ದಿನದ ಸುದ್ದಿ

ಸಹಾಯ ಹಸ್ತದ ನಿರೀಕ್ಷೆಯಲ್ಲಿ ಈ‌ ಉತ್ಸಾಹಿ ದಿವ್ಯಾಂಗ ಯುವ ಪ್ರತಿಭೆ

Published

on

  • ಗಂಗಾಧರ ಬಿ ಎಲ್ ನಿಟ್ಟೂರ್

ನೆಯಲ್ಲಿ ಎಲ್ಲರ ಮುದ್ದಿನ ಕಣ್ಮಣಿಯಾಗಿದ್ದ ಆತ ಎಲ್ಲಾ ಮಕ್ಕಳಂತೆ ಉಂಡುಟ್ಟು, ಆಯಾಗಿ ಓಡಾಡಿಕೊಂಡಿದ್ದ. 3 – 4 ವರ್ಷದವನಿದ್ದಾಗ ಒಮ್ಮೆ ಕಾಡಿದ ಅತಿಸಾರ ಭೇದಿ ಮತ್ತು ಜ್ವರಕ್ಕೆಂದು ಕೊಡಿಸಿದ ಚಿಕಿತ್ಸೆ ಓವರ್ ಡೋಸ್ ಆಗಿ ಕಾಲಿನ ಸ್ವಾಧೀನ ಕಿತ್ತುಕೊಂಡಿದ್ದಲ್ಲದೆ ದೃಷ್ಟಿಯನ್ನೂ ಪ್ರತಿಶತಃ ಮಂದಗೊಳಿಸಿ ಮೂಲೆ ಹಿಡಿಸಿ ಬಿಟ್ಟಿತು. ಆದರೂ ಅವನೊಳಗಿನ ಅದಮ್ಯ ಉತ್ಸಾಹವನ್ನು ಮಾತ್ರ ಕಸಿದುಕೊಳ್ಳಲಾಗಲಿಲ್ಲ ಆ ದುರ್ವಿಧಿಗೆ. ಆತನ ಜೀವನೋತ್ಸಾಹ, ಪಾಸಿಟಿವ್ ಎನರ್ಜಿಯನ್ನು ಕಂಡ ಯಾರಿಗಾದರೂ ಖಂಡಿತ ಅಚ್ಚರಿಯಾಗುತ್ತದೆ.

ಹುಟ್ಟು ಅನಕ್ಷರಸ್ಥನಾದ ಆತನಿಗೆ ಹಾಡುವುದೆಂದರೆ ಪಂಚಪ್ರಾಣ. ಟಿವಿ, ಮೊಬೈಲ್ ನಲ್ಲಿ ಒಮ್ಮೆ ಕೇಳಿದ ಹಾಡನ್ನು ಸೀದಾ ಮಸ್ತಕಕ್ಕೇರಿಸಿಕೊಂಡು ಬಿಡುತ್ತಾನೆ. ಕವ್ವಾಲಿ, ಶರೀಫರ ತತ್ವಪದಗಳನ್ನು ಹಾಡುವುದೆಂದರೆ ಬಲು ಪ್ರೀತಿ. ಹಿಂದಿ ಮತ್ತು ಕನ್ನಡ ಸಿನಿಮಾ ಗೀತೆಗಳು ಸೇರಿದಂತೆ ನೂರಾರು ಹಾಡುಗಳ ಜತೆ ಪ್ರಸಿದ್ಧ ನಟರುಗಳ ಹಲವಾರು ಡೈಲಾಗ್ ಗಳು ಸಹ ಬಾಯಿಪಾಠವಾಗಿವೆ. ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡದಿದ್ದರೂ ಯಾವುದೇ ಗೀತೆಗಳಿಗೆ ಭಾವತುಂಬಿ ಹಾಡುವ ಕಲೆ ಆತನಿಗೆ ಒಲಿದಿದೆ.

ಇಂತಹ ವಿಶೇಷ ವಿಶಿಷ್ಟ ದಿವ್ಯಾಂಗ ಪ್ರತಿಭೆಯ ಹೆಸರು ಕೆ. ಮೊಹಮ್ಮದ್ ಬಾಷಾ. ದಾವಣಗೆರೆ ನಗರದ ನಿಟುವಳ್ಳಿ ಹೊಸ ಬಡಾವಣೆಯ 2ನೇ ಮೇನ್ 4 ನೇ ಕ್ರಾಸ್ ನಲ್ಲಿ ವಾಸ. ತಂದೆ ದಿವಂಗತ ಬಾಬು ಸಾಬ್, ತಾಯಿ ಎಂ. ಮಾಮಾಜಾನ್. ಬಡತನದ ಬೇಗೆಯಲ್ಲಿ ಬೇಯುತ್ತಿರುವ ಕುಟುಂಬದ ಭಾರವನ್ನು ಮೊಹಮ್ಮದ್ ನ ಅಣ್ಣನಾದ ವಲಿಬಾಷಾರ ಆಟೋ ರಿಕ್ಷಾ ಹೊತ್ತು ಸಾಗುತ್ತಿದೆ.

ನಿರ್ವಹಣೆಯ ತೊಂದರೆ ಹಿನ್ನೆಲೆಯಲ್ಲಿ ದಿವ್ಯಾಂಗನಾದರೂ ಕಲಿಕೆಯಲ್ಲಿ ಅಪಾರ ಶ್ರದ್ಧೆ ಮತ್ತು ಆಸಕ್ತಿ ಹೊಂದಿರುವ ಮೊಹಮ್ಮದ್ ನನ್ನು ಓದು – ಬರಹ ಅಥವಾ ಸಂಗೀತಭ್ಯಾಸಕ್ಕಾಗಿ ಯಾವುದಾದರೂ ಉಚಿತ ವಸತಿ ಶಾಲೆ ಅಥವಾ ಆಶ್ರಮಗಳಿಗಾದರೂ ಕಳಿಸಲು ಸಾಧ್ಯವಾಗಲಿಲ್ಲ ಎಂಬುದು ಮಾಮಾಜಾನ್ ರ ನೋವಿನ ನುಡಿ.

ಪ್ರಸ್ತುತ 27 ರ ಪ್ರಾಯದ ಈ ಉತ್ಸಾಹಿ ಯುವಕನ ಪ್ರತಿಭೆ ಬೆಳಕಿಗೆ ಬರಲು ಸದ್ಯ ವೇದಿಕೆಯನ್ನು ಕಲ್ಪಿಸಿಕೊಡುವವರು, ಆರ್ಥಿಕವಾಗಿ ಸಹಕಾರ ನೀಡುವ ಔದಾರ್ಯ ಉಳ್ಳವರು ಮುಂದೆ ಬಂದು ಗುರುತಿಸಬೇಕಿದೆ. ಈತನ ಸಂಗೀತ ಕಲಿಕೆಯನ್ನು ಕ್ರಮಬದ್ಧ ಮತ್ತು ಶಾಸ್ತ್ರೀಯಗೊಳಿಸಲು ಬಿಡುವಿನ ವೇಳೆಯಲ್ಲಿ ಆತನ ಮನೆಗೆ ಹೋಗಿ ಉಚಿತವಾಗಿ ಸಂಗೀತ ಹೇಳಿಕೊಡುವ ಸಹೃದಯತೆಯನ್ನು ಸಂಗೀತ ಶಿಕ್ಷಕರು ತೋರಬೇಕಿದೆ .

ಸದ್ಯದ ಪರಿಸ್ಥಿತಿಯಲ್ಲಿ ಹೃದಯ ಶ್ರೀಮಂತಿಕೆಯಿಂದ ಯಾರಾದರೂ ತಾವಾಗಿಯೇ ಒಂದಷ್ಟು ಸಹಾಯ ಹಸ್ತ ಚಾಚಿದರೆ ಆತನ ಕುಟುಂಬದ ಆರ್ಥಿಕ ಬವಣೆ ನೀಗಲು ಸಹಾಯವಾಗುವ ಜೊತೆ ಸಂಗೀತ ಕ್ಷೇತ್ರಕ್ಕೆ ಈ ಪ್ರತಿಭೆಯಿಂದ ಸಾಕಷ್ಟು ಕೊಡುಗೆ ಲಭಿಸುವುದರಲ್ಲಿಯೂ ಸಂದೇಹವಿಲ್ಲ.

ದಯವಿಟ್ಟು ಈ ನಂಬರ್ ಗೆ ಸಂಪರ್ಕಿಸಿ ಸಹಾಯ ಹಸ್ತ ಚಾಚಿ : ಮೊಹಮ್ಮದ್ ಬಾಷಾ ನ ಮೊ.ಸಂ : 8088644148

Trending

Exit mobile version