ದಿನದ ಸುದ್ದಿ

ಹೊನ್ನಾಳಿ ತಾಲ್ಲೂಕು ಸಮಗ್ರ ಅಭಿವೃದ್ಧಿಗೆ 500 ಕೋಟಿ ಪ್ರಸ್ತಾವನೆ : ಕೆಲ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಲ್ಲಿ ಸುಮಾರು 500 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಭೂ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ನವದೆಹಲಿಯಲ್ಲಿ ಗುರುವಾರ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ, ತಾಲ್ಲೂಕಿನಲ್ಲಿ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಬೇಕೆಂಬ ಪ್ರಸ್ತಾವನೆ ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕಾಗಿ ಸ್ಪಂದಿಸಿದ ಗಡ್ಕರಿಯವರು ಕೆಲವು ಯೋಜನೆಗಳಿಗೆ ಶೀಘ್ರದಲ್ಲೇ ಅನುಮತಿ ನೀಡಲಾಗುವುದು. ಉಳಿದ ಯೋಜನೆಗಳನ್ನು ಅಧಿಕಾರಿಗಳಿಂದ ವರದಿ ತರಿಸಿಕೊಂಡು ನಂತರ ಅನುಮೋದನೆ ನೀಡುವ ಆಶ್ವಾಸನೆಯನ್ನು ನೀಡಿದರು.

ಬಹುನಿರೀಕ್ಷಿತ ಹೊನ್ನಾಳಿ ತಾಲ್ಲೂಕಿನ ರಾಂಪುರ ಮತ್ತು ಗೋವಿನಕೋವಿ ನಡುವೆ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಸುಮಾರು 50 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಸಮ್ಮತಿಸಿದ್ದಾರೆ. ನಲ್ಲೂರಿನಿಂದ ಸವಳಂಗ ಹಾಗೂ ಸಾಸ್ವೆಹಳ್ಳಿ, ರಾಂಪುರ, ಗೋವಿನಕೋವಿ ನಡುವಿನ ರಸ್ತೆ ಸುಧಾರಣೆಗಾಗಿ 62.32 ಕೋಟಿ ಪ್ರಸ್ತಾವನೆಯನ್ನು ರೇಣುಕಾಚಾರ್ಯ ಸಲ್ಲಿಸಿದರು.

ಹರಿಹರ-ಹೊನ್ನಾಳಿ ನಡುವಿನ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ 90 ಕೋಟಿ, ಹುಣಸೇಹಳ್ಳಿ, ಬೆನಕನಹಳ್ಳಿ, ಸಾಸ್ವೆಹಳ್ಳಿ, ಲಿಂಗಾಪುರ, ಆನವೇರಿ, ಕೈಮರ, ಹುಣಸೇಹಳ್ಳಿ, ಬಸವಪಟ್ಟಣ, ಸಾಗರಪೇಟೆ, ಒಡೆಯರಹತ್ತೂರು, ಕುಂಕೋವ ನಡುವೆ ರಸ್ತೆ ಸುಧಾರಣೆಗಾಗಿ 62 ಕೋಟಿ ಪ್ರಸ್ತಾವನೆಗೆ ಗಡ್ಕರಿಯವರು ಹಸಿರು ನಿಶಾನೆ ತೋರಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ದೇವನಾಯಕನಹಳ್ಳಿ, ಮುಸ್ಸೆಹಾಳ, ಸುಂಕದಕಟ್ಟೆ, ಆರಬಗಟ್ಟೆ, ಬಸವನಹಳ್ಳಿ, ಅರೆಹಳ್ಳಿ, ಗಂಗನಕೋಟೆ, ಒಡೇರಹತ್ತೂರು ನಡುವಿನ ರಸ್ತೆಗಳ ಸುಧಾರಣೆಗಾಗಿ 62 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.

ಇನ್ನು ಮಾಸಡಿ, ಕುಕ್ಕವಾಡ, ಕೂಲಂಬಿ, ಮುತ್ತೇನಹಳ್ಳಿ ನಡುವಿನ ರಸ್ತೆ ಸುಧಾರಣೆಗಾಗಿ 30 ಕೋಟಿ, ಗೋವಿಂದಕೋವಿಯಿಂದ ಚಿನ್ನಿಕಟ್ಟೆ, ಬಸವನಹಳ್ಳಿ, ದಾನೇಹಳ್ಳಿ, ಆರುಂಡಿ, ರಾಮೇಶ್ವರ, ಕಣವಿಜೋಗ, ಸೂರಗೊಂಡನಕೊಪ್ಪ ಇವುಗಳ ನಡುವಿನ ರಸ್ತೆಗಳ ಅಭಿವೃದ್ಧಿಗೆ 62.14 ಕೋಟಿ ಹಾಗೂ ಗೊಲ್ಲರಹಳ್ಳಿ-ಕೋಣನತಲೆ ನಡುವಿನ ರಸ್ತೆಗಳ ಸುಧಾರಣೆಗೆ 25 ಕೋಟಿ ಸೇರಿದಂತೆ 500 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಅಗತ್ಯವಿರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಉಳಿದಿರುವ ಕಾಮಗಾರಿಗಳಿಗೆ ಹಂತ ಹಂತವಾಗಿ ಒಪ್ಪಿಗೆ ಸೂಚಿಸುವ ಭರವಸೆಯನ್ನು ನಿತಿನ್ ಗಡ್ಕರಿ ನೀಡಿದ್ದಾರೆ ಎಂದು ಎಂ.ಪಿ.ರೇಣುಕಾಚಾರ್ಯ ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version