ದಿನದ ಸುದ್ದಿ

ಅರಿವಿನ ವಿಸ್ತಾರದ ಪ್ರಕ್ರಿಯೆಯೇ ಸಂಶೋಧನೆ : ಡಾ.ಚಿತ್ತಯ್ಯ

Published

on

ಸುದ್ದಿದಿನ,ಚನ್ನಗಿರಿ:ಭೂತದ ಮಾಹಿತಿ ಕೆದಕುತ್ತಾ ವರ್ತಮಾನಕ್ಕೆ ಹೊಸ ಹೊಳಹು ನೀಡುವ ಕ್ರಮ ಮತ್ತು ಅರಿವಿನ ವಿಸ್ತಾರದ ಪ್ರಕ್ರಿಯೆಯನ್ನೇ ನಾವು ಸಂಶೋಧನೆ ಎಂದು ಕರೆಯುತ್ತೇವೆ ಎಂದು ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಚಿತ್ತಯ್ಯ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಕನ್ನಡ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ‘ಸಂಶೋಧನಾ ವಿಧಾನಗಳು’ ವಿಷಯ ಕುರಿತು ಅವರು ಮಾತನಾಡಿದರು.

ಏನು?ಏಕೆ?ಹೇಗೆ?ಎಲ್ಲಿ?ಯಾವಾಗ? ಎಂಬ ಪ್ರಶ್ನೆಗಳಿಗೆ ಸಂಶೋಧನೆಯ ಮೂಲಕ ನಾವು ಉತ್ತರ ಕಂಡುಕೊಳ್ಳಬಹುದು. ನಮ್ಮಲ್ಲಿನ ಪ್ರಶ್ನಾ ಮನೋಭಾವವು ಸಂಶೋಧನಾ ದಾರಿ ಎಡೆಗೆ ಕೊಂಡುಯ್ಯುತ್ತದೆ. ಯಾವುದೋ ಒಂದು ವಿಷಯ ನಮ್ಮನ್ನು ಕಾಡುವ ಕ್ರಮವೇ ಸಂಶೋಧನೆ. ಕಾಡಿಸದಿದ್ದರೆ ಅಲ್ಲಿ ಸಂಶೋಧನೆ ಆಗಲಾರದು. ಸಂಶೋಧನೆಗೆ ಅದೊಂದು ಮೆಟ್ಟಿಲಹಾಗೆ ಕಾರ್ಯನಿರ್ವಹಿಸುತ್ತದೆ ಎಂದರು.

ಸಂಶೋಧನ ಮೀಮಾಂಸೆ’ಯು ಡಾಕ್ಟರೇಟ್ ಪದವಿಗಾಗಿ ನಿಬಂಧ ಸಿದ್ಧಪಡಿಸುವ ಮತ್ತು ಸಲ್ಲಿಸುವ ನಾಲ್ಕು ವರ್ಷದ ಮಟ್ಟಿಗೆ ಸಂಶೋಧಕರಿಗಾಗಿ ಸಿದ್ಧಪಡಿಸಿದ ಮಾರ್ಗದರ್ಶಿ ಎಂದು ತಿಳಿಯಬೇಕಾಗುತ್ತದೆ. ಏಕೆಂದರೆ ಪದವಿಯ ಹಂಗಿಲ್ಲದೆ ಸಂಶೋಧನೆಯನ್ನು ಬಾಳಿನ ಮುಖ್ಯ ಉದ್ದೇಶವಾಗಿರಿಸಿಕೊಂಡ ಸಂಶೋಧಕರ ನಡುವಿನ ಸೂಕ್ಷ್ಮ ಗೆರೆಯನ್ನು ರಹಮತ್ ತರೀಕೆರೆ ಗುರುತಿಸಿದ್ದಾರೆ‌ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅಮೃತೇಶ್ವರ ಬಿ.ಜಿ ಅವರು ಮಾಡಿದರು. ಉಪನ್ಯಾಸಕ ಡಾ.ಶಕೀಲ್ ಅಹಮ್ಮದ್ ಸ್ವಾಗತಿಸಿದರು. ವಿದ್ಯಾರ್ಥಿ ರೇಣುಕ ನಿರೂಪಿಸಿದರು. ಸೃಷ್ಟಿ ವಂದಿಸಿದರು. ತೇಜು ಆಶಯ ಗೀತೆ ಹಾಡಿದರು.

ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರವಿ, ಸಹಾಯಕ ಪ್ರಾಧ್ಯಾಪಕ ಷಣ್ಮುಕಪ್ಪ ಕೆ.ಎಚ್, ಉಪನ್ಯಾಸಕ ಹನುಮಂತಪ್ಪ, ಗೋವರ್ಧನ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version