ದಿನದ ಸುದ್ದಿ
ಸಂದರ್ಶನದ ವಿಡಿಯೋ ಪೂರ್ತಿ ನೋಡಿ, ತಪ್ಪಾಗಿ ಅರ್ಥೈಸ ಬೇಡಿ ; ನನ್ನ ಪರವಾಗಿ ನಿಂತವರಿಗೆ ಧನ್ಯವಾದ : ನಟಿ ಸಾಯಿ ಪಲ್ಲವಿ ಸ್ಪಷ್ಟನೆ
ಸುದ್ದಿದಿನ ಡೆಸ್ಕ್ : ಲೇಡಿ ಪವರ್ ಸ್ಟಾರ್, ನಟಿ ಸಾಯಿ ಪಲ್ಲವಿ ‘ವಿರಾಟ ಪರ್ವಂ’ ಸಿನಿಮಾದ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲವರು ನಟಿಯ ವಿರುದ್ಧ ದೂರು ದಾಖಲಿಸಿದ್ದರು.
ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ದನವೊಂದನ್ನು ಒಯ್ಯುತ್ತಿದ್ದವರನ್ನು ಕೊಂದು ಹಾಕಿದವರಿಗೂ,
ಕಾಶ್ಮೀರ್ ಪಂಡಿತರನ್ನು ಕೊಂದವರಿಗೂ ಯಾವುದೇ ವ್ಯತ್ಯಾಸವಿಲ್ಲ. ಧರ್ಮಕ್ಕಿಂತ ಮನುಷ್ಯತ್ವವೇ ಮುಖ್ಯ..! ಎಂದು ಹೇಳಿದ್ದ ಸಾಯಿ ಪಲ್ಲವಿ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮತ್ತು ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆಯ ಘಟನೆಯನ್ನು ಹೋಲಿಸಿ ಮಾತನಾಡಿದ್ದರು.
ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವು ಮಂದಿ ಸಾಯಿ ಪಲ್ಲವಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಭಜರಂಗದಳವು ನಟಿಯ ವಿರುದ್ದ ದೂರನ್ನು ಕೂಡ ನಿನ್ನೆ ದಾಖಲಿಸಿತು. ಇದರ ಬೆನ್ನಲ್ಲೇ ಸಾಯಿ ಪಲ್ಲವಿ ತಮ್ಮ ಪೇಸ್ ಬುಕ್ ಖಾತೆ , ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡುವುದರ ಮೂಲಕ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನನ್ನ ಪ್ರೀತಿಯ ವೀಕ್ಷಕರೆ, ಇದೇ ಮೊದಲ ಬಾರಿಗೆ ನಾನು ಸ್ಪಷ್ಟನೆ ನೀಡಲು ನಿಮ್ಮೆದುರು ಬಂದಿದ್ದೇನೆ. ಮಾತನಾಡುವಾಗ ನಾನು ಎರಡು ಬಾರಿ ಯೋಚಿಸುತ್ತೇನೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಾನು ಎಡವೋ ಅಥವಾ ಬಲವೋ ಎಂದು ನಿರೂಪಕರು ಪ್ರಶ್ನಿಸಿದರು. ಆಗ ನಾನು ಎಡವೂ ಅಲ್ಲ ಬಲವೂ ಅಲ್ಲ ನಾನು ತಟಸ್ಥ ಎನ್ನುವ ಉತ್ತರ ಕೊಟ್ಟೆ.
ಮೊದಲು ನಾನು ಮನುಷ್ಯರಾಗಬೇಕಿದೆ ಎಂದು ಹೇಳಿದೆ.
ನನಗೆ ಎರಡು ಘಟನೆಗಳು ವಿಚಲಿತಗೊಳಿಸಿದವು. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಿದ ನಂತರ ನಾನು ತುಂಬಾ ಡಿಸ್ಟರ್ಬ್ ಆದೆ. ಅಲ್ಲಿ ನಡೆದ ಹತ್ಯೆಗಳ ಬಗ್ಗೆ ನೊಂದು ಕೊಂಡೆ. ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ ಅವರ ಜೊತೆ ಇದರ ಬಗ್ಗೆ ಮಾತನಾಡಿದ್ದೆ. ಅದೇ ರೀತಿ ಕೊವಿಡ್ ಸಂದರ್ಭದಲ್ಲಿ ಆದ ಗುಂಪು ಹಲ್ಲೆ ವಿಡಿಯೋ ನೋಡಿ ಕೂಡ ನಾನು ವಿಚಲಿತಗೊಂಡು ನೊಂದೆ.
ಅದು ಯಾವುದೇ ಧರ್ಮವಾಗಿರಲಿ, ಆ ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವುದು ತಪ್ಪು. ಕೋವಿಡ್ ಸಮಯದ ಗುಂಪು ಹಲ್ಲೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದ ಕಂಡು ಙಗೆ ಬೇಸರವಾಯಿತು. ಬೇರೆಯವರ ಜೀವವನ್ನು ತೆಗೆಯುವ ಹಕ್ಕ ಯಾರಿಗೂ ಇಲ್ಲ . ನಾನೊಬ್ಬಳು ಎಂಬಿಬಿಎಸ್ ಪದವೀಧರೆ ಎಲ್ಲರ ಜೀವವೂ ಮುಖ್ಯ ಎಂದು ನಾನು ನಂಬಿದ್ದೇನೆ.
ಭಾರತೀಯರೆಲ್ಲಾ ನಾವು ಸಹೋದರ- ಸಹೋದರಿಯರು ಎಂದು ಹೇಳುತ್ತಾ ಬೆಳೆದಿದ್ದೇವೆ . ನನ್ನ ಮನಸ್ಸಲ್ಲಿ ಆ ಮಾತು ಆಳವಾಗಿ ಬೇರೂರಿದೆ. ಇತ್ತೀಚೆಗೆ ನಾನು ಮಾತಾಡಿದ್ದನ್ನು ಬೇರೆ ರೀತಿಯಲ್ಲಿ ಕೆಲವರು ಅರ್ಥೈಸಿದ್ದು ನಿಜಕ್ಕೂ ಬೇಸರದ ಸಂಗತಿ. ಪೂರ್ಣ ಸಂದರ್ಶನ ನೋಡದೆ ಕೆಲವರು ನನ್ನ ವಿರುದ್ಧ ಮಾತನಾಡಿದ್ದಾರೆ. ಹಾಗೇ ನನ್ನ ಮಾತನ್ನು ಅರ್ಥೈಸಿಕೊಂಡು ಪರವಾಗಿ ನಿಂತವರಿಗೆ ನನ್ನ ಧನ್ಯವಾದ’ ಎಂದಿದ್ದಾರೆ ಸಾಯಿ ಪಲ್ಲವಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243