ದಿನದ ಸುದ್ದಿ

ಧಾರವಾಡ | ಸಂತ್ರಸ್ತ ಸೇರಿ ರಕ್ಷಣೆಗೆ ತೆರಳಿದ್ದ ಉಪವಿಭಾಗಾಧಿಕಾರಿ, ಪಿ.ಎಸ್.ಐ ಸೇರಿದಂತೆ ಎಲ್ಲಾ 7 ಜನರ ರಕ್ಷಣೆ

Published

on

ಸುದ್ದಿದಿನ,ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಿನ್ನೆ ಮಂಗಳವಾರ ನವಲಗುಂದ ತಾಲ್ಲೂಕಿನ ತುಪ್ಪರಿಹಳ್ಳಕ್ಕೆ ಶಿರಕೋಳದಲ್ಲಿ ಸಿಲುಕಿದ್ದ ಬಸವಣ್ಣೆಪ್ಪ ಶಂಕ್ರಪ್ಪ ಹೆಬಸೂರ ಅವರನ್ನು ರಕ್ಷಿಸಲು ನಾಲ್ಕು ಜನ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ತೆರಳಿದ್ದ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಪಿ.ಎಸ್.ಐ ಜಯಪಾಲ ಪಾಟೀಲ್ ಅವರು ಸಂಚರಿಸುತ್ತಿದ್ದ ಬೋಟ್‌ನ ಇಂಜಿನ್ ಕಲ್ಲಿಗೆ ಸಿಲುಕಿದ್ದರಿಂದ ರಾತ್ರಿಯಿಡೀ ಹಳ್ಳದ ಪ್ರವಾಹದ ಮಧ್ಯೆ ನಡುಗಡ್ಡೆಯೊಂದರಲ್ಲಿ ಕಾಲ ಕಳೆಯಬೇಕಾಯಿತು.

ಬೆಳಗಿನ ಜಾವ ಮೂರು ಗಂಟೆಗೆ ಮುಳುಗು ತಜ್ಞರು ಅವರನ್ನು ತಲುಪಲು ಯತ್ನಿಸಿದರಾದರೂ ಉಪವಿಭಾಗಾಧಿಕಾರಿ ಹಾಗೂ ಪಿಎಸ್‌ಐ ಅವರು ಮುಳುಗು ತಜ್ಞರಿಗೆ ಆ ಸಮಯದಲ್ಲಿ ಬರುವುದು ಬೇಡ ಎಂದು ಸೂಚನೆ ನೀಡಿದ್ದರಿಂದ ಅವರು ವಾಪಸು ಬಂದರು.

ಇಂದು ಬುಧವಾರ ಆಗಸ್ಟ 7 ರಂದು ಬೆಳಗಿನ ಜಾವ 06 ಗಂಟೆಗೆ ಬಾಗಲಕೋಟದಿಂದ ಬಂದ ಮತ್ತೊಂದು ಬೋಟ್ ಮೂಲಕ ಎಲ್ಲಾ ಏಳು ಜನರನ್ನು ಹನಸಿ ಗ್ರಾಮದ ಮಾರ್ಗವಾಗಿ ಸುರಕ್ಷಿತವಾಗಿ ಕರೆತರಲಾಯಿತು.

ಜಿಲ್ಲಾಧಿಕಾರಿ ದೀಪಾ ಚೋಳನ್, ಎಸ್.ಪಿ.ಸಂಗೀತ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಆಹಾರ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ತಹಸೀಲ್ದಾರ ನವೀನ ಹುಲ್ಲೂರ ಸೇರಿದಂತೆ ಅನೇಕರು ರಾತ್ರಿಯಿಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version