ರಾಜಕೀಯ

ಹಿಂದುತ್ವ ಮತ್ತು‌ ಬಿಜೆಪಿ

Published

on

ಪ್ರಗ್ಯಾ ಸಿಂಗ್ ಠಾಕೂರ್ ಅನ್ನು ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಿದ್ದು ನನಗೆ ತೀರಾ ಆಶ್ಚರ್ಯವಾಗಿಯೇನೂ ಕಾಣುತ್ತಿಲ್ಲ. ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೇಟು ನಿರಾಕರಿಸಿದ್ದು ಕೂಡ ದೊಡ್ಡ ಆಶ್ಚರ್ಯವೇನಲ್ಲ. ಇದು ಸಂಘ ಪರಿವಾರದಲ್ಲಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಯೋಜನಾ ಪ್ರಕ್ರಿಯೆ ಮತ್ತು ಅನುಷ್ಠಾನ.

ಜನಸಾಮಾನ್ಯ ಹಿಂದುತ್ವವಾದ ಮತ್ತು ಹಿಂದೂರಾಷ್ಟ್ರದ ಕಲ್ಪನೆಯನ್ನು ಪರಿಗಣಿಸುವಂತೆ ಮಾಡುವುದು ಅವರ ಮೊದಲ ಹಂತದ ಕೆಲಸವಾಗಿತ್ತು. ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಎಲ್ಲರನ್ನೂ ಒಳಗೊಳ್ಳುವ ಸಂವಿಧಾನ ಪ್ರೇರಿತ ರಾಷ್ಟ್ರೀಯತೆ ಬಹುಸಂಖ್ಯಾತ ಜನರಲ್ಲಿ ಸಾಮಾನ್ಯವಾಗಿಯೇ ಇತ್ತು. ಇಂಥಾ ವಾತಾವರಣದಲ್ಲಿ ವಾಜಪೇಯಿ, ಆಡ್ವಾಣಿ ಮತ್ತು ಜೋಷಿ ಸಾಕಷ್ಟು ಜಾಗರೂಕತೆಯಿಂದಲೇ ಕೆಲಸ ಮಾಡಬೇಕಿತ್ತು. ಇಲ್ಲದಿದ್ದರೆ ಅವರನ್ನಾಗಲೀ, ಅವರ ಸಿದ್ಧಾಂತವನ್ನಾಗಲೀ ಈಗ ಒಪ್ಪಿರುವವರೂ ಒಪ್ಪುವುದು ಕಷ್ಟವಿತ್ತು. ಈ ತಂಡ ಅದನ್ನು ಸಾಕಷ್ಟೂ ಯಶಸ್ವಿಯಾಗಿ ಮಾಡಿದ್ದಲ್ಲದೇ, ಬಲಪಂಥೀಯ ಸರ್ಕಾರಕ್ಕೂ ಕೂಡ ಒಂದು ಗಟ್ಟಿ ತಳಹದಿಯನ್ನು ಹಾಕಿಕೊಟ್ಟಿತು.

ಈ ತಳಹದಿ ದೊರೆತ ಮೇಲೆ ಹಿಂದುತ್ವವಾದವನ್ನು ಇನ್ನಷ್ಟು ನೆಲ-ಮನಕ್ಕಿಳಿಸಲು ಆ ತಲೆಮಾರಿಗಿಂತ ಹೆಚ್ಚು ಆಗ್ರಹಪೂರ್ವಕವಾಗಿ ಕೆಲಸ ಮಾಡುವ ತಲೆಮಾರಿನ ಅಗತ್ಯ ಕಾಣಿಸಿತು. ಹೀಗಾಗಿ ಮೋದಿಯನ್ನು ಮುನ್ನೆಲೆಗೆ ತರಲಾಯಿತು. ಜೋಷಿ, ಆಡ್ವಾಣಿಯವರನ್ನು ಬದಿಗೆ ಸರಿಸಿದ್ದು ಈ ಪ್ರಕ್ರಿಯೆಯೇ. ಮೋದಿಯವರ ಆಡಳಿತದಲ್ಲಿ ಪರಿವಾರ ಈ ಗುರಿಯತ್ತ ಸಾಕಷ್ಟು ದೂರ ಕ್ರಮಿಸುವುದು ಸಾಧ್ಯವಾಯಿತು ಎನ್ನುವುದನ್ನು ನಾವೆಲ್ಲ ಕಳೆದ ಐದು ವರ್ಷಗಳಲ್ಲಿ ಚೆನ್ನಾಗಿಯೇ ನೋಡಿದ್ದೇವೆ. ರಾಷ್ಟ್ರೀಯತೆಯ ವ್ಯಾಖ್ಯಾನವನ್ನು ಬದಲಿಸುವುದು, ದೇಶದ್ರೋಹವನ್ನು ಮರುವ್ಯಾಖ್ಯಾನಿಸುವುದು, ವಿಶ್ವವಿದ್ಯಾಲಯಗಳ ಮೇಲೆ, ವಿದ್ಯಾರ್ಥಿಗಳ ಮೇಲೆ ವೈಚಾರಿಕ ನಿರ್ಬಂಧ ಹೇರಿ, ತಮ್ಮದನ್ನು ಹೇರಲು ಮಾಡಿದಂಥಾ ಪ್ರಯತ್ನಗಳು, ದೇಶದ ಆಹಾರ ಪದ್ಧತಿಗಳ ಮೇಲೆ ಆದಂತಹ ಹಲ್ಲೆಗಳು, ಸಂವಿಧಾನವನ್ನು ನಿಕಶಕ್ಕೆ ಒಡ್ಡುವುದು, ಇನ್ನೂ ಮುಂತಾದವು ಕೇವಲ stray incidents ಅಲ್ಲ.

ಈಗ ಮೋದಿಯವರ “ಯಶಸ್ವೀ” ಪಾತ್ರವೂ ಕೊನೆಯ ಹಂತದಲ್ಲಿರುವಾಗ ಹಿಂದುತ್ವವಾದವನ್ನು ಅವರಿಗಿಂತ ಹೆಚ್ಚು ಭಾವೋದ್ವೇಗದಿಂದ ಹೇರುವ, ನಾಟಿಸುವ ತಲೆಮಾರಿನ ಅವಶ್ಯಕತೆ ಪರಿವಾರಕ್ಕೆ ಇದೆ. ಈ ಹಂತದಲ್ಲಿ ಬೌದ್ಧಿಕ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಸಾಮರ್ಥ್ಯದ ಅಗತ್ಯವಿದೆ. ಒಂದು ರೀತಿಯ ಮಿಲಿಟೆನ್ಸಿಯ ಅಗತ್ಯವೂ ಇದೆ. ಹೀಗಾಗಿಯೇ ಯಾರೂ ಊಹಿಸದ, ಆದರೆ ಅಂಥಾ ಉದ್ದೇಶಕ್ಕಾಗಿಯೇ ತರಬೇತಾಗಿರುವ ಯೋಗಿ, ಮಣಿಪುರ ಮತ್ತು ತ್ರಿಪುರಾದ ಮುಖ್ಯಮಂತ್ರಿಗಳು ಮುನ್ನೆಲೆಗೆ ಬಂದಿದ್ದು. ಅವರ ಕಾಲಾಳುಗಳಾಗಿ ದೇಶದ ತುಂಬಾ ಲಕ್ಷಾಂತರ ಯುವಕರು ತಯಾರಾಗಿದ್ದಾರೆ.

ಅವರಲ್ಲಿನ ಅನೇಕ ಮುಂದಾಳುಗಳಲ್ಲಿ ಒಬ್ಬ ಸೂರ್ಯ. ಆತನಿಗೆ ಇಂದು ಪ್ರವೇಶ ದೊರೆತಿದೆ. ಅದೇ ಪ್ರಕ್ರಿಯೆಯ ಭಾಗವಾಗಿಯೇ ಪ್ರಗ್ಯಾ ಸಿಂಗ್ ಠಾಕೂರ್ ಅನ್ನು ಕೂಡ ತರಲಾಗಿದೆ. ಒಂದು ವೇಳೆ ಇಂದು ಅನಂತಕುಮಾರ್ ಬದುಕಿದ್ದು, ಅವರನ್ನೂ ಈ ಚುನಾವಣೆಯಲ್ಲಿ ಬದಿಗೆ ಸರಿಸಿದ್ದರೂ ಕೂಡ ಆಶ್ಚರ್ಯವಾಗುತ್ತಿರಲಿಲ್ಲ. ಅದು ಕೂಡ ಆ ಕಾರ್ಯಕ್ರಮದ ಭಾಗವೇ ಆಗಿರುತ್ತಿತ್ತು. ಒಂದೆರಡು ದಿನಗಳ ಪ್ರತಿರೋಧದ ನಂತರ ಪರಿವಾರದೊಳಗೆ ಎಲ್ಲವೂ ತಣ್ಣಗಾಗುತ್ತಿತ್ತು. ಬಹುಶಃ ಈ ಚುನಾವಣೆಯಲ್ಲೇ ಹಾಗಾಗುತ್ತಿರಲಿಲ್ಲ ಎಂದುಕೊಳ್ಳುವುದು ಅವರ ಹತ್ತಿರದವರಿಗೆ ಸಮಾಧಾನ ತರಬಹುದು.

ಬಲಪಂಥೀಯತೆಯನ್ನು ಇಷ್ಟು ಕರಾರುವಾಕ್ಕಾಗಿ ಪಸರಿಸುತ್ತಿರುವ ಈ ಧೀರ್ಘಕಾಲೀನ ಕಾರ್ಯಕ್ರಮಕ್ಕೆ ತತ್ಸಮವಾಗಿ ಎದುರು ನಿಲ್ಲುವಂಥಾ ಮಾನವೀಯ ಕಾರ್ಯಕ್ರಮವೊಂದು ನಮ್ಮ ದೇಶದಲ್ಲಿ ಇನ್ನೂ ಗಟ್ಟಿಗೊಳ್ಳದಿರುವುದು ಶೋಚನೀಯ. ನಮ್ಮ ಯುವಪೀಳಿಗೆಗೆ ಇದನ್ನು ಮನದಟ್ಟು ಮಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಕೇಸರಿ ಹರವು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version