ದಿನದ ಸುದ್ದಿ
ಹಿಮೋಫಿಲಿಯಾ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದಕ್ಕೋಸ್ಕರ ಬಂದಿದ್ದೇನೆ : ನಟ ಚೇತನ್
ಸುದ್ದಿದಿನ,ದಾವಣಗೆರೆ: ಹಿಮೋಫಿಲಿಯಾಕ್ಕೆ ತುತ್ತಾಗಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದಕ್ಕೋಸ್ಕರವೆಂದೇ ನಾನು ಇಲ್ಲಿಗೆ ಬಂದಿದ್ದೇನೆ ಎಂದು ನಟ ಚೇತನ್ ಹೇಳಿದರು.
ನಗರದ ನಿಜಲಿಂಗಪ್ಪ ಬಡಾವಣೆಯ ಹಿಮೋಫಿಲಿಯಾ ಸೊಸೈಟಿಯಲ್ಲಿ ವಿಶ್ವ ಹಿಮೋಫಿಲಿಯಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭವನ್ನು ಹಿಮೋಫಿಲಿಯಾ ಮಕ್ಕಳ ಜೊತೆ ಬಲೂನ್ ಹಾರಿ ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಸಿನಿಮಾ ರಂಗದೊಂದಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾನು ಹಿಮೋಫಿಲಿಯಾ ಜತೆ ದೇವದಾಸಿ ಪದ್ದತಿ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಅವರಲ್ಲಿಯೂ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದೇನೆ. ಇನ್ನು ಸರಕಾರ ಮತ್ತು ಇತರೆ ರಾಜಕೀಯ ಪಕ್ಷಗಳು ಹಿಮೋಫಿಲಿಯಾದ ರೋಗಿಗಳ ಬಗ್ಗೆ ಗಮನ ಹರಿಸಿ ಸಹಾಯ ಮಾಡುವುದರ ಜತೆ ಈ ರೋಗಿಗಳ ಬಗ್ಗೆ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.
ಔಷಧಿ ತೆಗೆದುಕೋಳ್ಳಲು ಜನಸಾಮಾನ್ಯರಿಗೆ ಬಲುಕಷ್ಟ
ವಿಜ್ಞಾನ ಮುಂದುವರೆದಿದ್ದು, ಈ ಕಾಯಿಲೆಗೆ ಔಷಧಿ ಕಂಡುಹಿಡಿಯಲಾಗಿದೆ. ಆದರೆ ಈ ಔಷಧಿಗಳ ಬೆಲೆ ತುಂಬಾ ದುಬಾರಿಯಾಗಿದೆ. ಆದ್ದರಿಂದ ಮಧ್ಯಮ ಮತ್ತು ಬಡಕುಟುಂಬದ ಜನರು ಇಷ್ಟು ಹಣ ಹೊಂದಿಸುವುದು ಕಷ್ಟವಾಗಿದೆ. ಮಾನವೀಯತೆ ನೆಲೆಯಲ್ಲಿ ನಿಂತು ನಾವು ರೋಗಿಗಳನ್ನು ನೋಡಬೇಕಿದೆ. ಕಷ್ಟದಲ್ಲಿರುವವರ ಪರವಾಗಿ ಎಲ್ಲರು ಸಹಾಯಹಸ್ತ ಚಾಚಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಸರಕಾರಗಳು ಕೂಡ ಇಂಥಹ ಸಾಮಾಜಿಕ ಸೇವಾ ಕಾರ್ಯವನ್ನು ಹೆಚ್ಚಾಗಿ ಮಾಡಬೇಕಾದ ಅಗತ್ಯವಿದೆ ಎಂದರು. ಇನ್ನು ಹಿಮೋಫಿಲಿಯಾ ಬಾಧಿತರೊಂದಿಗೆ ಕೆಲ ಸಮಯ ವಿನಿಯೋಗಿಸಿದ ನಟ ಚೇತನ್ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಖ್ಯಾತ ವೈದ್ಯ ಸುರೇಶ್ ಹನಗವಾಡಿ ಮಾತನಾಡಿ, ಏ.17ಕ್ಕೆ ವಿಶ್ವ ಹಿಮೊಫಿಲಿಯಾ ದಿನಾಚರಣೆ ಇದ್ದು, ಇದರ ನಿಮಿತ್ತ ಸಾರ್ವಜನಿಕರ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶ್ವ ಹಿಮೊಫಿಲಿಯಾ ಫೆಡರೇಷನ್‌ನ್ನು 1963ರಲ್ಲಿ ಕೆನಡಾ ದೇಶದ ಮಾಂಟ್ರಿಯಲ್‌ನಲ್ಲಿ ವ್ಯಾಪಾರಿ ಫ್ರಾಂಕ್ ಶಾನ್ ಬೆಲ್ ಹುಟ್ಟು ಹಾಕಿದ್ದು, ಆ ನಿಮಿತ್ತ ಈ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಈ ಕಾಯಿಲೆ 10,000 ಜನರಲ್ಲಿ ಒಬ್ಬರಿಗೆ ಬರಲಿದ್ದು, ರಕ್ತದಲ್ಲಿ ಪ್ರೋಟಿನ್‌ಗಳು ಕಡಿಮೆಯಾದಾಗ ರಕ್ತಸ್ರಾವ ಆಗುತ್ತದೆ. ಈ ಕಾಯಿಲೆ ಜೀವನ ಪರ್ಯಂತ ಇರುತ್ತದೆ. ಇಂಜೆಕ್ಷನ್ ಮೂಲಕ ಪ್ರೋಟಿನ್‌ಗಳನ್ನು ಕೊಡುವ ಮುಖಾಂತರ ಮಾತ್ರ ಇದನ್ನು ನಿಯಂತ್ರಿಸಬಹುದಾಗಿದೆ. ಆದರೆ ಈ ಇಂಜೆಕ್ಷನ್ ಹೆಚ್ಚು ಬೆಲೆವುಳ್ಳದಾಗಿದ್ದು, ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ಸಿಗುತ್ತದೆ.
ದಾವಣಗೆರೆ ಜಿಲ್ಲೆಯಲ್ಲಿ 126 ರೋಗಿಗಳು
27ವರ್ಷದಿಂದ ಹಿಮೋಫಿಲಿಯಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಈ ರೋಗಕ್ಕೆ ತುತ್ತಾಗಿದ್ದಾರೆ. ದಾವಣಗೆರೆಯಲ್ಲಿ 126 ಹಿಮೋಫಿಲಿಯಾ ರೋಗಿಗಳಿದ್ದು, ರಾಜ್ಯದಲ್ಲಿ 6,000 ರೋಗಿಗಳಿದ್ದಾರೆ. ಅದರಲ್ಲಿ 2,000 ರೋಗಿಗಳು ಮಾತ್ರ ನೋಂದಣಿಯಾಗಿದ್ದಾರೆ. ಗುಡ್ಡಗಾಡು ಪ್ರದೇಶ, ಸ್ಲಂ ಸೇರಿದಂತೆ ಇತರೆಡೆ ಈ ಬಗ್ಗೆ ಜಾಗೃತಿ ಇಲ್ಲದ ಕಾರಣ ಇನ್ನೂ 4,000 ರೋಗಿಗಳು ನೋಂದಣಿಯಾಗಿಲ್ಲ.
ಲೋಕಸಭೆಯಲ್ಲಿ ಅಂಗೀಕಾರ: ಇನ್ನು ಶಾಶ್ವತ ವಿಕಲಚೇತನರ ಪಟ್ಟಿಗೆ ಇವರನ್ನು ಸೇರಿಸಲು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಹಿಂದೆ ಸರಕಾರ ಹಿಮೋಫಿಲಿಯಾ ಬಂದವರಿಗೆ ಕೀಲು, ಮೂಳೆ ನೋವು ಬಂದ ನಂತರ ಅವರನ್ನು ವಿಕಲಚೇತನರ ಸರ್ಟೀಫಿಕೇಟ್ ಕೊಡಲಾಗುತ್ತಿತ್ತು. ಆದರೆ ಈಗ ಆ್ಯಕ್ಟ್ನಲ್ಲಿ ಸೇರಿಸುವುದರಿಂದ ಅವರಿಗೆ ವಿಕಲಚೇತನರ ಪ್ರಮಾಣ ಪತ್ರ ಕೊಡಲಾಗುತ್ತಿದೆ. ಸರಕಾರ, ನಾನಾ ವೈದ್ಯರ ತಂಡ ಈ ರೋಗಿಗಳಿಗೆ ಸಾಕಷ್ಟು ಸಹಾಯ ಮಾಡುತ್ತಿದೆ. ಇನ್ನೂ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯ ನಮ್ಮ ಸಂಸ್ಥೆಗೆ ಮಹಾಪೋಷಕರಾಗಿ, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಹಾಡುಗಳನ್ನು ಹೇಳುತ್ತಾರೆ. ಎಂದು ಅಭಿಪ್ರಾಯಿಸಿದರು. ಈ ಸಂದರ್ಭದಲ್ಲಿ ದಾನಿಗಳಾದ ಕಿರುವಾಡಿ ಗಿರಿಜಮ್ಮ, ಸೊಸೈಟಿ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ, ಹೈಕೋರ್ಟ್‌ವಕೀಲ ಅನಂತ ನಾಯ್ಕ, ಮೀರಾ ಹನಗವಾಡಿ ಸೇರಿದಂತೆ ಇತರರು ಇದ್ದರು.
ರಷ್ಯಾ ದೊರೆಗೆ ಮತ್ತು ಕ್ಲಿಯೋಪಾತ್ರಗೂ ಇತ್ತು ಹಿಮೋಫಿಲಿಯಾ
ಹಿಮೋಫಿಲಿಯಾ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಹೆಚ್ಚು ಆಸಕ್ತಿ ಇತ್ತು. ಈ ಕಾಯಿಲೆ ಬಗ್ಗೆ ಇತಿಹಾಸದಲ್ಲಿಯೇ ದಾಖಲೆಗಳಿವೆ. ರಷ್ಯಾ ದೊರೆ ನಿಕೋಸಲ್‌ನ ಎರಡನೇ ಮಗನಿಗೆ ಈ ಖಾಯಿಲೆ ಇತ್ತು. ಈ ಸಂದರ್ಭದಲ್ಲಿ ಆ ರಾಜಮನೆತನದಲ್ಲಿ ನಡೆದ ಬೆಳವಣಿಗೆಗಳು ಮತ್ತು ಅದರ ನಂತರ ನಡೆದ ಸಾಮಾಜಿಕ ಬೆವಳಣಿಗೆಗಳು ನನ್ನ ಕುತೂಹಲಕ್ಕೆ ಕಾರಣವಾಯಿತು ಎಂದು ನಟ ಚೇತನ ಹೇಳಿದರು.