ರಾಜಕೀಯ

ಸರ್ಕಾರಕ್ಕೆ ರೈತರ ಹಿತವೇ ಮುಖ್ಯವಾಗಿದ್ದರೆ ಕಾಯ್ದೆ ವಾಪಾಸು ಪಡೆಯಬೇಕಿತ್ತಲ್ಲ? : ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು : ರೈತರ ಪ್ರತಿಭಟನೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದವನು ಬಿಜೆಪಿ ಕಾರ್ಯಕರ್ತ‌ ಎಂಬುದು ಪುರಾವೆಸಹಿತ ಸಾಬೀತಾಗಿದೆ. ಇಂತಹ ಬಿಜೆಪಿ ಈಗ ರೈತರಿಗೆ ಭಯೋತ್ಪಾದಕರ ಬೆಂಬಲ ಇದೆಯೆಂದು ಹೇಳುತ್ತಿರುವುದು ನಾಚಿಕೆಗೇಡು. ರೈತ ಚಳವಳಿಯಲ್ಲಿ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎನ್ನುವ ಖಚಿತ ಮಾಹಿತಿ ಸರ್ಕಾರದ ಬಳಿ ಇದ್ದರೆ ಅವರನ್ನು ಏಕೆ ಬಂಧಿಸಿಲ್ಲ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಳೆದ ಎರಡು ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯಲ್ಲಿ ನೂರಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡರೂ ರೈತ ವಿರೋಧಿ‌ ಕಾನೂನುಗಳನ್ನು ವಾಪಸು‌ ಪಡೆಯಲು ನಿರಾಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಪ್ರತಿಷ್ಠೆಯೇ ಮುಖ್ಯವಾಗಿದೆ. ಅವರ 56 ಇಂಚಿನ ಎದೆಯೊಳಗೆ ಬಡವರಿಗಾಗಿ ಮಿಡಿಯುವ ಹೃದಯವೇ ಇಲ್ಲ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರಕ್ಕೆ ರೈತರ ಸಮಸ್ಯೆಯನ್ನು ಬಗೆಹರಿಸುವ ನೈಜ ಕಾಳಜಿ ಇದ್ದಿದ್ದರೆ ಹನ್ನೊಂದು ಸುತ್ತು ಮಾತುಕತೆ ನಡೆಸುವ ಅಗತ್ಯ ಬೀಳುತ್ತಿತ್ತಾ? ಸರ್ಕಾರಕ್ಕೆ ರೈತರ ಹಿತವೇ ಮುಖ್ಯವಾಗಿದ್ದರೆ ಕಾಯ್ದೆ ವಾಪಾಸು ಪಡೆಯಬೇಕಿತ್ತಲ್ಲ? ಎಂದು ಬಿಜೆಪಿ ಸರ್ಕಾರಕ್ಕೆ ಪ್ರಶ್ನಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಬಂಡವಾಳಶಾಹಿಗಳ ಗುಲಾಮಗಿರಿ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುತ್ತೇವೆ ಅಂತ ಅದಾನಿ, ಅಂಬಾನಿಗೆ ಮಾತು ಕೊಟ್ಟಿದ್ದಾರೆ, ಹೀಗಾಗಿ ರೈತರು ಎಷ್ಟೇ ಪ್ರತಿಭಟನೆ ನಡೆಸಿದರೂ ಅವುಗಳನ್ನು ವಾಪಾಸು ಪಡೆಯುತ್ತಿಲ್ಲ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version