ಬಹಿರಂಗ
ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮರೀಚಿಕೆ..!
- ಸಂಜ್ಯೋತಿ ವಿ. ಕೆ, ಬೆಂಗಳೂರು
ಪ್ರಧಾನ ಸೇವಕರು ಜಾಗತಿಕ ವೇದಿಕೆಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗೆ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿರುವ ಹೊತ್ತಲ್ಲೇ ಇತ್ತ ದೇಶದಲ್ಲಿ ಸುಳ್ಳು ಸುದ್ದಿಗಳನ್ನು ಬಯಲಿಗೆಳೆದು ಸತ್ಯ ತೋರುವ ದಿಟ್ಟ ಪತ್ರಕರ್ತ ಝುಬೈರ್’ನನ್ನು ಕ್ಷುಲ್ಲಕ, ಹಾಸ್ಯಾಸ್ಪದ ನೆಪ ಒಡ್ಡಿ ಬಂಧಿಸಲಾಗುತ್ತದೆ.
ಅದೇ ಹೊತ್ತಲ್ಲಿ ದನಿಯಲ್ಲದವರ ದನಿಯಾದ ಜನಪರ ಹೋರಾಟಗಾರ್ತಿ ತೀಸ್ತಾ ಸೆಟೆಲ್ವಾಡ್ ಅವರ ಬಂಧನವಾಗುತ್ತದೆ. ಪತ್ರಕರ್ತ ಸಿದ್ದಿಕಿ ಕಪ್ಪನ್, ಚಿಂತಕ, ಜನಪರ ಹೋರಾಟಗಾರ ತೇಲ್ತುಂಬ್ಡೆ, ಸುಧಾ ಭಾರಧ್ವಾಜ್, ಉಮರ್ ಖಾಲಿದ್, ಸ್ಟಾನ್ ಸ್ವಾಮಿ… ಪಟ್ಟಿ ಉದ್ದವಿದೆ. ಇಂತಹದ್ದೇ ಅನೇಕ ಪ್ರಕರಣಗಳಲ್ಲಿ ಬಂಧಿತರಾದವರನ್ನೂ ಧೀರ್ಘಕಾಲದವರಗೆ ವಿಚಾರಣೆಯೂ ಇಲ್ಲದೆ, ಜಾಮೀನೂ ದೊರಕದಂತೆ ಬಂಧನದಲ್ಲಿಡುವುದು ಅವರ ದಿಟ್ಟ ಅಭಿವ್ಯಕ್ತಿ ದನಿಗಳನ್ನು ಉಡುಗಿಸುವ ಪ್ರಯತ್ನವಷ್ಟೇ ಎಂಬುದು ಬಹಿರಂಗ ರಹಸ್ಯ. ಈ ಸ್ಥಿತಿಯನ್ನು ಘೋಷಿತ ತುರ್ತುಪರಿಸ್ಥಿತಿಗಿಂತಲೂ ಕರಾಳವಾದ ಅಘೋಷಿತ ತುರ್ತುಪರಿಸ್ಥಿತಿ ಎನ್ನದೆ ಮತ್ತೇನೆನ್ನಲು ಸಾಧ್ಯ?
ಅದೇ ಆಳುವವರ ಕೃಪಾಪೋಷಿತರು, ಸರ್ಕಾರದ ಭಾಗವಾಗಿರುವವರು ಬಹಿರಂಗವಾಗಿಯೇ ಹೀನಾಯವಾದ ಅತ್ಯಾಚಾರ, ಕೊಲೆ, ಭಯೋತ್ಪಾದಕ ಕೃತ್ಯಗಳಂತ ಗಂಭೀರ ಅಪರಾಧಗಳನ್ನು ಎಸಗಿದರೂ ಅವರ ಬಂಧನವಿರಲಿ, ಅವರ ಮೇಲೆ ದೂರು ದಾಖಲಿಸಲೂ ಹಿಂಜರಿಯುವ, ದೂರು ದಾಖಲಾದರೂ ಬಂಧಿಸಲು ಉದಾಸೀನ ತೋರುವ ಪೋಲಿಸ್ ವ್ಯವಸ್ಥೆ, ಬಂಧಿಸಿದರೂ ಬಹಳ ಅನಾಯಾಸವಾಗಿ ಜಾಮೀನು ಮಂಜೂರಾಗುವಂತ, ಆಮೇಲೆ ಪ್ರಕರಣದ ಸಾಕ್ಷಿಗಳೆಲ್ಲ ಸತ್ತು ನ್ಯಾಯವೇ ಸತ್ತುಬಿಡುವಂತೆ ವರ್ಷಗಟ್ಟಲೆ ಆ ಪ್ರಕರಣಗಳನ್ನು ಎಳೆಯುವ ನ್ಯಾಯಾಂಗ ವ್ಯವಸ್ಥೆ, ಇವೆಲ್ಲವೂ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮಾತನ್ನೇ ಹಾಸ್ಯ ಮಾಡುವಂತಿದೆ.
ಒಟ್ಟಾರೆ ಇಡೀ ಆಡಳಿತಾಂಗವೇ ಪ್ರಶ್ನಿಸುವ ಪ್ರತಿರೋಧದ ದನಿಗಳ ಹುಟ್ಟಡಗಿಸಲು ಟೊಂಕ ಕಟ್ಟಿ ನಿಂತಿರುವಾಗ, ಆಡಳಿತಾಂಗದ ವೈಫಲ್ಯಗಳ ಬುಡ ಹಿಡಿದು ಪ್ರಶ್ನಿಸಬೇಕಾದ ಮುಖ್ಯವಾಹಿನಿಯ ಮಾಧ್ಯಮವು ಆಳುವವರ ಸಾಕುನಾಯಿಯಂತೆ ಬಹುಪರಾಕು ಉಲಿಯುತ್ತಿವೆ.
ಬೇಸತ್ತ ಜನಸಾಮಾನ್ಯರೇ ಸಾಂಸ್ಕೃತಿಕ ಕಲಾ ಮಾಧ್ಯಮಗಳಾದ ನಾಟಕ, ಸಿನಿಮಾ, ಸಾಹಿತ್ಯಗಳ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಭಿನ್ನಾಭಿಪ್ರಾಯ ದಾಖಲಿಸತೊಡಗಿದ್ದಾರೆ. ಆದರೆ ಅಷ್ಟನ್ನೂ ಸಹಿಸಲಾರದ ಸರ್ವಾಧಿಕಾರೀ ಸರ್ಕಾರ ಸಾಧ್ಯವಿರುವ ಎಲ್ಲ ಸಾಧನಗಳನ್ನೂ ಜನರ ಬಾಯಿಮುಚ್ಚಿಸಲು ಝಳಪಿಸಹೊರಟಿರುವಂತಿದೆ.
ಸರ್ಕಾರದ ಬಹಿರಂಗ ಬೆಂಬಲ ಇರವ ಸಂವಿಧಾನ ವಿರೋಧಿ ಗುಂಪುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸರ್ಕಾರದ ನೀತಿಗಳನ್ನು ಪ್ರಶ್ನಿಸುವವರ ಮೇಲೆ ಅಸಹ್ಯಕರವಾಗಿ ಮುಗಿಬೀಳುತ್ತಾರೆ, ಆಕ್ರಮಣಕಾರಿ ಬೆದರಿಕೆಗಳೊಡ್ಡುತ್ತಾರೆ. ಇನ್ನೂ ಮುಂದೆ ಹೋಗಿ ಮೊನ್ನೆ ಆನವಟ್ಟಿಯಲ್ಲಿ ನಡೆಯಬೇಕಿದ್ದ ನಾಟಕಕ್ಕೆ ತಡೆಯೊಡ್ಡುತ್ತಾರೆ; ಆದರೆ ಇಂತವರ ಮೇಲೆ ಯಾವುದೇ ಕಾನೂನು ಕ್ರಮ ಇರುವುದಿಲ್ಲ.
ಈಗ ಜನದನಿ ದಮನಿಸುವಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, FB ಯಂತಹ ಸಾಮಾಜಿಕ ಜಾಲತಾಣವನ್ನೂ ಬೆಲೆಗೆ ಕೊಂಡಂತೆ, ಅದರ ನಿಯಮ ನಿರೂಪಕರ ಸ್ಥಾನದಲ್ಲಿ ಸರ್ಕಾರ ತನ್ನ ಭಟ್ಟಂಗಿಗಳನ್ನೇ ಕೂರಿಸಿರುವಂತಿದೆ. ಸರ್ಕಾರದ ವೈಫಲ್ಯ, ಅನೀತಿಗಳನ್ನು ಪ್ರಶ್ನಿಸುವಂತ ಸುದ್ದಿ ತಾಣಗಳ ಪೋಸ್ಟ್’ಗಳಿಂದ ಹಿಡಿದು, ಜನಸಾಮಾನ್ಯರ ವೈಯಕ್ತಿಕ ವಿಮರ್ಶಾತ್ಮಕ ಪೋಸ್ಟ್’ಗಳನ್ನೂ ಅಳಿಸಿ ಹಾಕುವ, ಅಂತಹವರ ಖಾತೆಗಳನ್ನು ತಡೆಹಿಡಿಯುವ ಅಸಹ್ಯಕರ ಮಟ್ಟಕ್ಕೆ ಇಳಿದಿದೆ.
ನಿನ್ನೆ ಒಂದೇ ದಿನ ಹತ್ತಾರು ಜನರ ವೈಯಕ್ತಿಕ ಖಾತೆಗಳ ಮೇಲೆ ‘FB ಸಾರ್ಜನಿಕ ನೀತಿ’ ಎಂಬ ಅನೂಹ್ಯ, ರಹಸ್ಯಕರ, ಶಂಕಾತ್ಮಕ ಅಸ್ತ್ರ ಬೀಸಿ, ಅವರಿಗೆ ನೋಟೀಸು ಕಳುಹಿಸಿರುವುದು, ಸರ್ಕಾರ ಮತ್ತು FBಯ ಕಾನೂನುಬಾಹಿರ ಅಕ್ರಮ ಸಂಬಂಧವನ್ನು ಜಗ್ಗಾಜಾಹೀರುಗೊಳಿಸಿದಂತಾಗಿದೆ. ಕೆಲವು ತಾಂತ್ರಿಕ ಕಾರಣಗಳು, ಕೆಲವು ವಾಣಿಜ್ಯ ಕಾರಣಗಳ ಹೊರತಾಗಿಯೂ, ಆಳುವ ಪಕ್ಷದ ಬಗೆಗಿನ ವಿಮರ್ಶಾತ್ಮಕ ಬರವಣಿಗೆಗಳಿಗೇ ಕತ್ತರಿ ಬಿದ್ದಿರುವುದು ಬಹಳ ಸರಳ/ ನೇರ ವಿಷಯವೇನಲ್ಲ ಎಂಬುದು ಕಣ್ಣಿಗೆ ಹೊಡೆದಂತೆ ಕಾಣುತ್ತಿದೆ.
ಇದು ಸರ್ಕಾರದ ಸರ್ವಾಧಿಕಾರಿ ಧೋರಣೆ, ಅಹಂಕಾರಗಳನ್ನು ಮಾತ್ರವಲ್ಲದೆ, ಅದರ ಅತೀವ ಭಯವನ್ನೂ ಬಹಿರಂಗಗೊಳಿಸಿದೆಯಷ್ಟೇ.
ಸುದ್ದಿದಿನ.ಕಾಂ|ವಾಟ್ಸಾಪ್|9980346243