ದಿನದ ಸುದ್ದಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಜನ್ಮದಿನ ; ದೇಶದೆಲ್ಲೆಡೆ ಸ್ಮರಣೆ

Published

on

ಸುದ್ದಿದಿನಡೆಸ್ಕ್:ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನ. ಈ ಸಂದರ್ಭದಲ್ಲಿ ರಾಷ್ಟ್ರ ಅವರಿಗೆ ಗೌರವ ಸಲ್ಲಿಸುತ್ತಿದೆ.

ದೇಶಾದ್ಯಂತ ಮತ್ತು ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳಿಂದ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿ ರಾಜ್‌ಘಾಟ್‌ನಲ್ಲಿರುವ ಬಾಪು ಸಮಾಧಿಯಲ್ಲಿ ಸರ್ವಧರ್ಮ ಪ್ರಾರ್ಥನಾ ಸಭೆ ನಡೆಯಲಿದೆ. ಇಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಆಗಿದ್ದು ದೇಶವು ಅವರನ್ನು ಸ್ಮರಿಸುತ್ತಿದೆ.

ಸತ್ಯ, ಅಹಿಂಸೆ, ಪ್ರೀತಿ ಮತ್ತು ಪರಿಶುದ್ಧತೆಯ ಮೌಲ್ಯಗಳನ್ನು ಅಳವಡಿಸಿಕೊಂಡು, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನಸಿನ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನತೆಗೆ ಕರೆ ನೀಡಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ರಾಷ್ಟ್ರಪತಿ ಅವರು, ದೇಶ ಮತ್ತು ಸಮಾಜದ ಅಭಿವೃದ್ಧಿಯನ್ನು ನಿರಂತರವಾಗಿ ಮುನ್ನಡೆಸಲು ಶ್ರಮಿಸುವಂತೆ ಕರೆ ನೀಡಿದರು.

ಸತ್ಯ ಮತ್ತು ಅಹಿಂಸೆಯ ಕಟ್ಟಾ ಅನುಯಾಯಿಯಾಗಿದ್ದ ಬಾಪು ಅವರ ಜೀವನ ಇಡೀ ಮಾನವಕುಲಕ್ಕೆ ಒಂದು ಅನನ್ಯ ಸಂದೇಶವಾಗಿದೆ. ಮಹಾತ್ಮಾ ಗಾಂಧಿಯವರು ಶಾಂತಿ ಮತ್ತು ಸಹಕಾರದ ಮಾರ್ಗವನ್ನು ಅನುಸರಿಸಲು ಜನರನ್ನು ಪ್ರೇರೇಪಿಸಿದರು ಎಂದು ತಿಳಿಸಿದ್ದಾರೆ.

ಗಾಂಧೀಜಿಯವರು ಅಸ್ಪೃಶ್ಯತೆ, ಅನಕ್ಷರತೆ, ನೈರ್ಮಲ್ಯದ ಕೊರತೆ ಮತ್ತು ಇತರ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕಲು ಪರಿಶ್ರಮಿಸಿದರು. ಜತೆಗೆ ಮಹಿಳಾ ಸಬಲೀಕರಣದ ಉದ್ದೇಶವನ್ನು ಅವಿರತವಾಗಿ ಪ್ರತಿಪಾದಿಸಿದರು ಎಂದು ತಿಳಿಸಿದ್ದಾರೆ.

ದುರ್ಬಲ ಮತ್ತು ಅತ್ಯಂತ ದುರ್ಬಲರನ್ನು ಬಲಪಡಿಸುವತ್ತ ಬಾಪು ಅವರ ಹೋರಾಟ ಕೇಂದ್ರೀಕೃತವಾಗಿತ್ತು. ಅವರ ಆಲೋಚನೆಗಳು ಪ್ರಪಂಚದ ಅನೇಕ ಮಹನೀಯರ ಮೇಲೆ ಪ್ರಭಾವ ಬೀರಿದ್ದು, ಗಾಂಧೀಜಿಯವರ ಆದರ್ಶಗಳನ್ನು ತಮ್ಮ ವಿಧಾನಗಳಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version