ದಿನದ ಸುದ್ದಿ

ಈರುಳ್ಳಿ ಬೆಳೆವ ರೈತರಿಗೆ ಇಲ್ಲಿವೆ ಕೆಲ ಟಿಪ್ಸ್

Published

on

ಸುದ್ದಿದಿನ ಡೆಸ್ಕ್ |ರುಳ್ಳಿ ಲಾಭದಾಯಕ ಬೆಳೆ. ಸಮರ್ಪಕವಾಗಿ ಪೋಷಣೆ ಮಾಡಿದರೆ ಉತ್ತಮ ಬೆಳೆಯುವುದು ಗ್ಯಾರಂಟಿ. ಅದರಂತೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಬಂಪರ್ ಲಾಭಬರುವುದುನಿಶ್ಚಿತ !

ಬಯಲುಸೀಮೆ ಭಾಗದಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈರುಳ್ಳಿ ಬೆಳೆವ ರೈತರಿಗೆ ಇಲ್ಲಿವೆ ಕೆಲ ಸಲಹೆಗಳು.

ಈರುಳ್ಳಿಗೆ ಅಲ್ಲಲ್ಲಿ ಎಲೆ ತಿನ್ನುವ ಹಸಿರು ಹುಳು ಬಾಧೆ ಕಂಡುಬಂದಲ್ಲಿ, ಬಾಧೆಗೊಳಗಾದ ಪೈರು ಕಿತ್ತು ಹಾಕಿ ನಂತರ ಕ್ಲೋರೊಫೈರಿಫಾಸ್‌ನ್ನು 2 ಮಿ.ಲೀ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಈರುಳ್ಳಿ (ನೇರಳೆ ಮಚ್ಚೆ ರೋಗ) ಎಲೆ ತುದಿಗಳು ಕೆಂಪಾಗಿ ಒಣಗುವುದು ಕಂಡು ಬರುವುದರ ಜತೆ, ಗಡ್ಡೆಗಳು ಕೊಳೆಯಲಾರಂಭಿಸುತ್ತದೆ. ತಕ್ಷಣ ಈ ಗಡ್ಡೆಗಳನ್ನು ಬೇರ್ಪಡಿಸಿ ಹೊರಗಡೆ ಸುಡಬೇಕು. ನಂತರ ರೋಗದ ಹತೋಟಿಗೆ ಕಾರ್ಬನ್ ಡೈಜಿಂ, ಮ್ಯಾಂಕೋಜೆಬ್ ಸಂಯುಕ್ತ ಶಿಲೀಂಧ್ರ ನಾಶಕ ಸಿಂಪಡಿಸಬೇಕು.

ಗಡ್ಡೆ ಕೀಳುವ 15 ದಿವಸ ಮೊದಲು ನೀರು ಕೊಡುವುದನ್ನು ನಿಲ್ಲಿಸಬೇಕು. ಇದು ಗಡ್ಡೆ ಗಟ್ಟಿಯಾಗಲು ಸಹಕಾರಿಯಾಗುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಶೇ. 50 ಕೆಳಗೆ ಬಾಗಿದಾಗ ಕಟಾವು ಮಾಡಬೇಕು. ಫಸಲನ್ನು ಕಿತ್ತು ವಾತಾವರಣ ತಂಪಾಗಿದ್ದಾಗ ಅಂದರೆ ಹೆಚ್ಚು ಬಿಸಿಲು ಇಲ್ಲದ್ದಿದಾಗ ಕ್ಷೇತ್ರದಲ್ಲಿ ಒಣಗಿಸಬೇಕು. ಬಿಸಿಲು ಹೆಚ್ಚಾಗಿದ್ದಲ್ಲಿ ನೆರಳಿನಲ್ಲಿ ಒಂದು ವಾರ ಕಾಲ ಒಣಗಿಸಬೇಕಾಗುತ್ತದೆ. ದಾಸ್ತಾನು ಮುನ್ನ ಗಾಯವಾದ, ಕೊಳೆತ, ರೋಗಕ್ಕೆ ತುತ್ತಾದ ಗಡ್ಡೆಗಳನ್ನು ಬೇರ್ಪಡಿಸಿ, ದಾಸ್ತಾನು ಮಾಡಬೇಕು.

ಐದು ದಿನದ ಬೆಳೆಗೆ ಮೇಲುಗೊಬ್ಬರವಾಗಿ ಅಮೋನಿಯಂ ಸಲ್ಫೇಟ್ 50 ಕೆ.ಜಿ., ಎಕರೆ ಭೂಮಿಗೆ ಸೇರಿಸಿ ತೆಳುವಾಗಿ ನೀರನ್ನು ಹಾಯಿಸಬೇಕು. ಬೆಳೆ 60 ದಿನಗಳಿಂದ 75 ದಿನಗಳವರೆಗೆ ಇರುವಾಗ 25-30 ಕೆ.ಜಿ. ಸಲ್ಫೇಟ್ ಆಫ್ ಪೊಟ್ಯಾಷ್‌ನ್ನು ಭೂಮಿಗೆ ಸೇರಿಸುವುದರಿಂದ ಗಡ್ಡೆಗಳಿಗೆ ರೋಗ ನಿರೋಧಕ ಶಕ್ತಿ ಹಾಗೂ ಉತ್ತಮ ಬಣ್ಣಕ್ಕೆ ಸಹಾಯವಾಗುತ್ತದೆ.

ನೀರು ಬಸಿದು ಹೋಗದೆ ಇರುವಂತಹ ಜಮೀನಿನಲ್ಲಿ ಈರುಳ್ಳಿ ಪೈರಿನ ಸುಳಿ ಎಲೆಗಳು ಹಳದಿಯಾಗಿ ಪೋಷಕಾಂಶದ ಕೊರತೆ ಕಂಡು ಬಂದಿದೆ. ಅದರ ನಿರ್ವಹಣೆಗೆ ಲಘು ಪೋಷಕಾಂಶದ ಮಿಶ್ರಣವನ್ನು 2 ಮಿ.ಲೀ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಹಾಗೂ ತಾಕಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version