.
ಕೋರೋನಾ ಸಾಂಕ್ರಾಮಿಕ ರೋಗದಿಂದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಿರುವುದರಿಂದ ತಾವುಗಳೆಲ್ಲರೂ ಸಹಕರಿಸಬೇಕು. ಕೋವಿಡ್ ಪೀಡಿತರನ್ನು ಪ್ರತ್ಯೇಕಿಸಿ ಅವಮಾನಿಸಬಾರದು. ಆಗಾಗ್ಗೆ ಸಾಬೂನಿನಿಂದ ಕೈ ಮತ್ತು ಕಾಲುಗಳನ್ನು ತೊಳೆಯುವುದರಿಂದ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಶ್ವ ಕೈತೊಳೆಯುವ ದಿನಾಚರಣೆ ಪ್ರಯುಕ್ತ ಸಮರ್ಪಕವಾಗಿ ಕೈತೊಳೆಯುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಡಾ.ಉಮೇಶ್, ಕಲ್ಲೇಶಪ್ಪ, ಶಿವಣ್ಣ, ಹೆಚ್.ಉಮಾಪತಿ, ಹಾಗೂ ಆಶಾಬಾನುಪ್ರಕಾಶ್, ವೆಂಕಟಾಚಲ ಕುಮಾರ, ಆನಂದ್ ಮೂರ್ತಿ .ಪು.ಆ.ಸ ಅವಿನಾಶ್ ಹಾಗೂ ಆರೋಗ್ಯ ಸಿಬ್ಬಂದಿಯವರು ಹಾಜರಾಗಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243