ಬಹಿರಂಗ
ಹೊಡಿಬಡಿ ಗುಂಪು ನೆರೆದಲ್ಲೆಲ್ಲ ‘ಹಿಟ್ಲರನ ಜರ್ಮನಿಯೇ’
-ಮೂಲ : ರವೀಶ್ ಕುಮಾರ್
ಅನುವಾದ : ಹರ್ಷಕುಮಾರ್ ಕುಗ್ವೆ
- ಜರ್ಮನಿಯಲ್ಲಿ ಸಂದು ಹೋದ ಎಲ್ಲಾ ರಾತ್ರಿಗಳಲ್ಲಿ 1938ರ ನವೆಂಬರ್9 ಮತ್ತು 10ರ ನಡುವಿನ ರಾತ್ರಿ ಭಯಂಕರವಾಗಿತ್ತು. ’ಸ್ಪಟಿಕ ರಾತ್ರಿ’ ಅಥವಾ ‘ಗಾಜಿನ ಚೂರುಗಳ ರಾತ್ರಿ’ ಎಂದು ಅದನ್ನು ಕರೆಯಲಾಗುತ್ತದೆ. ಯಹೂದಿಗಳನ್ನು ದಮನಿಸುವ, ಅವರನ್ನು ಸಾಮೂಹಿಕ ಹತ್ಯೆಗೈಯುವ, ಅವರ ಆಸ್ತಿಪಾಸ್ತಿಗಳೆಲ್ಲವನ್ನೂ ದೋಚುವ, ಅವರನ್ನು ದೇಶದಿಂದಲೇ ಹೊರ ಓಡಿಸುವ ವ್ಯವಸ್ಥಿತವಾದ ಕಾರ್ಯಯೋಜನೆಯು ಪೂರ್ಣಪ್ರಮಾಣದಲ್ಲಿ ಚಾಲ್ತಿಗೆ ಬಂದ ರಾತ್ರಿ ಅದಾಗಿತ್ತು.
ಆ ರಾತ್ರಿ ಗೊಬೆಲ್ಸ್ ತನ್ನ ಡೈರಿಯಲ್ಲಿ ಹೀಗೆ ಬರೆದ. “ಹಳೆಯ ಪುರಸಭಾ ಭವನದಲ್ಲಿ ನಾನು ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದೆ. ಅಲ್ಲಿ ದೊಡ್ಡ ಜನಜಂಗುಳಿ ನೆರೆದಿತ್ತು. ಅವರಿಗೆಲ್ಲಾ ನಾನು ಹಿಟ್ಲರನ ಆಲೋಚನೆಗಳೇನು ಎಂಬುದನ್ನು ವಿವರಿಸಿದೆ. ಯಹೂದಿಗಳ ವಿರುದ್ಧ ಪ್ರತಿಭಟನೆಗಳು ಜಾರಿಯಲ್ಲಿರಬೇಕಲ್ಲದೇ ಪೊಲೀಸರು ಈ ಸಂದರ್ಭದಲ್ಲಿ ಸುಮ್ಮನಿರಬೇಕು; ಯಹೂದಿಗಳು ಜನರ ಆಕ್ರೋಶಕ್ಕೆ ತುತ್ತಾಗಲಿ ಎಂಬುದು ಅವರ ತೀರ್ಮಾನವಾಗಿದೆ.
ಪೊಲೀಸ್ ಮತ್ತು ಪಕ್ಷಕ್ಕೆ ನಾನು ತಕ್ಷಣದಲ್ಲಿ ಆದೇಶ ರವಾನಿಸಿದೆ. ಪಕ್ಷದ ಕಾರ್ಯಕ್ರಮದಲ್ಲಿ ಸ್ವಲ್ಪ ಹೊತ್ತು ಮಾತಾಡಿದೆ. ನನ್ನ ಮಾತಿಗೆ ಬಹಳ ಮೆಚ್ಚುಗೆಯ ಕರತಾಡನ ಬಂತು, ಕೂಡಲೇ ಫೋನ್ ಎತ್ತಿಕೊಂಡೆ. ’ಈಗ ಜನರು ಕೆಲಸಕ್ಕೆ ಹೊರಡಲಿ’ ಎಂದು ಸೂಚನೆ ಕೊಟ್ಟೆ” ಹೊಡಿಬಡಿ ಗುಂಪುಗಳಿಗೆ ಮುಕ್ತ ಅವಕಾಶ ನೀಡಲಾಯಿತು.
ಪೊಲೀಸ್ ಪಡೆಗೆ ಬದಿಗಿರಲು ಆದೇಶ ನೀಡಲಾಗಿತ್ತು ಮಾತ್ರವಲ್ಲ ಅದನ್ನು- ಹತ್ಯಾಕಾಂಡದ ನಿರ್ದೇಶಕ ಸಂಸ್ಥೆಯನ್ನಾಗಿ ಪರಿವರ್ತಿಸಿ ಯಹೂದಿಗಳ ಮಾಲೀಕತ್ವದ ಅಂಗಡಿಗಳಿಗೆ ಬೆಂಕಿ ಹಚ್ಚುವಾಗ ಮಾಲೀಕರನ್ನು ’ರಕ್ಷಣಾತ್ಮಕ ಬಂಧನ’ದಲ್ಲಿರಿಸಿ ಗುಂಪುಗಳು ತಮ್ಮ ದಾಳಿಯನ್ನು ಸರಾಗವಾಗಿ ನಡೆಸಲು ಅವಕಾಶ ಮಾಡಿಕೊಡಲಾಯಿತು.
’ಹೊತ್ತಿ ಉರಿಯುತ್ತಿರುವ ಯಹೂದಿಗಳ ಮನೆಗಳ ಬಗ್ಗೆ ಗಮನ ಹರಿಸಕೂಡದು, ಪಕ್ಕದ ಯಹೂದಿಯೇತರ ಮನೆಗಳ ಬೆಂಕಿಯನ್ನಷ್ಟೇ ಆರಿಸಬೇಕು’ಎಂದು ಅಗ್ನಿಶಾಮಕ ದಳಕ್ಕೆ ಆಜ್ಞೆ ನೀಡಲಾಗಿತ್ತು. ಹೀಗೆ ಮಾಡುವ ಮೂಲಕ ಆರ್ಯಮೂಲದ ಜನರ ಆಸ್ತಿಪಾಸ್ತಿಗಳನ್ನು ರಕ್ಷಿಸಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು.
ಎಲ್ಲವೂ ಹೇಗೆ ಏರ್ಪಾಡಾಗಿತ್ತು ಎಂದರೆ ಜನರೇ ಬಹಳ ಸಹಜವಾಗಿ ಸ್ವಯಂಪ್ರೇರಿತ ಆಕ್ರೋಶದಿಂದಲೇ ಕೃತ್ಯಗಳನ್ನು ನಡೆಸಿದಂತೆ ಕಾಣಬೇಕೆಂಬಷ್ಟರ ಮಟ್ಟಿಗೆ. ಈ ಪ್ರಕಾರ ಸರ್ಕಾರ ಅಥವಾ ಪೊಲೀಸ್ ಪಡೆಗಳ ಮೇಲೆ ಯಾವ ಆರೋಪವನ್ನೂ ಹೊರಿಸಲಾಗದಂತಹ ರೀತಿಯಲ್ಲಿ ದೋಂಬಿ ಹಿಂಸೆಗಳು ನಡೆದವು.
’ಜನರ ಸ್ವಪ್ರೇರಿತ ಆಕ್ರೋಶ’ದ ಹೆಸರಿನಲ್ಲಿ ನಡೆಸಿದ ಆ ಆಟ ಇತಿಹಾಸದ ಮುಖಕ್ಕೆ ರಕ್ತವನ್ನು ಬಳಿಯಿತು. ಆ ನೆತ್ತರ ಕಲೆಯನ್ನು ಇದುವರೆಗೂ ತೊಳೆಯಲು ಸಾಧ್ಯವಾಗಿಲ್ಲ. ಯೂರೋಪಿನಲ್ಲಿ ಆಧುನಿಕವಾದವು ಯೌವನಾವಸ್ಥೆಯಲ್ಲಿದ್ದ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯು ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದ ಹೊತ್ತಿನಲ್ಲೇ ಇದೆಲ್ಲವೂ ನಡೆದಿತ್ತು.
ಆ ರಾತ್ರಿ ನೂರಾರು ಯಹೂದಿಗಳ ಹತ್ಯೆಯಾಯಿತು. ಮಹಿಳೆಯರು, ಮಕ್ಕಳು ತೀವ್ರವಾಗಿ ಗಾಯಗೊಂಡರು. ಹತ್ತಿರ ಹತ್ತಿರ ನೂರರಷ್ಟು ಪೂಜಾಸ್ಥಳಗಳನ್ನು ನಾಶ ಮಾಡಲಾಯಿತು. ನವೆಂಬರ್ 9ರ ರಾತ್ರಿ ಮ್ಯೂನಿಚ್ನಲ್ಲಿದ್ದ ಯಹೂದ್ಯರ ವಿಖ್ಯಾತ ಆರಾಧನಾ ಸ್ಥಳಕ್ಕೆ (ಸಿನಗಾಗ್) ನಾಜಿ ಸೇನೆ ಬೆಂಕಿ ಹಚ್ಚಿತು. “ಅದು ಟ್ರಾಫಿಕ್ ಸಮಸ್ಯೆ ತಂದೊಡ್ಡುತ್ತಿತ್ತು” ಎಂಬ ಕುಂಟುನೆಪ ಹೇಳಲಾಯ್ತು. ಬರ್ಲಿನ್ ಒಂದರಲ್ಲೇ ಇಂತಹ ಹದಿನೈದು ಪೂಜಾಮಂದಿರಗಳನ್ನು ಸುಟ್ಟು ನಾಶಪಡಿಸಲಾಯ್ತು. ಯಹೂದಿ ಗೋರಿಗಳ ಮೇಲೂ ದಾಳಿ ನಡೆಸಲಾಯಿತು.
ಲೆಕ್ಕವಿಲ್ಲದಷ್ಟು ಅಪಾರ್ಟ್ಮೆಂಟುಗಳು ಕಲ್ಲು ಮಣ್ಣಿನ ಅವಶೇಷಗಳಾಗಿಹೋದವು. ಸಾವಿರಾರು ಅಂಗಡಿ ಮುಗ್ಗಟ್ಟುಗಳು ಬೆಂಕಿಗಾಹುತಿಯಾದವು. ಜರ್ಮನಿಯ ದೊಡ್ಡ ನಗರಗಳಲ್ಲಿನ ಕಿರುರಸ್ತೆಗಳೆಲ್ಲಾ ಒಡೆದ ಗಾಜುಗಳಿಂದ ತುಂಬಿಹೋದವು. ಅಂಗಡಿಗಳ ಎದುರಿನ ಬೀದಿಗಳೂ ಹೀಗೇ ಆಗಿದ್ದವು. ಯಹೂದಿಗಳ ಸ್ಮೃತಿಗೆ ಸಂಬಂಧಿಸಿದ ಪ್ರತಿಯೊಂದನ್ನೂ ಕೆಡವಲಾಯ್ತು, ನಾಶಪಡಿಸಲಾಯ್ತು. ಇದಕ್ಕೆ ಅವರ ಖಾಸಗಿ ಭಾವಚಿತ್ರಗಳೂ ಹೊರತಾಗಿರಲಿಲ್ಲ.
ಹಲವಾರು ಪುರುಷರು, ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡರೆ ಎಷ್ಟೋ ಜನರು ಗಾಯಗೊಂಡು ನಂತರ ತೀರಿಕೊಂಡರು. ಪೊಲೀಸರು 30,000 ಯಹೂದಿಗಳನ್ನು ಗಡೀಪಾರು ಮಾಡಿದರು ಅಥವಾ ಯಾತನಾ ಶಿಬಿರಗಳಿಗೆ ದಬ್ಬಿದರು. ಅಲ್ಲಿ ಸಾಕಷ್ಟು ಜಾಗವಿರಲಿಲ್ಲವಾದ್ದರಿಂದ ಕೇವಲ ಪುರುಷರು ಮತ್ತು ಶ್ರೀಮಂತ ಯಹೂದಿಗಳನ್ನು ಮಾತ್ರ ಹೊರಗೆ ಸಾಗಿಸಲಾಯಿತು.
ಆ ರಾತ್ರಿ ತನ್ನ ಹೊಟೆಲ್ ಕೊಠಡಿಗೆ ಮರಳಿದ ಗೊಬೆಲ್ಸ್ಗೆ ಕಿಟಕಿಗಳು ಮುರಿದು ಬೀಳುವ ಸದ್ದು ಕೇಳುತ್ತಿತ್ತು. ಆಗವನು ತನ್ನ ದಿನಚರಿಯಲ್ಲಿ ಉದ್ಘರಿಸಿದ್ದು ಹೀಗೆ: “ಎಕ್ಸೆಲೆಂಟ್ ಕೆಲಸ! ಅದ್ಭುತ ಕೆಲಸ! ಒಬ್ಬ ಜರ್ಮನ್ ರಾಯಭಾರಿಯನ್ನು ಹತ್ಯೆ ಮಾಡುವುದು ಎಂದರೆ ಏನು ಎಂಬುದನ್ನು ಜರ್ಮನ್ ಜನರು ಯಾವತ್ತೂ ನೆನಪಿಟ್ಟುಕೊಂಡಿರುತ್ತಾರೆ” ಎಂದೂ ಅವನು ಅದರಲ್ಲಿ ಬರೆದ.
ಅಧಿಕಾರಿಗಳಿಂದ ಆದೇಶವಾಗದ ಎಷ್ಟೋ ಕೃತ್ಯಗಳು ಸಹ ಅಂದು ನಡೆದವು. ಆದರೆ ಅವುಗಳನ್ನು ನಡೆಸಿದ ಕುರಿತು ಯಾರೂ ಏನೂ ಹೇಳಿಕೊಳ್ಳಲೂ ಇಲ್ಲ. ಉಸಿರು ಕಟ್ಟಿಸುವ ಚಾದರದಂತೆ ಇಡೀ ನೆಲದಲ್ಲಿ ಸ್ಮಶಾನಮೌನ ಆವರಿಸಿತ್ತು. ಪತ್ರಿಕೆಗಳನ್ನು ತಮಗೆ ಬೇಕಾದಂತೆ ನಿರ್ವಹಿಸುವ ಮೂಲಕ ಇದನ್ನು ಸಾಧ್ಯವಾಗಿಸಲಾಗಿತ್ತು.
ಹಿಟ್ಲರ್ ಎಲ್ಲಿಯೇ ಹೋಗಲಿ ಅಲ್ಲಿ ಯಹೂದಿಗಳ ಮೇಲೆ ನಡೆಯುತ್ತಿರುವ ಹಿಂಸೆಯ ಕುರಿತು ಯಾವುದೇ ಪ್ರಶ್ನೆ ಕೇಳದಂತೆ ಒಪ್ಪಂದಕ್ಕೆ ಮಾಧ್ಯಮಗಳನ್ನು ಕಟ್ಟಿಹಾಕಲಾಗಿತ್ತು. ಜಗತ್ತಿನಲ್ಲಿ ಹಿಟ್ಲರನ ಇಮೇಜಿಗೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಅವನು ಮೌನವಹಿಸಿದ್ದ.
ಜರ್ಮನಿಯ ಹೊಡೆಬಡಿ ಗುಂಪುಗಳು ಹಿಟ್ಲರನನ್ನು ಎತ್ತಿ ಮೆರೆಸಿದವು. ಅವನ ಅಗತ್ಯಗಳಿಗೆ ತಕ್ಕಂತೆ ಆ ಗುಂಪುಗಳು ರೂಪುಗೊಂಡಿದ್ದವು.
ಈ ಗುಂಪುಗಳಿಂದ ಪ್ರೇರಿತಗೊಂಡ ಹಿಟ್ಲರ್ ಒಂದು ವಿಶೇಷ ಬಗೆಯ ಹೊಸ ಕಾನೂನು ಹೊರಡಿಸಿದ. – ತಾವು ಅನುಭವಿಸಿರುವ ಹಾನಿ, ನಷ್ಟಗಳಿಗೆ ಯಹೂದಿಗಳು ತಾವೇ ನಷ್ಟ ಭರ್ತಿ ಮಾಡಿಕೊಡಬೇಕು. ತಾವೇ ತಮ್ಮ ಅಂಗಡಿ ಮನೆಗಳಿಗೆ ಬೆಂಕಿ ಹಚ್ಚಿಕೊಂಡರೇನೋ ಎನ್ನುವಂತೆ ಈ ಕಾನೂನನ್ನು ಜಾರಿಗೊಳಿಸಿದ್ದ. ಹೊಡಿಬಡಿ ಗುಂಪುಗಳ ಸಾಮ್ರಾಜ್ಯದಲ್ಲಿ ಕೇಡಿನ ಪ್ರತಿಪಾದನೆಯೇ ಜನರ ಹೃದಯ ಮತ್ತು ಮನಸುಗಳನ್ನು ಆಳಲಾರಂಭಿಸುತ್ತವೆ.
(ರವೀಶ್ ಕುಮಾರ್ ಅವರ ಫ್ರೀ ವಾಯ್ಸ್ ಕೃತಿಯ ಅನುವಾದ “ಮಾತಿಗೆ ಏನು ಕಡಿಮೆ” ಪುಸ್ತಕದ ‘ಹೊಡಿಬಡಿ ಗುಂಪು ನೆರೆದಲ್ಲೆಲ್ಲ ಹಿಟ್ಲರನ ಜರ್ಮನಿಯೇ’ ಎಂಬ ಅಧ್ಯಾಯದಿಂದ ಆಯ್ದ ಭಾಗ)
ಸುದ್ದಿದಿನ.ಕಾಂ|ವಾಟ್ಸಾಪ್|9980346243