ದಿನದ ಸುದ್ದಿ
ಕವಿತೆ | ಗಾಯದ ಬೆಳಕು
- ಕಾವ್ಯ ಎಂ ಎನ್, ಶಿವಮೊಗ್ಗ
ನೋವ ಹಾಡುವುದನ್ನೇ ಕಲಿತೆ
ಬದುಕು ಬಿಕ್ಕಿತು..
ಗಾಯದ ಬೆಳಕು
ಹೊತ್ತಿ ಉರಿದು
ತಮವೆಲ್ಲ ತಣ್ಣಗಾದಾಗ
ಚುಕ್ಕಿಬೆರಳಿಗೆ ಮುಗಿಲು ತೋರಿದೆ
ಕೆಂಡದಂತ ಹಗಲು ನೆತ್ತಿಪೊರೆಯಿತು.
ಅದ್ಯಾವ ಕಾಡು ಮಲ್ಲಿಗೆಯ
ಹಾಡು ಕರೆಯಿತೊ ಏನೊ
ಎದೆ ಹಾದಿಯ ತುಂಬೆಲ್ಲಾ ಬೇಸಿಗೆ.
ಒಡಲು ತುಂಬಿ ಕಡಲು
ಜೀಕಿ ದಡ ಮುಟ್ಟಿದ
ಕಪ್ಪೆಚಿಪ್ಪಿನೊಳಗೆಲ್ಲಾ
ಸ್ವಾತಿ ಮುತ್ತು…
ಓಡುವ ಆಮೆಯಂತ ಗಡಿಯಾರ
ಮೈತುಂಬ ಮುಳ್ಳ ಹೊತ್ತು
ಸಾಗಿಸುತ್ತಿದೆ ಭವದ ಭಾರ.
ನನ್ನ ನಿನ್ನ ರೂಹು ತಿಳಿದ
ಕಾಡು ಗಿಡ ಮರ ಬೆಟ್ಟ ಬಯಲೆಲ್ಲಾ
ಕಥೆ ಕಟ್ಟಿ ಪಿಸುಗುಡುತ್ತಿವೆ
ಉಟ್ಟ ಉಸಿರಿನ ಬಟ್ಟೆ ಕಳಚಿದ ಮೇಲೆ
ಎಲ್ಲವೂ ಬೆತ್ತಲೆ…
ಸುದ್ದಿದಿನ.ಕಾಂ|ವಾಟ್ಸಾಪ್|9980346243