ದಿನದ ಸುದ್ದಿ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ ; 3 ಸಾವಿರ ಕೋಟಿ ಅನುದಾನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಸುದ್ದಿದಿನ,ಬೀದರ್: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಬಜೆಟ್‌ನಲ್ಲಿ 3 ಸಾವಿರ ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಶನಿವಾರ ಕಲ್ಯಾಣ ಕರ್ನಾಟಕ ಯಾತ್ರಾಪರ್ವ ಕಾರ್ಯಕ್ರಮ ಹಾಗೂ ಬಸವಕಲ್ಯಾಣ ಸಾಂಸ್ಕೃತಿಕ ನಗರ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಜನವರಿಯಲ್ಲಿ 1 ಸಾವಿರದ 400 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಏಪ್ರಿಲ್ ಕೊನೆಯ ವಾರದೊಳಗೆ ಸಂಬಂಧಿತ ಕ್ರಿಯಾಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳಲಾಗುವುದು.
ಈ ಭಾಗದ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಎಲ್ಲ ಹುದ್ದೆಗಳ ಭರ್ತಿಗೆ ಆದ್ಯತಾವಾರು ಕ್ರಮ ವಹಿಸಲಾಗುವುದು. ಅಭಿವೃದ್ಧಿ ಕೇಂದ್ರಿತವಾಗಿ ಕಾರ್ಯ ನಿರ್ವಹಿಸಲು ಒತ್ತು ನೀಡಲಾಗಿದೆ ಎಂದರು. ಸಾಮಾಜಿಕ ಪರಿವರ್ತನೆಗೆ ಮಾರ್ಗ ತೋರಿದ ಬಸವಾದಿ ಶರಣರು ಬದುಕಿನ ಸಾರ್ಥಕತೆಗೆ ಬೇಕಾದ ಆದರ್ಶಗಳನ್ನು ತಮ್ಮ ವಚನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಕಾಯಕದ ಮಹತ್ವ ಸಾರಿದ ಅವರು, ವೈಚಾರಿಕ ಮನೋಭಾವವನ್ನು ಜನತೆಯಲ್ಲಿ ಪ್ರಚೋದಿಸಿದರು ಎಂದು ಹೇಳಿದರು.
ಸ್ವಾಭಿಮಾನದ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರ ಆದರ್ಶಗಳು ಪೂರಕ. ನವಕರ್ನಾಟಕದ ನಿರ್ಮಾಣದಲ್ಲಿ ಶೋಷಿತ ಸಮುದಾಯಗಳ ಪಾತ್ರ ಮಹತ್ವವಾದದ್ದು. ಅಂಬೇಡ್ಕರ್ ಅವರ ದೂರದೃಷ್ಟಿ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿ ವ್ಯಕ್ತಿತ್ವ ಜಾಗತಿಕ ಮನ್ನಣೆಗೆ ಪಾತ್ರವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೀದರ್ ಜಿಲ್ಲಾಡಳಿತ ಹಾಗೂ ಬಸವಕಲ್ಯಾಣ ನಗರಸಭೆ ಆಶ್ರಯದಲ್ಲಿ ಸ್ಥಾಪಿಸಲಾಗಿರುವ ಭಾರತ ರತ್ನ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಶಿಕ್ಷಣ, ಸಬಲೀಕರಣ ಮತ್ತು ಉದ್ಯೋಗ, ಎಂಬ ಮೂರು ಧ್ಯೇಯಗಳ ಆಧಾರದಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243