ದಿನದ ಸುದ್ದಿ
ಫಸಲ್ ಭೀಮಾ ಯೋಜನೆಯಲ್ಲಿ ಅಕ್ರಮ | ಗ್ರಾಮ ಆಡಳಿತಾಧಿಕಾರಿ ಕೆ.ಸುರೇಶ ಸೇರಿ 8 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಹಾರಕನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹು ಗ್ರಾಮಗಳಲ್ಲಿ ಪ್ರಧಾನಮತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಗ್ರಾಮ ಆಡಳಿತಾಧಿಕಾರಿ ಕೋಸಗಿ ಸುರೇಶ ಸೇರಿ 8 ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಹಾರಕನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹುಲಿಕಟ್ಟೆ ಸರ್ಕಲ್ ವ್ಯಾಪ್ತಿಯ ಹಾರಕನಾಳು, ಹುಲಿಕಟ್ಟೆ, ಚನ್ನಳ್ಳಿ ತಾಂಡ, ಈಶಾಪುರ, ಹಾರಕನಾಳು ಸಣ್ಣತಾಂಡ, ಹಾರಕನಾಳು ದೊಡ್ಡತಾಂಡ, ಕನ್ನಾಯಕನಹಳ್ಳಿ ಸೇರಿ ಒಟ್ಟು 07 ಗ್ರಾಮಗಳ ಗ್ರಾಮ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೋಸಗಿ ಸುರೇಶ ಎಂಬುವವರು ರೈತರೊಂದಿಗೆ ಒಪ್ಪಂದ ಮಾಡಿಕೊಂಡು, ಪ್ರತಿ ವರ್ಷ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಬೆಳೆಗಳಿಗೆ ತಾವೇ ಎಲ್ಲಾ ರೈತರ ಜಮೀನಿಗೆ ಬೆಳೆ ವಿಮೆ ಹಣ ಪಾವತಿಸುವ ಮೂಲಕ ನಿರಂತರವಾಗಿ 3 ವರ್ಷಗಳಿಂದ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿಗಳನ್ನು ವಂಚಿಸುತ್ತ ಬಂದಿರುವ ಮಾಹಿತಿಯು ಸಾಕಷ್ಟು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುತ್ತದೆ. ಈ ಬಗ್ಗೆ ರೈತರು ಸಾಕಷ್ಟು ಪ್ರತಿಭಟನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳಿಗೂ ದೂರು ನೀಡಿರುತ್ತಾರೆ.
ಪ್ರಧಾನಮತ್ರಿ ಫಸಲ್ ಭೀಮಾ ಯೋಜನೆಯಲ್ಲಿನ ಭ್ರಷ್ಟಚಾರದ ಪ್ರಮುಖ ರೂವಾರಿಯಾದ ಕೋಸಗಿ ಸುರೇಶ ಎಂಬುವವರು ತಾವು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಗುಂಡಗತ್ತಿ ಸರ್ಕಲ್ ವ್ಯಾಪ್ತಿಯ ಬಹು ಗ್ರಾಮಗಳಲ್ಲಿಯೂ ಫಸಲ್ ಭೀಮಾ ಯೋಜನೆಯಲ್ಲಿ (ಕರ್ನಾಟಕ ರೈತ ಸುರಕ್ಷಾ ಫಸಲ್ ಭೀಮಾ ಯೋಜನೆ) ಸಾಕಷ್ಟು ಅವ್ಯವಹಾರ ನಡೆಸುತ್ತ ಬಂದಿರುತ್ತಾರೆ ಎಂಬ ಅಧಿಕೃತ ಮಾಹಿತಿ ಇರುತ್ತದೆ. ಇವರು ತಾವು ಕೆಲಸ ಮಾಡಿದ ಎಲ್ಲಾ ಸ್ಥಳಗಳಲ್ಲಿಯೂ ಸಾಕಷ್ಟು ಅವ್ಯವಹಾರದಲ್ಲಿ ಭಾಗಿಯಾಗಿದ್ದು, ಸಾಕಷ್ಟು ರೈತರಿಗೆ ಸರ್ಕಾರಿ ಯೋಜನೆಗಳನ್ನು ಮಾಡಿಸಿಕೊಡುವುದಾಗಿ ಕೋಟ್ಯಾಂತರ ರೂಪಾಯಿ ಲಂಚ ಪಡೆದಿರುತ್ತಾರೆ. ಹಾಗೆಯೇ ಬಡವರು, ಅಸಹಾಯಕರ ಜಮೀನುಗಳನ್ನು ಪ್ರಬಲರ ಹೆಸರಿಗೆ ವರ್ಗಾಹಿಸುವ ನೀಚ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ.
ಬಡವರ ಜಮೀನುಗಳನ್ನು ಪ್ರಬಲರ ಹೆಸರಿಗೆ ಮಾಡಿದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದು ನಂತರ ಮೂಲ ಖಾತೆದಾರರಿಗೆ ವರ್ಗಾವಣೆಯಾಗಿರುವ ಸಾಕಷ್ಟು ನಿದರ್ಶನಗಳಿಗೆ. ಆದರೆ ಯಾವುದೇ ಒಂದು ಪ್ರಕರಣದಲ್ಲಿಯೂ ಈ ಅಧಿಕಾರಿಗೆ ಶಿಕ್ಷೆಯಾಗದಂತೆ ಹಿರಿಯ ಅಧಿಕಾರಿಗಳರಿವರನ್ನು ಕಾಪಾಡಿಕೊಂಡು ಬಂದಿರುತ್ತಾರೆ. ಈ ಕಾರಣಕ್ಕಾಗಿಯೇ ಫಸಲ್ ಭೀಮಾ ಯೋಜನೆಯಂತಹ ದೊಡ್ಡ ಮಟ್ಟದ ಹಗರಣಕ್ಕೂ ಮುಂದಾಗಿರುತ್ತಾರೆ.
ಈ ಎಲ್ಲಾ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಫಸಲ್ ಭೀಮಾ ಯೋಜನೆಯ ಅವ್ಯವಹಾರದಲ್ಲಿ ಭಾಗಿಯಾಗಿರುವ ಹಾರಕನಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಎಂ.ಶಿವಣ್ಣ, ಕಂದಾಯ ನಿರೀಕ್ಷಕ ಶ್ರೀ ರಾಘವೇಂದ್ರ, ಹರಪನಹಳ್ಳಿ ತಾಲ್ಲೂಕು ಉಪ ತಹಶೀಲ್ದಾರರಾದ ಶ್ರೀಮತಿ ಕವಿತಾ, ತಹಶೀಲ್ದಾರರಾದ ಶ್ರೀ ಬಿ.ವಿ. ಗಿರೀಶ್‌ಬಾಬು, ಉಪವಿಭಾಗಾಧಿಕಾರಿಯಾದ ಶ್ರೀ ಸುರೇಶ್‌ಕುಮಾರ್ ಟಿ, ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ವೈ.ಹೆಚ್. ಚಂದ್ರಶೇಖರ್, ವಿಜಯನಗರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕವಿತಾ ಮನ್ನಿಕೇರಿ ಇವರುಗಳ ವಿರುದ್ಧ ದೂರು ದಾಖಲಿಸಿ, ಈ ಎಲ್ಲಾ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂಬುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243