ಬಹಿರಂಗ

ಪತ್ರಿಕಾ ಸ್ವಾತಂತ್ರ್ಯ ಎಷ್ಟು ಮುಖ್ಯ..?

Published

on

  • ವಿವೇಕಾನಂದ ಹೆಚ್.ಕೆ

ನಾವು ಪತ್ರಿಕೆ ಟಿವಿ ಮಾಧ್ಯಮಗಳ ತಿಕ್ಕಲುತನ, ವಿವೇಚನಾರಹಿತ ವರದಿಗಳು, ವೈಯಕ್ತಿಕ ನಿಂದನೆ, ವಿಕೃತ ಸುದ್ದಿಗಳು, ಸಮಾಜ ವಿರೋಧಿ ಚಟುವಟಿಕೆಗಳು, ಮೌಡ್ಯ ಬಿತ್ತನೆ, ಬ್ರೇಕಿಂಗ್ ನ್ಯೂಸ್ ಎಂಬ ಭ್ರಮೆಗಳು ಎಲ್ಲವನ್ನೂ ಕಠಿಣ ಶಬ್ದಗಳಲ್ಲಿ ಟೀಕಿಸೋಣ, ಸಾಧ್ಯವಾದರೆ ಪ್ರತಿಭಟಿಸೋಣ, ಬಹಿಷ್ಕರಿಸೋಣ, ಮಾನನಷ್ಟ ಮೊಕದ್ದಮೆ ಹೂಡೋಣ ಆದರೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಬಾರದಂತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ.

ಪೋಲೀಸರು ಭ್ರಷ್ಟರಾಗಿದ್ದಾರೆ ಎಂದ ಮಾತ್ರಕ್ಕೆ ಪೋಲೀಸ್ ವ್ಯವಸ್ಥೆಯನ್ನು ನಿಷೇಧಿಸಲು ಸಾಧ್ಯವೇ ? ಹಾಗೆಯೇ ಆಸ್ಪತ್ರೆ, ಶಿಕ್ಷಣ, ಚುನಾವಣೆ ನ್ಯಾಯಾಲಯ ಸರಿಯಿಲ್ಲ ಅದರಿಂದ ತೊಂದರೆಯಾಗುತ್ತಿದೆ ಎಂದು ಆ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಸಾಧ್ಯವೇ ? ಆ ವ್ಯವಸ್ಥೆ ಅದರ ಲೋಪಗಳನ್ನು ಸರಿ ಪಡಿಸಬೇಕೆ ಹೊರತು ನಿಷೇಧ ನಮ್ಮ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ದುರ್ಬಲರ ಶೋಷಣೆ ಮತ್ತಷ್ಟು ಹೆಚ್ಚುತ್ತದೆ.

ಕರ್ನಾಟಕ ಸರ್ಕಾರದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಛಾಯಾಚಿತ್ರ ಪತ್ರಕರ್ತರ ನಿಷೇಧ ಮತ್ತು ವಿಧಾನಸಭಾ ಕಾರ್ಯಕಲಾಪಗಳ ನೇರ ಪ್ರಸಾರದ ದೃಶ್ಯಗಳನ್ನು ಚಿತ್ರೀಕರಿಸಲು ಖಾಸಗಿ ವಾಹಿನಿಯವರಿಗೆ ನಿಷೇಧ ಅಥವಾ ಈ ರೀತಿಯ ಇನ್ಯಾವುದೇ ರೂಪದ ನಿಷೇಧ ಅತ್ಯಂತ ಕೆಟ್ಟ ಮತ್ತು ದುರಹಂಕಾರಿ ಕ್ರಮವಾಗುತ್ತದೆ. ಈ ರೀತಿಯ ಕ್ರಮವನ್ನು ಹಿಂದಿನ ಸರ್ಕಾರಗಳು ಕೂಡ ತರಲು ಪ್ರಯತ್ನಿಸಿದ್ದವು. ಆದರೆ ಈಗ ಅದು ಜಾರಿಗೆ ಬಂದಿದೆ.

ಕಾರಣಗಳು ಏನೇ ಇರಲಿ ವಿಧಾನಸೌಧ ಮತ್ತು ಸರ್ಕಾರಿ ಆಡಳಿತ ಯಾರದೇ ಖಾಸಗಿ ಆಸ್ತಿಯಲ್ಲ ಅಥವಾ ಯಾವುದೇ ಮುಚ್ಚುಮರೆಯಿಂದ ಕಾರ್ಯನಿರ್ವಹಿಸುವ ಸಂಸ್ಥೆಯಲ್ಲ. ಯಾವುದೇ ಕೋನದಿಂದ ನೋಡಿದರು ಅಲ್ಲಿನ ವ್ಯವಹಾರಗಳು ಬಹುತೇಕ ಜನರಿಂದ ಮರೆಮಾಚುವ ಕೆಲಸಗಳು ನಡೆಯಬಾರದು. ರಕ್ಷಣೆಗೆ ಸಂಬಂಧಿಸಿದ ಸರ್ಕಾರದ ಗೌಪ್ಯ ಮಾಹಿತಿ ಹೊರತುಪಡಿಸಿ ಎಲ್ಲವೂ ಪಾರದರ್ಶಕವಾಗಿಯೇ ನಡೆಯಬೇಕು.

ಅಂತಹ ಸ್ಥಳದಲ್ಲಿ ಗೌಪ್ಯತೆ ಕಾಪಾಡಬೇಕು ಎಂದು ಪ್ರಯತ್ನಿಸಿದರೆ ಏನೋ ಅವ್ಯವಹಾರ ನಡೆಯುತ್ತದೆ ಎಂದೇ ಭಾವಿಸಬೇಕಾಗುತ್ತದೆ.ಯಾವುದೇ ಆಡಳಿತ ವ್ಯವಸ್ಥೆ ಇರಲಿ ಮಾಧ್ಯಮ ಸ್ವಾತಂತ್ರ್ಯ ಇಲ್ಲದಿದ್ದರೆ ಅದೊಂದು ಭೀಕರ ದುರಾಡಳಿತ ಮುನ್ಸೂಚನೆ ಎಂಬುದನ್ನು ಮರೆಯದಿರೋಣ. ಎಷ್ಟೋ ಅನ್ಯಾಯಗಳು ಮಾಧ್ಯಮ ಇದೆ,
ಅದರ ಮುಖಾಂತರ ಸಾರ್ವಜನಿಕರಿಗೆ ತಿಳಿಯುತ್ತದೆ ಎಂಬ ಕಾರಣದಿಂದ ಕಡಿಮೆಯಾಗಿದೆ. ಆದ್ದರಿಂದ ಮಾಧ್ಯಮ ಸ್ವಾತಂತ್ರ್ಯವನ್ನು ಎಲ್ಲರೂ ಬೆಂಬಲಿಸಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version