ದಿನದ ಸುದ್ದಿ
ಉತ್ತಮ ಕೈಗಾರಿಕಾ ನೀತಿ ಜಾರಿ ; ರಾಜ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ : ಬಿ.ಎಸ್.ಯಡಿಯೂರಪ್ಪ
ಸುದ್ದಿದಿನ,ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಕರ್ನಾಟಕ ಉದ್ಯಮ ಸ್ನೇಹಿ ರಾಜ್ಯವಾಗಿದ್ದು, ಉತ್ತಮ ಕೈಗಾರಿಕಾ ನೀತಿ ಜಾರಿ ಮಾಡುವ ಮೂಲಕ ದೊಡ್ಡ ದೊಡ್ಡ ಪ್ರಮಾಣದ ಉದ್ಯಮಗಳನ್ನು ರಾಜ್ಯಕ್ಕೆ ತಂದು ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ.
ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮ ಬಳಿಯ ಸಾಯಿಪ್ರಿಯ ಶುಗರ್ಸ್ ಲಿ. ಯೂನಿಟ್ ಆವರಣದಲ್ಲಿ ಎಂ.ಆರ್.ಎನ್. (ನಿರಾಣಿ) ಉದ್ಯಮ ಸಮೂಹ ಸಂಸ್ಥೆ ವತಿಯಿಂದ ಭಾನುವಾರದಂದು ಏರ್ಪಡಿಸಿದ ಸಮಾರಂಭದಲ್ಲಿ ನೂತನ ಕಾರ್ಖಾನೆ ಗಳ ಉದ್ಘಾಟನೆ, ನಿರಾಣಿ ಸಮೂಹ ದಿಂದ 75 ಸಾವಿರ ಟಿಸಿಡಿ ಕಬ್ಬು ನುರಿಸುವ, 260 ಮೆ.ವ್ಯಾ. ಸಹ ವಿದ್ಯುತ್, 26 ಲಕ್ಷ ಲೀ. ಇಥೆನಾಲ್ ಪ್ರತಿದಿನ ಬಯೋ ಸಿ.ಎನ್.ಜಿ. ಮತ್ತು ಸಿಒ2 ಉತ್ಪಾದನೆ ಗಳ ವಿಸ್ತರಣೆ ಯೋಜನೆಗಳಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ವರುಣ ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಮುಂಬರುವ 2 ವರ್ಷ ಕಬ್ಬು ಬೆಳೆಗಾರರರಿಗೆ ನೀರಿನ ತೊಂದರೆ ಆಗಲಿಕ್ಕಿಲ್ಲ ಎಂದರು. ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ರೈತರು ನೆಮ್ಮದಿಯ ಜೀವನ ನಡೆಸಲು ಶ್ರಮಿಸುವೆ. ಕೊರೊನಾ ಸಂದರ್ಭದಲ್ಲಿ ರಾಜ್ಯ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು, ಆದರೂ ರಾಜ್ಯದ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇವೆ ಎಂದರು.
ಮುರುಗೇಶ್ ನಿರಾಣಿಯವರು ಸಕ್ಕರೆ ಕಾರ್ಖಾನೆ ಆರಂಭಿಸಿ, 10 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಸೃಷ್ಟಿ ಮಾಡಿದ್ದಾರೆ. ಕಬ್ಬಿನ ರಸದಿಂದ ಇಥೆನಾಲ್ ತಯಾರಿಸಿ ಪರಿಸರ ಸಂರಕ್ಷಣೆ ಮಾಡುತ್ತಿದ್ದಾರೆ. ದೇವರು ಅವರಿಗೆ ಇನ್ನಷ್ಟು ಉದ್ಯೋಗ ಸೃಷ್ಟಿಸುವ ಶಕ್ತಿ ನೀಡಲಿ.
ದೇಶಕ್ಕೆ ವಲ್ಲಬಾಯಿ ಪಟೇಲ್ ನಂತರ ಅಮಿತ ಶಾ ಅವರು ಉತ್ತಮ ಗೃಹ ಸಚಿವರಾಗಿ ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಳಪಡಿಸಲಾಗುವುದು ಎಂದು ಅವರಿಗೆ ಈ ವೇದಿಕೆಯ ಮೂಲಕ ಭರವಸೆ ನೀಡುವೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243