ರಾಜಕೀಯ
ವಿಶ್ವಾಸಮತ ಗೆದ್ದ ಎಚ್.ಡಿ.ಕುಮಾರಸ್ವಾಮಿ
ಸುದ್ದಿದಿನ,ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತವನ್ನು ಗೆದ್ದಿದ್ದಾರೆ. ಆದ್ದರಿಂದ ಸಧ್ಯದ ಮಟ್ಟಿಗೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಭವಿಷ್ಯವು ನೆಲೆ ಕಂಡುಕೊಂಡಂತಾಗಿದೆ.
ಶುಕ್ರವಾರ (ಇಂದು) ಮಧ್ಯಾಹ್ನ 12:15 ಕ್ಕೆ ವಿಧಾನಸಭೆಯ ಅಧಿವೇಶನವು ಆರಂಭವಾಯಿತು. ಮೊದಲು ಸ್ಪೀಕರ್ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಅವರು ಅವಿರೋಧವಾಗಿ ಮುಂದಿನ ಸ್ಪೀಕರ್ ಆಗಿ ಆಯ್ಕೆಯಾದರು.
ಆನಂತರ ನೂತನವಾಗಿ ಆಯ್ಕೆಯಾದ ಸ್ಪೀಕರ್ ಅವರಿಗೆ ನಾಯಕರುಗಳು ಅಭಿನಂದನೆ ಸಲ್ಲಿಸಿದರು. ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತಯಾಚನೆ ಪ್ರಸ್ತಾಪವನ್ನು ಮಂಡಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಮತ್ತವರ ಪಕ್ಷ ಬಿಜೆಪಿಯ ಮೇಲೆ ಟೀಕೆಯ ಸುರಿಮಳೆಗೈದರು. ಹಾಗೂ ತಮ್ಮ ಹಳೆಯ ರಾಜಕೀಯ ದಿನಗಳನ್ನು ಮೆಲುಕುಹಾಕಿದರು.
ನಂತರ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಬಳಿಜ ಸದನವನ್ನು ಬಹಿಷ್ಕರಿಸಿದರು.
ಇದಾದ ನಂತರ ವಿಶ್ವಾಸ ಮತ ಪ್ರಸ್ತಾಪವನ್ನು ಸ್ಪೀಕರ್ ರಮೇಶ್ ಕುಮಾರ್ ಮತಕ್ಕೆ ಹಾಕಿದರು. ಈ ಸಂದರ್ಭದಲ್ಲಿ ವಿಶ್ವಾಸಮತ ಪ್ರಸ್ತಾಪದ ಪರವಿರುವವರು ಹೌದು ಎಂದರು. ನಂತರ ಒಮ್ಮೆಲೆ ಎಲ್ಲರೂ ಹೌದು ಎಂದು ಹೇಳುದರು. ಯರೂ ವಿಶ್ವಾಸಮತವಿಲ್ಲ ಎಂದು ಹೇಳದ ಕಾರಣ ಪ್ರಸ್ತಾಪವು ಹೌದು ಎನ್ನುವವರ ಪರವಾಗಿದ್ದು, ಈ ಪ್ರಸ್ತಾಪವು ಅಂಗೀಕರಿಸಲ್ಪಟ್ಟಿದೆ ಎಂದು ಘೋಷಿಸಿದರು.
ಆದ್ದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸರ್ಕಾರವು ಸದನದಲ್ಲಿ ವಿಶ್ವಾಸಮತ ಗೆದ್ದುಕೊಂಡಿದೆ.