ದಿನದ ಸುದ್ದಿ

ಹಿಂದೂಗಳು ಯಾರು? ಎನ್ನುವುದನ್ನು ಸಚಿವ ಬಿ.ಸಿ.ನಾಗೇಶ್ ಬಹಿರಂಗ ಪಡಿಸಲಿ ; ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಎಸೆಯಲಿ : ಸಿದ್ದರಾಮಯ್ಯ ಕಿಡಿ

Published

on

ಸಾಂದರ್ಭಿಕ ಚಿತ್ರ

 

ಸುದ್ದಿದಿನ ಡೆಸ್ಕ್ : ಹಿಂದೂ ಭಾವನೆಗೆ ಧಕ್ಕೆಯಾಗಿದ್ದಕ್ಕೆ ಪಠ್ಯಪರಿಷ್ಕರಣೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೂಗಳು ಯಾರು? ಎನ್ನುವುದನ್ನು ಸನ್ಮಾನ್ಯ ಸಚಿವರು ಬಹಿರಂಗ ಪಡಿಸಿ, ಯಾವುದರಿಂದ ಯಾರ ಭಾವನೆಗೆ ಧಕ್ಕೆಯಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

‘ಪರಿಷ್ಕೃತ ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ನಾರಾಯಣ ಗುರು, ಕುವೆಂಪು ಸೇರಿದಂತೆ ಹಲವಾರು ಮಹನೀಯರ ವ್ಯಕ್ತಿತ್ವವನ್ನು ಕಡೆಗಣಿಸಲಾಗಿದೆ, ಇವರನ್ನು ಪರಿಷ್ಕೃತ ಸಮಿತಿಯ ಕಿಡಿಗೇಡಿ ಅಧ್ಯಕ್ಷ ತುಚ್ಛೀಕರಿಸಿದ್ದಾನೆ’ ಎಂದು ಪ್ರತಿಭಟಿಸುತ್ತಿರುವವರು ಅನ್ಯಧರ್ಮೀಯರಲ್ಲ, ಹಿಂದೂಗಳೇ ಅಲ್ವಾ ಸಚಿವರೇ?

ಪಠ್ಯ ಪರಿಷ್ಕರಣಾ ಸಮಿತಿಯಲ್ಲಿ ದಲಿತ ಮತ್ತು ಹಿಂದುಳಿದ ಜಾತಿಗಳ ವಿದ್ವಾಂಸರಿಗೆ ಪ್ರಾತಿನಿಧ್ಯವೇ ನೀಡಿಲ್ಲವಲ್ಲಾ? ಶಿಕ್ಷಣ ಸಚಿವರು ಕಾಳಜಿ ತೋರುತ್ತಿರುವ ಹಿಂದೂಗಳ ವ್ಯಾಖ್ಯಾನದಲ್ಲಿ ಈ ಸಮುದಾಯಗಳು ಸೇರಿಕೊಳ್ಳುವುದಿಲ್ಲವೇ? ಈ ಕಾರಣಕ್ಕಾಗಿ ಅವರಿಗೆ ಪ್ರಾತಿನಿಧ್ಯ ನೀಡಿಲ್ಲವೇ ಸಚಿವರೇ? ಎಂದು ಪ್ರಶ್ನಿಸಿದ್ದಾರೆ.

ಬಸವಣ್ಣ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸಿದವರು ಎನ್ನುವ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಲಾಯಿತೇ? ಅವಮಾನ ಮಾಡಲಾಯಿತೇ? ನಾರಾಯಣ ಗುರು, ಪೆರಿಯಾರ್, ಕುವೆಂಪು ಅವರು ಹಿಂದೂ ಧರ್ಮದ ದೋಷಗಳನ್ನು ಎತ್ತಿತೋರಿಸಿದ್ದಕ್ಕಾಗಿ ನಿರ್ಲಕ್ಷ್ಯ ಮಾಡಲಾಯಿತೇ? ಹಾಗೆಂದು ಹೇಳಿಬಿಡಿ?

ಈ ದೇಶದ ಬಡವರಲ್ಲಿ ಬಹುಸಂಖ್ಯೆಯಲ್ಲಿರುವುದು ಹಿಂದೂ ಧರ್ಮದಲ್ಲಿರುವ ದಲಿತರು ಮತ್ತು ಹಿಂದುಳಿದ ಜಾತಿಗಳು. ಸರ್ಕಾರಿ ಶಾಲೆಗಳಲ್ಲಿ ಈ ಮಕ್ಕಳ ಸಂಖ್ಯೆಯೇ ಹೆಚ್ಚು. ಬುದ್ಧ, ಬಸವ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ನಾರಾಯಣ ಗುರು, ಕುವೆಂಪು ಅವರಿಗೆ ಆಗಿರುವ ಅವಮಾನದಿಂದ ಈ ಮಕ್ಕಳ ಭಾವನೆಗೂ ಧಕ್ಕೆಯಾಗಿದೆಯಲ್ವಾ?

ವಿಕೃತ ಮನಸ್ಸಿನ ಕಿಡಿಗೇಡಿ ಅಧ್ಯಕ್ಷ ತಯಾರಿಸಿರುವ ಪರಿಷ್ಕೃತ ಪಠ್ಯದಿಂದ ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ಮಾತ್ರವಲ್ಲ, ರಾಜ್ಯದ ಆರುವರೆ ಕೋಟಿ ಕನ್ನಡಿಗರ ಮನಸ್ಸಿಗೆ ಘಾಸಿಯಾಗಿದೆ. ಕನ್ನಡಿಗರ ಸಹನೆಯನ್ನು ಪರೀಕ್ಷಿಸಲು ಹೋಗಬೇಡಿ, ಮೊದಲು ಈ ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಎಸೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version