ದಿನದ ಸುದ್ದಿ

ಹಂಪಿ ಮೃಗಾಲಯದಲ್ಲಿ ಸೂಕ್ತ ನಿರ್ವಹಣೆ ಮತ್ತು ಮೂಲಸೌಕರ್ಯಗಳದ್ದೇ ಕೊರತೆ : ಪ್ರವಾಸಿಗರ ಆರೋಪ

Published

on

  • ವರದಿ : ಗಿರೀಶ್ ಕುಮಾರ್ ಗೌಡ, ಬಳ್ಳಾರಿ

ಸುದ್ದಿದಿನ,ಹೊಸಪೇಟೆ: ಉತ್ತರ ಕರ್ನಾಟಕದ ಏಕೈಕ ಸಫಾರಿ ಮೃಗಾಲಯ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್(ಹಂಪಿ ಜೂ) ಆಗಿದ್ದು, ಇಲ್ಲಿ ಸೂಕ್ತ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ ಎನ್ನುವ ಆರೋಪ ಪ್ರವಾಸಿಗರಿಂದ ಕೇಳಿ ಬಂದಿದೆ.

ಹಂಪಿ ಮೃಗಾಲಯ ವೀಕ್ಷಿಸಲು ಬರುವ ಪ್ರವಾಸಿಗರಿಗೆ
ಸೂಕ್ತ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಉಪಹಾರ ಗೃಹಗಳ ವ್ಯವಸ್ಥೆ ಇರುವುದಿಲ್ಲ. ಇಲ್ಲಿನ ಸಫಾರಿ ವೀಕ್ಷಿಸಲು ಕೌಂಟರ್ ನಲ್ಲಿ ಟಿಕೆಟ್ ಪಡೆಯಬೇಕಾದರೆ ಪ್ರವಾಸಿಗರು ಬಿಸಿಲಿನಲ್ಲಿ ಗಂಟೆಗಟ್ಟಲೇ ಬಸ್ಸುಗಳಿಗೆ ಕಾಯಬೇಕಾದ ಪರಿಸ್ಥಿತಿ ಇದೆ.

ವೀಕೆಂಡ್ ರಜೆಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಭೇಟಿ ನೀಡುವ ಪ್ರವಾಸಿಗರಿಗೆ
ಬಸ್ ನಿಲ್ದಾಣದಲ್ಲಿ ಯಾವುದೇ ಮೇಲ್ಚಾವಣಿಯ ವ್ಯವಸ್ಥೆ(ನೆರಳು) ವ್ಯವಸ್ಥೆ ಮಾಡಿಲ್ಲ. ಮಕ್ಕಳು, ವೃದ್ದರು ಮತ್ತು ತಾಯಂದಿರು ಬಿಸಿಲಿನಲ್ಲಿಯೇ ನಿಂತುಕೊಳ್ಳಬೇಕು. ಕುಳಿತುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಆಸನದ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ಪ್ರವಾಸಿಗರು ಮೃಗಾಲಯದ ಸಿಬ್ಬಂದಿಗಳಿಗೆ ನಿತ್ಯ ಹಿಡಿಶಾಪ ಹಾಕುವಂತಾಗಿದೆ.

ಸಫಾರಿ ವೀಕ್ಷಣೆಗೆ ಪ್ರವೇಶ ಧರ ಕಡಿಮೆ ಮಾಡಬೇಕು. ಪ್ರವಾಸಿಗರ ಸುರಕ್ಷತೆಗಾಗಿ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಿದರೆ ಪ್ರವಾಸಿಗರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಇಲ್ಲಿಗೆ ಭೇಟಿ ನೀಡಿದ ಬೆಂಗಳೂರಿನ ಪ್ರವಾಸಿಗ ಅಂಬರೀಶ ಹೇಳಿದರು.

ಮೃಗಾಲಯದಲ್ಲಿ ಸಫಾರಿ: ಸಾಮಾನ್ಯವಾಗಿ ಮೃಗಾಲಯದಲ್ಲಿ ಸಫಾರಿ ಇರುವುದಿಲ್ಲ. ಸಫಾರಿ ವ್ಯವಸ್ಥೆ ಇದ್ದರೆ ಅದನ್ನು ವನ್ಯಜೀವಿ ಧಾಮ ಎಂದು ಕರೆಯಲಾಗುತ್ತದೆ. ಹಂಪಿ ಮೃಗಾಲಯದಲ್ಲಿ ಈ ಎರಡೂ ವ್ಯವಸ್ಥೆಗಳು ಒಂದೇ ಕಡೆ ಇವೆ. ಮೊದಲು ಸಫಾರಿಯಲ್ಲಿ ಸುತ್ತಿದ ಬಳಿಕ, ಮೃಗಾಲಯಕ್ಕೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ‘ಅಟಲ್‌ ಬಿಹಾರಿ ವಾಜಪೇಯಿ ವನ್ಯಜೀವಿ ಧಾಮ’ ಎಂಬ ಹೆಸರಿನ ಈ ಪ್ರವಾಸಿ ತಾಣವನ್ನು ಹಂಪಿ ಮೃಗಾಲಯ ಎಂದೂ ಕರೆಯಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಈ ಮೃಗಾಲಯಕ್ಕೆ
ಸರಿಯಾದ ನಿರ್ವಹಣೆ ಮತ್ತು ಮೇಲ್ವಿಚಾರಣೆ ಮಾಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

  • ಹಂಪಿ ಮೃಗಾಲಯಕ್ಕೆ ಪಾರ್ಕಿಂಗ್ ವ್ಯವಸ್ಥೆ, ಕುಳಿತುಕೊಳ್ಳಲು ಆಸನ, ನೆರಳಿನ ವ್ಯವಸ್ಥೆ, ಪ್ರವಾಸಿಗರ ಸುರಕ್ಷತೆಗಾಗಿ ಸಿಸಿ ಟಿವಿ ಕ್ಯಾಮರಾ ವ್ಯವಸ್ಥೆಗೆ ಮೇಲಾಧಿಕಾರಿಗಳಿಗೆ ಪ್ರೊಪೋಸಲ್ ಕಳುಹಿಸಲಾಗಿದೆ. ಅವರು ಅಪ್ರೋವಲ್ ಮಾಡಿದ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಏಪ್ರಿಲ್ ಅಥವಾ ಮೇ ತಿಂಗಳೊಳಗೆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲಾಗುವುದು.
    ಈಗಾಗಲೇ ಉಪಹಾರ ಗೃಹ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ.

| ರಾಜೇಶನಾಯ್ಕ್, ಕಾರ್ಯನಿರ್ವಾಹಕ ನಿರ್ದೇಶಕರು, ಹಾಗು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಹಂಪಿ ಮೃಗಾಲಯ, ಕಮಲಾಪುರ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version