ದಿನದ ಸುದ್ದಿ

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್

Published

on

ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್‌ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.

ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್‌ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಹೇಳಿಕೆ


  • ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.

            | ಸಚಿವ ದಿನೇಶ್ ಗುಂಡೂರಾವ್


ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version