ದಿನದ ಸುದ್ದಿ
ಗ್ರಾಮ ಪಂಚಾಯತಿಗಳ ಚುನಾವಣೆ-2020 : ಪ್ರಚಾರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಬಾವುಟ, ಚಿಹ್ನೆ ಬಳಸುವಂತಿಲ್ಲ
ಸುದ್ದಿದಿನ,ಬಾಗಲಕೋಟೆ: ಗ್ರಾಮ ಪಂಚಾಯತಿ ಚುನಾವಣೆಗಳು ಪಕ್ಷರಹಿತವಾಗಿದ್ದು, ರಾಜಕೀಯ ಪಕ್ಷಗಳು ಗ್ರಾ.ಪಂ ಚುನಾವಣೆ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗಿರುವ ಸಭೆ, ಸಮಾರಂಭಗಳನ್ನು ನಡೆಸುವ ರಾಜಕೀಯ ಮುಖಂಡರುಗಳ ಭಾವಚಿತ್ರಗಳನ್ನು ಕರ ಪತ್ರಗಳಲ್ಲಿ ಮುದ್ರಿಸಿ ಪಕ್ಷಗಳ ಬಾವುಟ, ಚಿಹ್ನೆಯನ್ನು ಬಳಸಿ ಪ್ರಚಾರ ಮಾಡುವಂತಿಲ್ಲವೆಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಗ್ರಾ.ಪಂ ಚುನಾವಣೆಯನ್ನು ಪಕ್ಷದ ಆಧಾರ ರಹಿತವಾಗಿ ನಡೆಸಲಾಗುತ್ತಿದೆ. ಸ್ಪರ್ಧಿಸುವ ಅಭ್ಯರ್ಥಿಗಳನ್ನು ತಮ್ಮ ಪಕ್ಷದ, ಬೆಂಬಲಿತ ಅಭ್ಯರ್ಥಿ ಎಂದು ಪರಿಚಯಿಸುವುದು, ಅವರ ಪರವಾಗಿ ಮತ ನೀಡಲು ಮತದಾರರನ್ನು ಕೋರುವಂತಿಲ್ಲ. ರಾಜಕೀಯ ಮುಖಂಡರ ಭಾವಚಿತ್ರ, ಪಕ್ಷದ ಚಿಹ್ನೆ ಇರುವ ಕರಪತ್ರಗಳನ್ನು ಮುದ್ರಿಸುವುದು, ಹಂಚಿವುದು ಮಾಡುವಂತಿಲ್ಲ. ಅಲ್ಲದೇ ರಾಜಕೀಯ ಪಕ್ಷಗಳ ಚಿಹ್ನೆ ಬಳಸಿ ಕಟೌಟ್‍ಗಳು, ಬ್ಯಾನರ್ ಮತ್ತು ಬಂಟಿಂಗ್‍ಗಳ ಮೂಲಕ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.
ಚುನಾವಣಾ ಅಭ್ಯರ್ಥಿಗಳು ಟಿವಿ ಮಾಧ್ಯಮಗಳು, ಪತ್ರಿಕೆಗಳ ಮೂಲಕ ರಾಜಕೀಯ ಮುಖಂಡರ ಭಾವಚಿತ್ರ ಮತ್ತು ಪಕ್ಷಗಳ ಚಿಹ್ನೆಗಳನ್ನು ಬಳಸಿ ಜಾಹೀರಾತು ನೀಡುವಂತಿಲ್ಲ. ಇಂತಹ ಪ್ರಕರಣಗಳು ಚುನಾವಣೆಯಲ್ಲಿ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅಲ್ಲದೇ ಅಂತವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243