ದಿನದ ಸುದ್ದಿ
ಶಿವಮೊಗ್ಗ | ಮಳೆಹಾನಿ ಪ್ರದೇಶಗಳ ಪುನರ್ ಅಭಿವೃದ್ಧಿಗೆ ತಂಡ ರಚನೆ
ಸುದ್ದಿದಿನ,ಶಿವಮೊಗ್ಗ : ನಗರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸಂಭವಿಸಿದ ಸಾರ್ವಜನಿಕ ಆಸ್ತಿ ಹಾನಿ, ಪುನರ್ ವಸತಿ ಕಲ್ಪಿಸಲು ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಲು ತಂಡಗಳನ್ನು ರಚಿಸಲಾಗಿದೆ.
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಮತ್ತು ಸೂರು ಕಳೆದುಕೊಂಡವರ ವಿವರಗಳು ಹಾಗೂ ಪರಿಹಾರ ನೀಡುವ ಬಗ್ಗೆ ಮಹಾನಗರ ಪಾಲಿಕೆ ಉಪ ಆಯುಕ್ತರ (ಕಂದಾಯ) ನೇತೃತ್ವದಲ್ಲಿ ತಂಡ (ದೂ.ಸಂ 87620191950) ರಚಿಸಲಾಗಿದೆ.
ರಸ್ತೆ, ಚರಂಡಿ, ಒಳಚರಂಡಿ, ರಾಜ ಕಾಲುವೆ, ಸಾರ್ವಜನಿಕ/ ಪಾಲಿಕೆ ಕಟ್ಟಡಗಳ ದುರಸ್ತಿ, ನಿರ್ಮಾಣ ನಷ್ಟಗಳ ವಿವರಗಳನ್ನು ಅಂದಾಜಿಸಲು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ (ಸಿವಿಲ್), (ದೂ.ಸಂ 7022116800) ತಂಡ ರಚಿಸಲಾಗಿದೆ.
ಹಾನಿಗೊಳಗಾದ ಪ್ರದೇಶಗಳ ವಿದ್ಯುತ್ ಹಾಗೂ ಬೀದಿ ದೀಪಗಳ ದುರಸ್ಥಿ ಬಗ್ಗೆ ಮಹಾನಗರ ಪಾಳಿಕೆ ಕಾರ್ಯಪಾಲಕ ಅಭಿಯಂತರರು (ದೂ.ಸಂ 8762288680) ಇವರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಸಾಂಕ್ರಮಿಕ ರೋಗಗಳು ಹರಡದಂತೆ ಮುಂಜಾಗೃತೆ ಕೈಗೊಳ್ಳಲು ಮಹಾನಗರ ಪಾಲಿಕೆ ಪರಿಸರ ಅಭಿಯಂತರರ (ದೂ.ಸಂ 9902618543) ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಕೆಯುಡಬ್ಲ್ಯೂಎಸ್‍ಡಿಬಿ ಕಾರ್ಯಪಾಲಕ ಅಭಿಯಂತರರ (ದೂ.ಸಂ 94806896730) ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಹಾನಿಯಾಗಿರುವ ಬಗ್ಗೆ ಸಾರ್ವಜನಿಕರು ಈ ತಂಡಗಳಿಗೆ ಮಾಹಿತಿ ನೀಡುವ ಮೂಲಕ ಸಹಕರಿಸುವಂತೆ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತ ಸೋಮಲ್ ಮನವಿ ಮಾಡಿದ್ದಾರೆ.
ಜಾನುವಾರುಗಳ ರಕ್ಷಣೆ
ನಗರದಲ್ಲಿ ಇತ್ತೀಚೆಗೆ ಸುರಿದ ಬಾರಿ ಮಳೆಯಿಂದಾಗಿ ಸಂಭವಿಸಿದ ತುಂಗಾನದಿ ಪ್ರವಾಹದಿಂದ ಗಾಂಧಿ ನಗರ ಬಡಾವಣೆಯ ಸುತ್ತಮುತ್ತ ನೀರು ತುಂಬಿ ಮಹಾವೀರ ಗೋಶಾಲೆಗೆ ನೀರು ನುಗ್ಗಿ 450 ದನ ಕರುಗಳು ತೊಂದರೆಗೊಳಗಾಗಿದ್ದು ಸೂಕ್ತ ಕ್ರಮ ಕೈಗೊಂಡು ರಕ್ಷಿಸಲಾಯಿತು.
ಸ್ಥಳದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದ್ದರಿಂದ ತಕ್ಷಣ ರಕ್ಷಣಾಕಾರ್ಯ ಕೈಗೊಳ್ಳಲು ಸಾಧ್ಯವಾಗಲಿಲ್ಲ. ನಂತರ ಸಿವಿಲ್ ಡಿಫೆನ್ಸ್ ಬೋಟ್ ಸಂಸ್ಥೆಯವರು ಎರಡು ಬೋಟ್‍ಗಳ ಮೂಲಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ದನಕರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.
ಈ ಅನಾಹುತದಿಂದಾಗಿ 17 ಸಣ್ಣ ಕರುಗಳು ಮೃತಪಟ್ಟಿದ್ದು ಅವುಗಳನ್ನು ಹೂಳಲಾಗಿದೆ. ಹಾಗೂ ಅಸ್ವಸ್ಥ ದನಕರುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತ ಸೋಮಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243