ಕ್ರೀಡೆ
ನೀವು ನಿದ್ರಿಸುವಾಗ ನಾನು ಜಗತ್ತನ್ನೇ ಗೆದ್ದೆ: ಅಪ್ಪನಿಗೆ ಹಿಮದಾಸ್ ಮಾತು
ಸುದ್ದಿದಿನ ಡೆಸ್ಕ್: ನೀವೆಲ್ಲಾ ನಿದ್ರಿಸುತ್ತಿದ್ದೀರಾ? ನಾನು ಜಗತ್ತನ್ನೇ ಗೆದ್ದಿದ್ದೇನೆ ಅಪ್ಪಾ….
ಫಿನ್ ಲ್ಯಾಂಡ್‍ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡ ಅಥ್ಲೀಟ್ ಹಿಮದಾಸ್ ತನ್ನ ತಂದೆಗೆ ಹೇಳಿದ ಮಾತಿದು.
ಕ್ರೀಡೆಯ ಬಗ್ಗೆ ಅಷ್ಟೇನೂ ಗೊತ್ತಿಲ್ಲದ ತನ್ನ ಕುಟುಂಬ ತನ್ನ ಸ್ಪರ್ಧೆ ನೋಡದೆ ಮಲಗಿರಬಹುದು ಎಂದು ಕೊಂಡು ಅಪ್ಪನಿಗೆ ಕರೆ ಮಾಡಿದ ಹಿಮದಾಸ್‍ಗೆ ಒಂದು ಅಚ್ಚರಿ ಕಾದಿತ್ತು. ಇಲ್ಲಮ್ಮ ನಾವು ಮಲಗಿಲ್ಲ ನೀನು ಹೇಗೆ ಓಡುತ್ತೀಯಾ ಎಂಬುದನ್ನು ನೋಡಲು ನಾವೆಲ್ಲ ಟಿವಿ ಮಂದೆ ಕುಳಿತಿದ್ದೇವೆ ಎಂದು ಹಿಮದಾಸ್ ತಂದೆ ಹೇಳಿದಾಗ ಅವರ ಕಣ್ಣಲ್ಲಿ ಆನಂದ ಭಾಷ್ಪ ಚಿಮ್ಮಿ ಭಾವುಕರಾದರು.
ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಭಾರತಕ್ಕೆ ಮೊದಲ ಚಿನ್ನ ತಂದು ಕೊಟ್ಟ ಹಿಮದಾಸ್ ಈಗ ಚರ್ಚೆಯ ವಿಷಯ.
ಹಿಮದಾಸ್‍ಗೆ ತಾನು ಒಬ್ಬ ಫುಟ್‍ಬಾಲ್ ಆಟಗಾರ್ತಿಯಾಬೇಕೆಂಬ ದೊಡ್ಡ ಕನಸಿತ್ತು ಆದರೆ, ಆಕೆಯ ಆಟದ ವೇಗವನ್ನು ಗಮನಿಸಿದ ಕೋಚ್, ಅಥ್ಲೀಟ್ ಆಗುವಂತೆ ಸಲಹೆ ನೀಡಿದ್ದರು. ಇದನ್ನು ಅನುಸರಿಸಿದ ಅವರೀಗೆ ಉತ್ತುಂಗದಲ್ಲಿ ನಿಂತಿದ್ದಾರೆ.
ಕಂಟ್ರಿ ಸರಾಯಿ ವಿರುದ್ಧ ಧನಿ ಎತ್ತಿದ್ದವರು
ಹಿಮದಾಸ್ ಅವರು ಕೇವಲ ಕ್ರೀಡೆಗಾಗಿ ಬದುಕಿದ ಹುಡುಗಿಯಲ್ಲ. ಆಕೆಗೆ ಸಾಮಾಜಿಕ ಕಳಕಳಿಯೂ ಇದೆ. ಅಸ್ಸಾಂನ ಧಿಂಗಿ ಗ್ರಾಮದವರಾದ ಹಿಮದಾಸ್ ಅವರು ತಮ್ಮೂರಿನಲ್ಲಿ ನಡೆಯುತ್ತಿದ್ದ ಬಟ್ಟಿ ಸಾರಾಯಿ ಅಂಗಡಿಗಳ ಧ್ವಂಸ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಗ್ರಾಮದಲ್ಲಿ ಭಟ್ಟಿ ಸಾರಾಯಿ ದಂಧೆ ನಿಲ್ಲಲು ಹಿಮದಾಸ್ ಅವರೂ ಕೂಡ ಕಾರಣ.
ಏಜೆನ್ಸಿಗಳಿಗೆ ಪಾಠ
ಕೇವಲ 40 ಸೆಂಟ್ ಜಾಗ ಅಪ್ಪ ಅಮ್ಮನಿಗಿದ್ದ ಐವರು ಮಕ್ಕಳಲ್ಲಿ ಒಬ್ಬರಾಗಿದ್ದ ಹಿಮದಾಸ್ ಜೀವನದಲ್ಲಿ ಕಷ್ಟವನ್ನೇ ಉಂಡಿದ್ದು ಹೆಚ್ಚು. ಯಾವುದೇ ಏಜೆನ್ಸಿಗಳ ಮೂಲಕ ತರಬೇತಿ ಪಡೆಯಲು ಹಣವಿಲ್ಲದೆ ಸ್ವಂತ ಪ್ರಯತ್ನದಿಂದ ಇಲ್ಲಿಯವರಿಗೆ ಮುಟ್ಟಿರುವ ಹಿಮದಾಸ್ ಅವರು ಎಲ್ಲರಿಗೂ ಒಂದು ಪಾಠ.