ದಿನದ ಸುದ್ದಿ

ಗಣೇಶ ಚತುರ್ಥಿ | ಕೆರೆ,ನದಿ,ಬಾವಿಗಳಲ್ಲಿ ವಿಗ್ರಹ ವಿಸರ್ಜನೆ ನಿಷೇಧ

Published

on

ಸುದ್ದಿದಿನ,ದಾವಣಗೆರೆ: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸಿದ ವಿಗ್ರಹಗಳು ಮತ್ತು ಬಣ್ಣದ ವಿಗ್ರಹಗಳನ್ನು ಕೆರೆ ಮತ್ತು ಜಲ ಮೂಲಗಳಲ್ಲಿ ವಿಸರ್ಜಿಸುವುದರಿಂದ ಜಲಮಾಲಿನ್ಯ ಉಂಟಾಗುವುದರಿಂದ ಕಾನೂನಿನ್ವಯ ಯಾವುದೇ ಜಲಗಳಲ್ಲಿ, ನದಿ, ಕಾಲುವೆ/ಬಾವಿಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ.

ವಿಗ್ರಹಗಳಲ್ಲಿ ಉಪಯೋಗಿಸಿದ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಮತ್ತು ಬಳಸುವ ರಾಸಾಯನಿಕ ಬಣ್ಣಗಳಿಂದ ಆಗುತ್ತಿದ್ದು, ಇದರಿಂದ ಜಲ ಮೂಲಗಳ ಭೌತಿಕ ಮತ್ತು ರಾಸಾಯನಿಕ ಗುಣಗಳು ಮಾರ್ಪಟ್ಟಿರುತ್ತದೆ. ಇದರಿಂದ ಜಲ ಮೂಲಗಳ ಮೇಲೆ ಅವಲಂಬಿತವಾದ ಪಶು, ಪಕ್ಷಿ, ಪ್ರಾಣಿಗಳು ಮತ್ತು ಇತರೆ ಜಲಚರಗಳ ಜೀವಕ್ಕೆ ಅಪಾಯ ಉಂಟಾಗುವುದರಿಂದ ಹಾಗೂ ಪರಿಸರ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆಯಾಗುವುದರಿಂದ ಇಂತಹ ಕ್ರಿಯೆಗಳನ್ನು ತಡೆಯುವುದು ಅತ್ಯಾವಶ್ಯಕವಾಗಿರುತ್ತದೆ.

ಆದ್ದರಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ, 1974ರ ಪ್ರಕಾರ ಕಲಂ 33 (ಅ)ನಲ್ಲಿ ತಿಳಿಸಿರುವ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಯಾವುದೇ ಕೆರೆ, ಜಲಮೂಲ, ನದಿ, ಕಾಲುವೆ/ಬಾವಿಗಳಲ್ಲಿ ವಿಗ್ರಹಗಳನ್ನು ವಿಸರ್ಜಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ.

ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅವಶ್ಯಕವಾಗಿರುತ್ತದೆ. ಆದ್ದರಿಂದ ಆಗಸ್ಟ್ 22 ರಿಂದ ದಾವಣಗೆರೆ ಜಿಲ್ಲೆಯಲ್ಲಿ ಆಚರಿಸಲಿರುವ ಗಣೇಶ ಚತುರ್ಥಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಸಂರಕ್ಷಣೆಗಾಗಿ ಪರಿಸರ ಸ್ನೇಹಿಯಾಗಿ ಆಚರಿಸಲು ಕೆಳಕಂಡ ಅನುಸರಣಾ ಮಾರ್ಗಸೂಚಿಗಳನ್ನು ಅನುಸರಿಸಲು ಕೋರಲಾಗಿದೆ.

ಮಾರ್ಗಸೂಚಿ

  1. ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಇರುವ ಅರಿಶಿನದಲ್ಲಿ ಗಣೇಶ ಮೂರ್ತಿಯನ್ನು ತಯಾರಿಸಿ, ಮನೆಯಂಗಳದಲ್ಲಿ ವಿಸರ್ಜಿಸಿ ಪರಿಸರ ಮಾಲಿನ್ಯ ನಿರ್ಮೂಲನೆಗೆ ಸಹಕರಿಸಬೇಕು.
  2. ಈ ಸಾಲಿನ ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ ಅಥವಾ ತಮ್ಮ ಮನೆಗಳಲ್ಲಿಯೇ ಆಚರಿಸುವುದು.
  3. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪರಿಸರ ಹಾಗೂ ಆರೋಗ್ಯ ಸ್ನೇಹಿ ಅರಿಶಿನ ಗಣೇಶಮೂರ್ತಿಗಳೊಂದಿಗೆ ಹಬ್ಬ ಆಚರಿಸುವುದು.
  4. ಸಾರ್ವಜನಿಕರು ಚಿಕ್ಕ ಮತ್ತು ಚೊಕ್ಕ ಅರಿಶಿನ ಗಣೇಶ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಟಾಪಿಸಿ ಮನೆಯಂಗಳದಲ್ಲಿಯೇ ವಿಸರ್ಜಿಸಿ, ವಿಸರ್ಜನಾ ನೀರಿನಿಂದ ಮನೆ ಶುದ್ದೀಕರಿಸಿ.
  5. ಸಾರ್ವಜನಿಕರು ಗಣೇಶ ಮೂರ್ತಿ ಪ್ರತಿಷ್ಟಾಪನೆ ಪರಿಸರಸ್ನೇಹಿ ವಸ್ತುಗಳ ಬಳಕೆ ಮತ್ತು ಸಾಂಪ್ರದಾಯಿಕವಾಗಿ ಆಚರಿಸುವುದು.

ಜಿಲ್ಲೆಯಲ್ಲಿ ಕಳೆದ ವರ್ಷ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ನಿರ್ಬಂಧಿಸಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿರುವುದು ಹಾಗೂ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ದ ಪರಿಸರ ಸಂರಕ್ಷಣಾ ಕಾಯ್ದೆ 1986 ರಡಿಯಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಯಾವುದೇ ಕಾರಣಕ್ಕೂ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಬಾರದು.

ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಖರೀದಿಸದೇ, ಮನೆಗಳಲ್ಲಿಯೇ ಅರಿಶಿಣದಿಂದ ಅಥವಾ ಜೇಡಿ ಮಣ್ಣಿನಿಂದ ತಯಾರಿಸಿದ ಮತ್ತು ಸಾಧ್ಯವಾದಷ್ಟು ಗರಿಷ್ಟ 2 ಅಡಿ ಎತ್ತರದ ಬಣ್ಣರಹಿತ ಅಥವಾ ನೈಸರ್ಗಿಕ ಬಣ್ಣಲೇಪಿತ ಮೂರ್ತಿಗಳನ್ನು ಖರೀದಿಸುವಂತೆ ಮನವಿ ಮಾಡುತ್ತಾ, ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳ ಬಳಕೆ ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡಿ ಶೂನ್ಯ ಪ್ರಮಾಣಕ್ಕೆ ಇಳಿಸುವಲ್ಲಿ ಸಹಕಾರ ಅಗತ್ಯವಾಗಿದೆ ಎಂದು ಪರಿಸರ ಅಧಿಕಾರಿ ಕೆ.ಬಿ.ಕೊಟ್ರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version