ಲೈಫ್ ಸ್ಟೈಲ್

ಹದಿಹರೆಯದ ವಯಸು, ಜಾರದಿರಲಿ ಮನಸು..!

Published

on

ಸಾಂದರ್ಭಿಕ ಚಿತ್ರ
  • ಮೈತ್ರಾವತಿ ವಿ. ಐರಣಿ, ಚಿಕ್ಕಬೂದಿಹಾಳು, ದಾವಣಗೆರೆ

ತ್ಮೀಯರೆ ಹದಿಹರೆಯ ಎನ್ನುವುದು ಸಾಮಾನ್ಯವಾಗಿ ಪ್ರೌಢಾವಸ್ಥೆಯಿಂದ ಕಾನೂನುಬದ್ಧ ವಯಸ್ಕ ಅವಧಿಯಲ್ಲಿ ಸಂಭವಿಸುವ ಭೌತಿಕ ಮತ್ತು ಮಾನಸಿಕ ಬೆಳವಣಿಗೆಯ ಒಂದು ಪರಿವರ್ತನೆಯ ಹಂತವಾಗಿದೆ.ಬಾಲ್ಯದ ಮುಗ್ಧತೆ ಕಳೆದು ಯೌವ್ವನದ ಪ್ರೌಢಿಮೆ ಆವರಿಸುವ ಸುಸಮಯ.11-12 ವರ್ಷಗಳು ಕಳೆಯುತ್ತಿದ್ದಂತೆ ಮಕ್ಕಳ ದೈಹಿಕತೆಯಲ್ಲಿ ಬದಲಾವಣೆಯಾಗುತ್ತದೆ.

ಹಾರ್ಮೊನ್ ನಲ್ಲಿ ವ್ಯತ್ಯಾಸವಾಗುತ್ತದೆ, ಮನಸ್ಸಿನ ಭಾವನೆಗಳಲ್ಲಿ ಸಹ ಏರುಪೇರು, ಬದಲಾವಣೆಗಳು ಆಗುತ್ತಿರುತ್ತದೆ. ಪ್ರೌಢಾವಸ್ಥೆ ಮಕ್ಕಳು ಬಾಲ್ಯಜೀವನದಿಂದ ಯುವ ವಯಸ್ಕ ಜೀವನಕ್ಕೆ ಕಾಲಿಟ್ಟರೆಂದು ಅರ್ಥ. ಆಗ ಮಕ್ಕಳು ಮಾನಸಿಕವಾಗಿ ಯೋಚಿಸುವ ರೀತಿ ಬದಲಾಗುತ್ತದೆ. ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಪೋಷಕರಲ್ಲಿ ಮತ್ತು ಮನೆಯ ವಾತಾವರಣ ಕೂಡ ಬದಲಾಗುತ್ತದೆ.

ಹದಿಹರೆಯ ಅಥವಾ ತಾರುಣ್ಯಾವಸ್ಥೆ ಎಂದು ಕರೆಯಲ್ಪಡುವ ಈ ಹಂತ ಮಕ್ಕಳಲ್ಲಿ ಬಹಳಷ್ಟು ಪರಿಣಾಮವನ್ನುಂಟು ಮಾಡುವುದಲ್ಲದೇ ಬಹಳಷ್ಟು ಅಪಾಯಕಾರಿ ಹಂತವೂ ಹೌದು .ಕವಿ ವೆಂಕಟೇಶ್ ಮೂರ್ತಿಯವರು ಹೇಳುವ ಹಾಗೆ ‘ಹುಚ್ಚುಕೋಡಿ ಮನಸು ಇದು ಹದಿನಾರರ ವಯಸು’ ಇದು ಅಕ್ಷರಶಃ ಸತ್ಯ. ಈ ವಯಸ್ಸಿನಲ್ಲಿ ಮಕ್ಕಳ ಮನಸ್ಸು ಮರ್ಕಟನಂತೆ ಕುಣಿಯುತ್ತಿರುತ್ತದೆ.

ಈ ಹಂತದಲ್ಲಿ ತರುಣ ,ತರುಣಿಯರಲ್ಲಿ ಅನೇಕ ಶಾರೀರಿಕ ಬದಲಾವಣೆಗಳಾಗುತ್ತವೆ‌.ಅದು ಪ್ರಕೃತಿ ಸಹಜವಾದರೂ ಕೂಡ ಅದನ್ನು ಅರ್ಥಮಾಡಿಕೊಳ್ಳುವ ಪರಿಪಕ್ವತೆ ಅವರಿಗಿರುವುದಿಲ್ಲ.ಈ ಹಂತದಲ್ಲಿ ಸಮಾಜ, ಶಾಲೆ, ಕುಟುಂಬ ಅವರಿಗೆ ಅತೀವವಾಗಿ ಪ್ರಭಾವ ಬೀರುತ್ತವೆ.

ಲೇಖಕಿ | ಮೈತ್ರಾವತಿ ವಿ. ಐರಣಿ, ಚಿಕ್ಕಬೂದಿಹಾಳು, ದಾವಣಗೆರೆ

ಇತ್ತೀಚಿನ ವರ್ಷಗಳಲ್ಲಿ ಅತಿಯಾಗಿ ಕಾಡುತ್ತಿರುವುದೆಂದರೆ ಭಿನ್ನ ಲಿಂಗಿಗಳ ಆಕರ್ಷಣೆಗೆ ಒಳಗಾಗಿ ಸಮಸ್ಯೆಗಳಿಗೆ ಸಿಲುಕುವುದು.ಅದೇನೋ ಗೊತ್ತಿಲ್ಲ ಇವತ್ತಿನ ಜನರೇಷನ್ ಮಕ್ಕಳಿಗೆ ಪ್ರೌಢಿಮೆಯ ಹಂತಕ್ಕೆ ಕಾಲಿಡುತ್ತಿದ್ದಂತೆ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಗಳ ಆಲೋಚನೆ ಮೊಳಕೆಯೊಡೆಯಲು ಆರಂಭಿಸುತ್ತವೆ.

ಬಾಯ್ಫ್ರೆಂಡ್,ಗರ್ಲ್ ಫ್ರೆಂಡ್ ಇಲ್ಲ ಅಂದರೆ ನಮ್ಮ ಜೀವನ ವೇಸ್ಟ್ ಎಂಬ ಭಾವನೆಯಿರುತ್ತದೆ.ಅದು ಆಕರ್ಷಣೆಯ ಸೆಳೆತವಾ,ಮಾನಸಿಕ ತುಮುಲಗಳ ಒದ್ದಾಟವೋ,ಮನೋವಾಂಛೆಯ ತಾಕಲಾಟವೋ, ವಯೋಸಹಜವೋ ಏನೊಂದೂ ಹೇಳಲಾಗುವುದಿಲ್ಲ.
ಆಧುನಿಕ ಆವಿಷ್ಕಾರದ ಫಲವಾದ ಟಿವಿ.ಮೊಬೈಲ್, ಸಾಮಾಜಿಕ ಜಾಲತಾಣಗಳು ಮಕ್ಕಳ ಮನಸ್ಸನ್ನು ಆಳುತ್ತಿವೆ.ಮತ್ತು ಹಾಳುಗೆಡವುತ್ತಿವೆ.

ತಾರುಣ್ಯಾವಸ್ಥೆ ತಲುಪಿದ ನಂತರ ಭಿನ್ನ ಲಿಂಗಿಗಳಲ್ಲಿ ವಿಶೇಷ ಆಸಕ್ತಿ ಹುಟ್ಟುತ್ತದೆ. ಆ ಆಸಕ್ತಿ ಅತಿರೇಕವಾಗಿ ಸ್ವಲ್ಪ ಯಾಮಾರಿದರು ಕೂಡ ಬದುಕು ದುರಂತ ಸ್ಥಿತಿಗೆ ಬಂದು ತಲುಪಿ ಬಿಡುತ್ತದೆ.ಎಷ್ಟೋ ವಿದ್ಯಾರ್ಥಿಗಳು ಶಾಲಾ ಹಂತದಲ್ಲೇ ಬದುಕನ್ನು ಹಾಳು ಮಾಡಿಕೊಂಡಿರುವ ಉದಾಹರಣೆಗಳು ಬಹಳಷ್ಟಿವೆ.

ಹದಿಹರೆಯದ ವಯಸಿನಲಿ..,ಜಾರಿ ಹೋಗದಿರಲಿ ಮನಸು’ ಈ ಹಂತದಲ್ಲಿ ಹುಡುಗ-ಹುಡುಗಿಯರಲ್ಲಿ ಏನಾನ್ನದರೂ ಸಾಧಿಸಬಲ್ಲೆವೆಂಬ ಆತ್ಮವಿಶ್ವಾಸವಿರುತ್ತದೆ. ಸಾಹಸಿ,ಇತರರಿಗಿಂತ ನಾನು ಭಿನ್ನ ಎಂಬ ಭಾವನೆ ಇರುತ್ತದೆ. ಈ ಧನಾತ್ಮಕ ಭಾವನೆಗಳಿಗೆ ಜೀವ ತುಂಬಿ ಪೋಷಿಸಬೇಕಾದದ್ದು ತಂದೆ-ತಾಯಿ, ಶಿಕ್ಷಕರು ಮತ್ತು ಸಮಾಜ. ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಈ ಮೂವರ ಪಾತ್ರ ಮಹತ್ತರವಾದುದು.

ಈ ಹಂತದಲ್ಲಿ ಅವರು ಸ್ವತಂತ್ರರಾಗಲು ಬಯಸುತ್ತಾರೆ ಹಾಗಂತ ಅವರನ್ನು ಹಾಗೆ ಬಿಡುವುದಲ್ಲ,ತೀರಾ ನಮ್ಮ ಆಲೋಚನೆಗಳಲ್ಲಿ ಅವರನ್ನು ಬಂಧಿ ಮಾಡುವುದು ಅಲ್ಲ,ಅವರಿಗೆ ಪ್ರತಿಯೊಂದನ್ನು ಬೆಣ್ಣೆಯಲ್ಲಿ ಕೂದಲೆಳೆಯನ್ನು ತೆಗೆದಂತೆ ನಾಜೂಕಾಗಿ ಹೇಳಬೇಕು.ಅವರ ಭಾವನೆಗಳಿಗೆ ಸ್ಪಂದಿಸಬೇಕು. ಸ್ನೇಹಿತರಂತೆ ವರ್ತಿಸಬೇಕು ಹಾಗಿದ್ದಾಗ ಅವರು ಪೋಷಕರಿಂದ ಏನನ್ನು ಮುಚ್ಚಿಡುವುದಿಲ್ಲ.

ಲೈಂಗಿಕ ವಿಷಯಗಳನ್ನು ಮಕ್ಕಳ ಕಿವಿಗೆ ಬೀಳದಂತೆ ನೋಡಿಕೊಳ್ಳಬೇಕು,ಲೈಂಗಿಕತೆಯ ಅರಿವನ್ನು ಈ ಹಂತದಿಂದಲೇ ಕಲಿಸಬೇಕು. ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆಗೆ ಮಿತಿ ಹಾಕಬೇಕು ಋಣಾತ್ಮಕ ಪ್ರಚೋದನಕಾರಿ ಅಂಶಗಳ ಪರಿಣಾಮವನ್ನು ಅವರಿಗೆ ವಿವರಿಸಬೇಕು.ಇನ್ನೂ ಶಿಕ್ಷಕರು ಯಾವುದೇ ಮಗುವಿಗಾದರೂ ನೇರವಾಗಿ ನಿಂದಿಸದೇ ಒಳಿತು ಕೆಡುಕುಗಳ ಬಗ್ಗೆ ಅರ್ಥೈಸಬೇಕು.ನೈತಿಕ ಮೌಲ್ಯಗಳನ್ನು ಬೆಳೆಸಬೇಕು.

ಅವರ ಜೊತೆ ಕೂತು ಮುಕ್ತವಾಗಿ ಮಾತನಾಡಿ ಅವರ ಆಸಕ್ತಿ ಮತ್ತು ಅಭಿರುಚಿಗೆ ತಕ್ಕುದಾದ ಧನಾತ್ಮಕ ವಿಷಯಗಳ ಬಗ್ಗೆ ಒಲವು ಮೂಡುವಂತೆ ಪ್ರೇರೆಪಿಸಬೇಕು.ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಆಲೋಚನೆಯನ್ನು ಈ ಹಂತದಿಂದಲೇ ಬಲವಾಗಿ ತುಂಬಬೇಕು.ಕ್ರೀಡೆ,ಕಲೆ,ಸಾಹಿತ್ಯದ ಅಭಿರುಚಿಗಳಿಗೆ ಅವರನ್ನು ಕರೆತರಬೇಕು ಇಲ್ಲವಾದರೆ ಅದೆಷ್ಟೋ ಭವಿಷ್ಯದ ಕ್ರೀಡಾಪಟುಗಳು, ನಾಯಕರು,ಸಾಹಿತಿಗಳು ಸಲ್ಲದ ವಿಚಾರಗಳ ದಾಸರಾಗಿ ಸಮಾಜಕ್ಕೆ ಬಹುದೊಡ್ಡ ನಷ್ಟವುಂಟಗಾಗುತ್ತದೆ.ಈ ಹಂತದಲ್ಲಿ ನಾವು ಯಾವ ವಿಚಾರದ ಬೀಜವನ್ನು ಅವರಲ್ಲಿ ಬಿತ್ತುತ್ತಿವೋ ಅದರ ಫಲ ದುಪ್ಪಟ್ಟು ಸಿಗುತ್ತದೆ.

ಬಿತ್ತಿದ ಬೀಜಕ್ಕೆ
ಇಂದಲ್ಲ ನಾಳೆ
ಫಲವುಂಟು
ಸುವಿಚಾರಗಳ
ನೀರೆಯೆರೆಯಿರಿ
ಪೋಷಿಸಿರಿ
ಫಲ ಪಡೆಯಿರಿ”.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version