ದಿನದ ಸುದ್ದಿ
ಅಕ್ರಮ ಸಂಬಂಧ : ಪತ್ನಿ ರುಂಡ ಕತ್ತರಿಸಿ ಕೊಲೆಗೈದ ಪತಿ
ಸುದ್ದಿದಿನ, ಚಿಕ್ಕಮಗಳೂರು : ಅಕ್ರಮ ಸಂಬಂಧದಲ್ಲಿ ತೊಡಗಿದ್ದ ಪತ್ನಿಯ ರುಂಡವನ್ನು ಕತ್ತರಿಸಿ ಪೊಲೀಸ್ ಠಾಣೆಗೆ ಪತಿ ತಾನೇ ತಂದು ಘಟನೆ ವಿವರಿಸಿದ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವನಿಯಲ್ಲಿ ನಡೆದಿದೆ.
ಪತ್ನಿಯ ತಲೆ ಕತ್ತರಿಸಿ ಅಮಾನುಷವಾಗಿ ಕೊಲೆ ಮಾಡಿದ ಪತಿ ಸತೀಶ್ ಶಿವನಿ ಪೊಲೀಸ್ ಠಾಣೆಗೆ ತಂದು ಆರೋಪಿ ಶರಣಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಶಿವನಿ ಆರ್ ಎಸ್ ಗ್ರಾಮದಲ್ಲಿ ವಾಸವಿದ್ದ ಸತೀಶ್ ತನ್ನ ಪತ್ನಿ ರೂಪಾ ಶಿವನಿ ರೈಲ್ವೆ ನಿಲ್ದಾಣದಲ್ಲಿ ಪ್ರಿಯಕರನ ಜೊತೆ ಇದ್ದ ವೇಳೆ ಮಚ್ಚಿನಿಂದ ಕೊಚ್ಚಿ ಪತ್ನಿ ರೂಪಾಳನ್ನು ಹತ್ಯೆ ಮಾಡಿದ್ದಾನೆ.
ಶಿವನಿ ರೈಲ್ವೆ ನಿಲ್ದಾಣದ ಬಳಿ
ರೂಪ(30) ಪ್ರಿಯಕರನ ಜೊತೆ ಇದ್ದದ್ದನ್ನು ಕಂಡು ಕೆಂಡಾಮಂಡಲನಾದ ಸತೀಶ್ ಆಕೆಯ ತಲೆ ಕತ್ತರಿಸಿದ್ದಾನೆ. ಕಳೆದ 8 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ರೂಪಾ ಹಾಗೂ ಸತೀಶ್ ಗೆ ಇಬ್ಬರು ಮಕ್ಕಳಿದ್ದು ಕಳೆದೆರಡು ವರ್ಷದಿಂದ ಅದೇ ಗ್ರಾಮದ ಚಾಲನೊಬ್ಬನ ಜೊತೆ ರೂಪಾ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಈ ವಿಷಯ ಹಲವು ಬಾರಿ ಪಂಚಾಯ್ತಿ ನಡೆದು ರಾಜೀ ಸಹಾ ನಡೆದಿದೆ ಆದರೂ ತನ್ನ ಚಾಳಿ ಮುಂದುವರಿಸಿದ ರೂಪಾ ಕಳೆದ ರಾತ್ರಿ ಶಿವನಿ ರೈಲ್ವೆ ನಿಲ್ದಾಣದಲ್ಲಿ ಪ್ರಿಯಕರನೊಂದಿಗೆ ಕಾಣಿಸಿಕೊಳ್ಳುತ್ತಿದ್ದಂತೆ ಸತೀಶ್ ಆತನ ಮೇಲೆ ಮಚ್ಚು ಬೀಸಿದ್ದಾನೆ ಆತ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದಂತೆ ರೂಪಾಳನ್ನು ಕೊಚ್ಚಿ ಹತ್ಯೆ ಮಾಡಿದ್ದಾನೆ.
ನಂತರ ಪತ್ನಿ ರೂಪಾಳ ರುಂಡವನ್ನು ಚೀಲದಲ್ಲಿ ತುಂಬಿಕೊಂಡು ಶಿವನಿ ಪೊಲೀಸ್ ಠಾಣೆ ಬಂದ ಸತೀಶ್ ಪೊಲೀಸರ ಎದುರು ವಿಷಯವನ್ನು ಸಿನಿಮೀಯ ರೀತಿಯಲ್ಲಿ ವಿವರಿಸುತ್ತಾನೆ. ಅಜ್ಜಂಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.