ದಿನದ ಸುದ್ದಿ
ಗೌರಿ ಲಂಕೇಶ್ ಕೊಂದದ್ದು ನಾನೇ : ಪರಶುರಾಮ್ ತಪ್ಪೊಪ್ಪಿಗೆ
ಸುದ್ದಿದಿನ, ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಂದದ್ದು ನಾನೇ ಎಂದು ಪರಶುರಾಮ್ ವಾಘ್ಮೋರೆ ತಪ್ಪೊಪ್ಪಿಕೊಂಡಿದ್ದಾನೆ ಎಂಬ ಸತ್ಯವನ್ನು ಎಸ್ ಐ ಟಿ ಹೇಳಿದೆ.
ಶುಕ್ರವಾರ (ಜೂನ್ 15) ರಂದು ಆತ ಕರೆ ಮಾಡಿದ ಕಾಯಿನ್ ಬೂತ್, ತಂಗಿದ್ದ ಸ್ಥಳ, ಗೌರಿ ಲಂಕೇಶ್ ಅವರ ಮನೆ, ಹಾಗೂ ಆತ ಬೈಕಿನಲ್ಲಿ ತಪ್ಪಿಸಿಕೊಂಡಿದ್ದ ಜಾಗವನ್ನು ತೋರಿಸಿದ್ದಾನೆ. ಅದೆಲ್ಲವನ್ನೂ ಪೊಲೀಸರು ಮಹಜರು ಮಾಡಿದ್ದಾರೆ.
ಪರಶುರಾಮ್ ಎಸ್ ಐ ಟಿ ಗೆ ಗೌರಿ ಹತ್ಯೆಗೆ ಹೇಗೆಲ್ಲಾ ತಯಾರಿ ನಡೆಸಲಾಯಿತು ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಅಪರಿಚಿತ ವ್ಯಕ್ತಿಯಿಂದ ಡೀಲ್
ಪರಶುರಾಮ್ ಗೆ ವ್ಯಕ್ತಿಯೊಬ್ಬ ಹಿಂದೂ ಧರ್ಮವನ್ನ ಇಷ್ಟೊಂದು ಪ್ರೀತಿಸುತ್ತಿರುವ ನಿನಗೇ ಆ ದೇವರು ಒಂದೊಳ್ಳೆ ಅವಕಾಶಮಾಡಿಕೊಟ್ಟಿದ್ದಾನೆ. ಈ ಅವಕಾಶವನ್ನು ಬಿಡಬೇಡ, ಈ ಕೆಲಸಕ್ಕೆ ನೀನು ಒಪ್ಪಿಗೆ ನೀಡಿದರೆ ನಿನಗೆ ಬೇಕಾದಂತಹ ಎಲ್ಲಾ ತಯಾರಿಯನ್ನು ನಾನು ಕೊಡುತ್ತೇನೆ ಎಂದು ಆ ವ್ಯಕ್ತಿ ನನ್ನ ಬ್ರೈನ್ ವಾಷ್ ಮಾಡಿದ ಎಂದು ಪರಶುರಾಮ್ ಹೇಳಿದ್ದಾನೆ. ಆದರೆ ಆ ವ್ಯಕ್ತಿ ಬಗ್ಗೆ ಹೆಚ್ಚು ಮಾಹಿತಿ ನನಗಿಲ್ಲ ಆದರೆ, ಆತನನ್ನು ನೋಡಿದರೆ ಗುರಿತಿಸಬಲ್ಲೆ. ಆ ವ್ಯಕ್ತಿ ನನಗೆ 2017ರಲ್ಲಿ ಭೇಟಿಯಾಗಿದ್ದ.
ವಿಡಿಯೋ ನೋಡಿ ರಕ್ತ ಕುದಿಯಿತು
ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡುವಂತೆ ಡೀಲ್ ಬಂದಾಗ ನಾನು ಆಕೆಯ ಭಾಷಣದ ವಿಡಿಯೋಗಳನ್ನ ನೋಡಿದೆ. ಆಕೆಯ ಆ ಮಾತುಗಳು ನನ್ನಲ್ಲಿ ರಕ್ತಕುದಿಯುವಂತೆ ಮಾಡಿತು. ಆಗ ನನಗೆ ಆಕೆಯನ್ನು ಕೊಲ್ಲಲೇ ಬೇಕೆನಿಸಿತು. ಆಗ ಕೊಲ್ಲಲು ಬೇಕಾದ ತಯಾರಿಯನ್ನು ನನಗೆ ಕೊಡಬೇಕಾಗಿ ಆ ವ್ಯಕ್ತಿಯನ್ನು ಕೇಳಿದೆ ಎಂದಿದ್ದಾನೆ ಪರಶುರಾಮ್.
ತರಬೇತಿ
ನಂತರ ಆ ವ್ಯಕ್ತಿ ನನಗೆ ಬೆಳಗಾವಿಯ ಒಂದು ನಿರ್ಜನ ಪ್ರದೇಶದಲ್ಲಿ ಗುಂಡು ಹಾರಿಸುವುದರ ಬಗ್ಗೆ ಏರ್ ಗನ್ ನಲ್ಲಿ ತರಬೇತಿ ನೀಡಿದ. ಈ ತರಬೇತಿಯು 20 ದಿನಗಳ ಕಾಲ ನಡೆಯಿತು. ಹಾಗೇ ಈ 20ದಿನಗಳಲ್ಲಿ ಸುಮಾರು 500 ಸುತ್ತು ಗುಂಡು ಹಾರಿಸಿದ್ದೇನೆ ಎಂದಿರುವ ಪರಶುರಾಮ್.
ಬೆಂಗಳೂರಿಗೆ ಪಯಣ
20 ದಿನದ ತರಬೇತಿಯ ನಂತರ ನನಗೆ ಆ ವ್ಯಕ್ತಿ ಒಂದು ಮೊಬೈಲ್ ನಂಬರ್ ನನಗೆ ಕೊಟ್ಟ. ಆ ನಂಬರ್ ಗೆ ನಾನು ಕೊಲೆಯ ತಯಾರಿಬಗೆಗೆ ಕಾಯಿನ್ ಬೂತ್ ನಿಂದ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದೆ. ನಂತರ ನನ್ನ ಕರೆ ಸ್ವೀಕರಿಸಿ ಮಾತನಾಡುತ್ತಿದ್ದ ಆ ವ್ಯಕ್ತಿಯ ಮಾತಿನಂತೆ ಸೆಪ್ಟೆಂಬರ್ 3 ರಂದು ಬೆಂಗಳೂರಿನ ಸುಂಕದಕಟ್ಟೆಯ ಮನೆಯೊಂದರಲ್ಲಿ ಉಳಿದೆ. ಆ ಮನೆಯಲ್ಲಿ ಸುಜಿತ್ ಅಲಿಯಾಸ್ ಪ್ರವೀಣ್ ಕೂಡಾ ಇದ್ದ.
ನಾನೇ ಶೂಟ್ ಮಾಡಿದೆ
ಕೇವಲ ಎರಡೇ ಎರಡು ಅಡಿದೂರದಿಂದ ನಾನು ಗೌರಿ ಲಂಕೇಶ್ ಗೆ ಗನ್ ನಿಂದ ಶೂಟ್ ಮಾಡಿದೆ. ಮೂರು ಗುಂಡು ಹೊಡೆದೆ. ನಂತರ ಸ್ವಲ್ಪ ಹಿಂದೆ ಬಂದು ಮತ್ತೆ ಗುಂಡು ಹಾರಿಸಿದೆ ಅದು ಗೊಡೆಗೆ ಬಿದ್ದಿತು. ಸುಮಾರು 5-6 ಸೆಕೆಂಡ್ ನಲ್ಲಿ ನಾವಂದು ಕೊಂಡ ಕೆಲಸ ಆಗಿಯೇ ಹೋಯ್ತು ಎಂದು ಹೇಳಿದ್ದಾನೆ.
ಶೂಟ್ ಮಾಡಿದ ಮೇಲೆ
ಶೂಟ್ ಮಾಡಿದ ಕೂಡಲೇ ನನ್ನ ಬಳಿ ಇದ್ದ ಗನ್ ಮತ್ತು ಜಾಕೆಟ್ ಅನ್ನು ಬೈಕ್ ಚಲಾಯಿಸುತ್ತಿದ್ದವ ತೆಗೆದುಕೊಂಡು “ಗುಡ್ ಜಾಬ್, ನಮಗಾರಿಗೂ ನೀನು ಕಾಲ್ ಮಾಡ್ಬೇಡ, ಸಮಯ ಬಂದಾಗ ನಾವೇ ನಿನ್ನ ಭೇಟಿ ಮಾಡ್ತೇವೆ” ಎಂದು ಹೇಳಿ ಹೋದ ಎಂದು ಎಸ್ ಐ ಟಿಗೆ ಹೇಳಿದ್ದಾನೆ.
ಆಡಿಕೊಂಡು ನಕ್ಕಿದ್ದ
ಗೌರಿ ಹತ್ಯೆಯ ಕೇಸಲ್ಲಿ ಕೆ.ಟಿ. ನವೀನ್ ನನ್ನು ಪೊಲೀಸರು ಬಂಧಿಸಿದ ಮಾಹಿತಿ ತಿಳಿದು, ಕೊಲೆ ಮಾಡಿದವನನ್ನು ಬಿಟ್ಟು ಯಾರೋ ಅಮಾಯಕನನ್ನು ಹಿಡಿದಿದ್ದಾರೆ ಎಂದು ಪರಶುರಾಮ್ ಆಡಿಕೊಂಡು ನಕ್ಕಿದ್ದನಂತೆ. ನಂತರ ಯಾವಾಗ ಸುಜಿತ್ ಅಲಿಯಾಸ್ ಪ್ರವೀಣ್ ನನ್ನು ಪೊಲೀಸ್ ಅರೆಸ್ಟ್ ಮಾಡಿದ್ರೋ ಆಗ ನಾನೂ ಕೂಡಾ ಅರೆಸ್ಟ್ ಆಗೋದು ಗ್ಯಾರಂಟಿ ಅಂತ ತಿಳ್ಕೊಂಡ್ನಂತೆ ಪರಶುರಾಮ.
126 ಕಾಯಿನ್ ಬೂತ್
ಎಸ್ ಐ ಟಿ ಯು ಲಕ್ಷಾಂತರ ಕರೆಗಳನ್ನ ಪರಿಶೀಲನೆ ನಡೆಸಿ, ಪರಶುರಾಮ್ ಕರೆ ಮಾಡಿದ್ದ ಕಾಯಿನ್ ಬೂತ್ ಗಳನ್ನ ಹಾಗೂ ಕರೆಗಳ ಮಾಹಿತಿ ಕಲೆಹಾಕಿದೆ. ಪರಶುರಾಮ್ ಒಟ್ಟು 126 ಕಾಯಿನ್ ಬೂತ್ ಬಳಸಿ ಕರೆ ಮಾಡಿದ್ದನಂತೆ.
ಪ್ರತ್ಯಕ್ಷದರ್ಶಿಗಳು
ಗೌರಿ ಲಂಕೇಶ್ ಹತ್ಯೆಯ ಪ್ರತ್ಯಕ್ಷದರ್ಶಿಗಳಾದ ಇಬ್ಬ ಪತ್ರಿಕೋದ್ಯಮ ವಿದ್ಯಾರ್ಥಿ ಮತ್ತು ಕೂಲಿ ಕೆಲಸದವರು ಪರಶುರಾಮ್ ನನ್ನ ಗುರುತಿಸಿದ್ದಾರೆ.