ದಿನದ ಸುದ್ದಿ

ಪೌರ ಕಾರ್ಮಿಕರಿಗೆ ಶೀಘ್ರದಲ್ಲೇ ಗೃಹ ಭಾಗ್ಯ ಹಸ್ತಾಂತರ : ಮೇಯರ್‌ ಅಜಯ್ ಕುಮಾರ್

Published

on

ಸುದ್ದಿದಿನ,ದಾವಣಗೆರೆ : ಪೌರ ಕಾರ್ಮಿಕರ ಗೃಹ ನಿರ್ಮಾಣ ಕಾರ್ಯವು ಇನ್ನು 3-4 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ಅವುಗಳನ್ನು ಪೌರ ಕಾರ್ಮಿಕರಿಗೆ ಹಸ್ತಾಂತರಿಸಲಾಗುವುದು ಎಂದು ಮಹಾನಗರಪಾಲಿಕೆ ಮಹಾಪೌರರಾದ ಬಿ.ಜಿ ಅಜಯಕುಮಾರ್ ಹೇಳಿದರು.

ಇಂದು ಮಹಾನಗರಪಾಲಿಕೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪೌರ ಕಾರ್ಮಿಕರ ನಿರ್ಮಾಣ ಸ್ಥಳಕ್ಕೆ ಈಗಾಗಲೇ 2 ಬಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಕರೆದುಕೊಂಡು ಹೋಗಿ ತೋರಿಸಲಾಗಿದೆ. ಮಂತ್ರಿಗಳು ಗುತ್ತಿಗೆದಾರರಿಗೆ ಹಾಗೂ ಅಭಿಯಂತರರಿಗೆ ವೇಗವಾಗಿ ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ನಿರ್ದೇಶನ ನೀಡಿದ್ದು, ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಅವುಗಳನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.

ಮಹಾನಗರಪಾಲಿಕೆ ಆಯುಕ್ತರಾದ ವಿಶ್ವನಾಥ ಪಿ ಮುದಜ್ಜಿ ಮಾತನಾಡಿ, ಪಾಲಿಕೆ ನೌಕರರಿಗೆ ಅವರು ನಿವೃತ್ತಿಯಾಗುವ ದಿನದಂತೆ ಅವರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ ಮತ್ತು ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚ್ಯವನ್‍ಪ್ರಾಶ್‍ನ್ನು ಆಯುಷ್ ಇಲಾಖೆ ಮಾರ್ಗದರ್ಶನ ಪಡೆದು ಪ್ರತಿ ಪೌರ ಕಾರ್ಮಿಕರಿಗೂ ವಿತರಿಸಲಾಗಿದೆ.

ಇದರಿಂದಾಗಿ ಬೇರೆ ನಗರಗಳಿಗೆ ಹೋಲಿಸಿದರೆ ನಮ್ಮ ಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರಲ್ಲಿ ಬಹಳ ಕಡಿಮೆ ಕೊರೊನಾ ಪ್ರಕರಣಗಳು ಕಂಡು ಬಂದಿದೆ ಎಂದರು.

ತೆರಿಗೆ ಹಣಕಾಸು ಮತ್ತು ಅಪೀಲ್ ಸಮಿತಿ ಅಧ್ಯಕ್ಷರಾದ ಪ್ರಸನ್ನಕುಮಾರ್ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಅವರನ್ನು ಉತ್ತಮವಾದ ಹುದ್ದೆಗಳಿಗೆ ಕಳುಹಿಸಬೇಕು. ಅವರನ್ನು ಪುನಃ ಪೌರ ಕಾರ್ಮಿಕರನ್ನಾಗಿ ಮಾಡಬಾರದು. ಕೊರೊನಾ ಸಮಯದಲ್ಲಿ ಹೆದರದೇ ಕಾರ್ಯನಿರ್ವಹಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಿದ್ದೀರಿ ಎಂದರು.

ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಟಿ.ವಿರೇಶ್ ಮಾತನಾಡಿ, ಪೌರ ಕಾರ್ಮಿಕರಿಗೆ ದೇವರು ಆರೋಗ್ಯ ಐಶ್ವರ್ಯ, ನೀಡಲು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಪೌರ ಕಾರ್ಮಿಕರಾದ ಪಕೀರಮ್ಮ ನಿಂಗಪ್ಪ ನೇರವೇರಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಎಸ್ ಆರ್ ರವರು ಕಾರ್ಯಕ್ರಮವನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಉಪ ಮಹಾಪೌರರಾದ ಸೌಮ್ಯ ನರೇಂದ್ರಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷರಾದ ಗೌರಮ್ಮ ಗಿರಿರಾಜ್, ಜಯಮ್ಮ ಬಾಲರಾಜ್ ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಎ. ನಾಗರಾಜ್, ಪೌರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನೀಲಗಿರಿಯಪ್ಪ ಹಾಗೂ ಗೋವಿಂದರಾಜ್, ಪಾಲಿಕೆ ಸದಸ್ಯರು ಮತ್ತು ನೌಕರರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version