ದಿನದ ಸುದ್ದಿ
ಗ್ಯಾಸ್ ಗೀಸರ್ ಸೋರಿಕೆ: ದಂಪತಿ ಸಾವು
ಸುದ್ದಿದಿನ ಡೆಸ್ಕ್ : ಗ್ಯಾಸ್ ಗೀಸರ್ ಸೋರಿಕೆಯಾಗಿ ದಂಪತಿ ಸಾವಿಗೀಡಾಗಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಅಪಾರ್ಟ್‍ಮೆಂಟ್‍ನಲ್ಲಿ ಮಂಗಳವಾರ ನಡೆದಿದೆ.
ಸಾಫ್ಟ್‍ವೇರ್ ಉದ್ಯೋಗಿ ಮಹೇಶ್ ಹಾಗೂ ಪತ್ನಿ ಶೀಲಾ ಸಾವಿಗೀಡಾದವರು. ಇವರಿಬ್ಬರ ಶವ ಸ್ನಾನದ ಮನೆಯಲ್ಲಿ ಕಂಡುಬಂದಿದ್ದು, ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಮಹೇಶ್ ಅವರ ಮಗಳು ಹಾಗೂ ಮಗ ಶಾಲೆಯಿಂದ ವಾಪಸ್ ಬಂದ ನಂತರ ಘಟನೆ ಬೆಳಕಿಗೆ ಬಂದಿದೆ.
ಮಕ್ಕಳು ಬಂದ ನಂತರ ಮನೆಯ ಬಾಗಿಲು ತಟ್ಟಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮಕ್ಕಳು ಸಂಬಂಧಿಕರ ಮನೆಗೆ ತೆರಳಿ ವಿಷಯ ತಿಳಿಸಿದ್ದಾರೆ. ಎಲ್ಲರೂ ಬಂದ್ ಬೆಲ್ ಮಾಡಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ತಿಳಿದುಬಂದಿದೆ. ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಬಾತ್‍ರೂಮ್‍ನಲ್ಲಿ ಇಬ್ಬರ ಶವ ಸಿಕ್ಕಿದೆ.
ದುರಂತಕ್ಕೆ ಕಾರಣ ಏನು?
ಅಗ್ಗ ಎಂಬ ಕಾರಣಕ್ಕೆ ಗ್ಯಾಸ್ ಗೀಸರ್ ಬಳಸುತ್ತಿದ್ದರು. ನೀರು ಕಾಯ್ದ ನಂತರ ಪೈಪ್‍ಗೆ ಬಿಸಿ ತಗುಲಿ ಗ್ಯಾಸ್ ಸೋರಿಕೆಯಾಗಿದೆ. ಕಾರ್ಬನ್ ಮೋನೋಕ್ಸೈಡ್ ವಿಷಕಾರಿ ಅನಿಲ. ಬಾತ್ ರೂಮ್‍ನಲ್ಲಿ ಗಾಳಿ ಹೊರ ಹೋಗಲು ಜಾಗ ಇಲ್ಲದ ಕಾರಣ ದಂಪತಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.