ದಿನದ ಸುದ್ದಿ
ಮಹಾತ್ಮ ಗಾಂಧೀಜಿಯವರ ಹುಬ್ಬಳ್ಳಿ ಧಾರವಾಡ ಭೇಟಿ ನೂರು ವರ್ಷ ; ವಾಲ್ಮಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ
ಸುದ್ದಿದಿನ,ಧಾರವಾಡ : ವಾಲ್ಮಿ ಸಂಸ್ಥೆ ಆವರಣದಲ್ಲಿಂದು “ಮಹಾತ್ಮಾ ಗಾಂಧೀಜಿಯವರ ಹುಬ್ಬಳ್ಳಿ-ಧಾರವಾಡ ಭೇಟಿ ಶತಮಾನೋತ್ಸವ ಸ್ಮರಣೆ” ಅಂಗವಾಗಿ ಪವಿತ್ರ ಗಿಡಗಳನ್ನು ನೆಡುವ ಕಾರ್ಯಕ್ರಮ ಜರುಗಿತು.
ವಾಲ್ಮಿ ಹಾಗೂ ಐ.ಐ.ಟಿ ಸಹಯೋಗದಲ್ಲಿ ಮಹಾತ್ಮಾ ಗಾಂಧೀಜಿಯವರ ಹುಬ್ಬಳ್ಳಿ-ಧಾರವಾಡ ಭೇಟಿಯ ಶತಮಾನೋತ್ಸವ ಸ್ಮರಣ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರೊ. ಗಣೇಶ ಎನ್ ದೇವಿ ಅವರು ಪವಿತ್ರ ಅರಳಿ ಗಿಡಗಳನ್ನು ನೆಟ್ಟು ಮಾತನಾಡುತ್ತಾ, ಗಾಂಧೀಜಿಯವರು ತಮ್ಮ ಜನ ಜಾಗೃತಿ ಆಂದೋಲನದ ಭಾಗವಾಗಿ ಇದೇ ದಿನ 100 ವರ್ಷಗಳ ಹಿಂದೆ ಈ ಮಾರ್ಗವಾಗಿ ಬೆಳಗಾವಿಯಿಂದ- ಧಾರವಾಡಕ್ಕೆ ಹಾಯ್ದು ಹೋಗಿದ್ದನ್ನು ನೆನಪಿಸಿಕೊಂಡರು.
ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳನ್ನು ಒಳಗೊಂಡ ಭಾರತದ ಸಂವಿಧಾನದ ಆಶಯಗಳನ್ನು ನನಸಾಗಿಸಬೇಕಾಗಿದೆ . ಗಾಂಧೀಜಿಯವರ ನಿಸರ್ಗ ಪ್ರೇಮದ ಸಂಕೇತವಾಗಿರುವ ಈ ಪವಿತ್ರ ಅರಳಿ ಮರವು ನಮ್ಮ ಸುತ್ತಮುತ್ತಲಿನ ಮಾನಸಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಸಕಾರಾತ್ಮಕ ಭಾವ ಮೂಡಿಸುವಂತಾಗಲಿ ಎಂದರು.
ಐಐಟಿ ನಿರ್ದೇಶಕ ಡಾ.ಪಿ. ಶೇಷು, ಡಾ. ಅರುಣಾ ಹಳ್ಳಿಕೇರಿ, ಸುರೇಖಾ ದೇವಿ, ಎಂ.ಎ. ಖಾನ್, ಸನದಿ, ಶಂಕರ ಹಲಗತ್ತಿ, ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ ಮತ್ತು ವಾಲ್ಮಿ, ಧಾರವಾಡ ಮತ್ತು ಐ.ಐ.ಟಿ, ಧಾರವಾಡ ಸಂಸ್ಥೆಗಳ ಬೋಧಕರು ಮತ್ತು ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243