ದಿನದ ಸುದ್ದಿ
ಅಕ್ರಮ ಗಣಿಗಾರಿಕೆ ; ವ್ಯಕ್ತಿ ಕೊಲೆ
ಸುದ್ದಿದಿನ ಡೆಸ್ಕ್ : ಮಂಡ್ಯ ಜಿಲ್ಲೆಯ ತಾಲೂಕಿನ ನರಗಲು ಗ್ರಾಮದ ಮೋಹನ್ ಎಂಬ ವ್ಯಕ್ತಿ ಅಕ್ರಮ ಗಣಿಗಾರಿಕೆಗೆ ಬಲಿಯಾಗಿದ್ದಾರೆ.
ಮೋಹನ್ ಮೇ 15ರಂದು ಜಮೀನಿಗೆ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದರು. ಇಂದು ಹಾಸನ ಜಿಲ್ಲೆ ಹೊಳೆ ನರಸೀಪುರ ತಾಲೂಕಿನ ಭಂಟರ ತಾಳಾಳು ಗ್ರಾಮದಲ್ಲಿ ಮೋಹನ್ ಅವರ ಮೃತದೇಹ ಪತ್ತೆಯಾಗಿದೆ.
ಮೋಹನ್ ಅವರ ಜಮೀನಿನ ಪಕ್ಕದಲ್ಲೇ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಗಣಿಗಾರಿಕೆ ಮೇಲೆ ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಹೀಗಾಗಿ ಮೃತ ಮೋಹನ್ ಅಧಿಕಾರಿಗಳಿಗೆ ಮಾಹಿತಿ ಕೊಟ್ಟನೆಂದು ಶಂಕಿಸಿ ಹತ್ಯೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧ ಗಣಿ ಮಾಲೀಕ ತಮಿಳುನಾಡು ಮೂಲದ ರಾಜು, ಮೋಹನ್ ಹಾಗೂ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಮೋಹನ್ ಸಾವಿನ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಗ್ರಾಮಸ್ಥರು ಅಕ್ರಮ ಗಣಿ ಪ್ರದೇಶಕ್ಕೆ ದಾಳಿಯಿಡಲು ಮುಂದಾಗಿದ್ದಾರೆ. ಮೋಹನ್ ಹತ್ಯೆಗೆ ಕಾರಣರಾದ ಗಣಿ ಮಾಲೀಕನ ಸಹಾಯಕ್ಕೆ ಪೊಲೀಸರು ಯತ್ನಿಸುತ್ತಿರುವ ಆರೋಪ ಕೇಳಿ ಬಂದಿದ್ದು, ಅಕ್ರಮ ಗಣಿ ಪ್ರದೇಶದಿಂದ ಯಂತ್ರೋಪಕರಣಗಳನ್ನು ಸ್ಥಳಾಂತರಿಸುತ್ತಿದ್ದ ವಾಹನಗಳ ಚಕ್ರದ ಗಾಳಿ ತೆಗೆದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243