ದಿನದ ಸುದ್ದಿ
ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ | ‘ವೀರವನಿತೆ ಓಬವ್ವ ಪಡೆ’ಗೆ ಚಾಲನೆ
ಸುದ್ದಿದಿನ, ಚಿತ್ರದುರ್ಗ | ಕಾನೂನಿನ ಭಯ ಇಲ್ಲದೆ ದೌರ್ಜನ್ಯಗಳು ಹೆಚ್ಚಾಗುತ್ತಿದೆ ಅದರಲೂ ಮಹಿಳೆಯ ಮೇಲಿನ ದೌರ್ಜನ್ಯ ಇನ್ನು ಜಾಸ್ತಿಯಾಗುತ್ತಿದೆ ಎಂದು ಪೂರ್ವ ವಲಯದ ಪೋಲಿಸ್ ಮಹಾ ನಿರೀಕ್ಷಕರಾದ ಶರತ್ ಚಂದ್ರ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಅಸ್ಥಿತ್ವಕ್ಕೆ ಬಂದ ಓಬವ್ವ ಪಡೆಗೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಓಬವ್ವ ಪಡೆ ಕರ್ನಾಟಕದ ಯಾವ ಜಿಲ್ಲೆಯಲ್ಲೂ ಇಲ್ಲ, ಇಲ್ಲಿ ಮಾಡಿರುವುದು ಶ್ಲಾಘನೀಯ ಕಾರ್ಯ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉತ್ತಮವಾದ ಸ್ಥಾನವನ್ನು ನೀಡಲಾಗಿದೆ. ಅವರ ಬಗ್ಗೆ ಕೀಳಾಗಿ ಕಾಣುವುದು ಸೇರಿದಂತೆ ದೌರ್ಜನ್ಯ ಮಾಡಿದಲ್ಲಿ ಕಾನೂನಿಗೆ ಗುರಿಯಾಗುತ್ತಾರೆ. ಮಹಿಳೆಯರ ರಕ್ಷಣೆ ಕೇವಲ ಪೊಲೀಸರ ಕೆಲಸವಲ್ಲ ಅದು ಎಲ್ಲರ ಹೊಣೆಯಾಗಿದೆ ಎಂದರು.
ಬಸ್ಸು ರೈಲು ಜನಸಂದಣೆ ಸೇರಿದಂತ ಪ್ರದೇಶಗಳಲ್ಲಿ ಮಹಿಳೆಯರನ್ನು ಚೂಡಾಯಿಸುವವರ ಸಂಖ್ಯೆ ಹೆಚ್ಚಾಗಿದೆ. ತಲೆ ಎತ್ತಿ ನಡೆಯಲು ಆಗುವುದಿಲ್ಲಾ, ಕೆಲ ಪುಂಡರಿಗೆ ಯಾವುದೇ ಭಯ ಇರುವುದಿಲ್ಲ. ಮತ್ತು ನಮ್ಮ ಮೇಲೆ ಯಾವುದೇ ದೂರು ಕೊಡುವುದಿಲ್ಲಾ ಎಂಬುದು ಅವರಿಗೆ ಧೈರ್ಯ. ಇದರ ವಿರುದ್ದ ಮಹಿಳೆ ಸಿಡಿದೇಳಬೇಕು.ಮತ್ತು ಧೈರ್ಯವಾಗಿ ದೂರು ನೀಡಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, ಪುಂಡರಿಗೆ ಕಾನೂನಿನ ಭಯ ಮೂಡಿಸಬೇಕು. ಈ ನಿಟ್ಟಿನಲ್ಲಿ ಓಬವ್ವ ಪಡೆ ಸನ್ನದ್ದವಾಗಿದೆ. ಇವರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಇತ್ತೀಚಿನ ದಿನದಲ್ಲಿ ಮಾದಕ ವಸ್ತುಗಳನ್ನು ಬಳಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರಾಟ ಮಾಡಲಾಗುತ್ತಿದೆ ಈ ಬಗ್ಗೆ ಮಾಹಿತಿ ನೀಡಿ, ಕಾಲೇಜಿನ ಆಡಳಿತ ಮಂಡಳಿಯು ಈ ಬಗ್ಗೆ ಎಚ್ಚರ ವಹಿಸಬೇಕು. ಮೊಬೈಲ್ ನಿಂದಲೂ ಇಂದು ಬಹಳಷ್ಟು ಅಘಾತಕಾರಿ ಘಟನೆಗಳು ನಡೆಯುತ್ತಿವೆ. ಆದ್ದರಿಂದ ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಐಜಿಪಿ ಕಿವಿ ಮಾತು ಹೇಳಿದರು.
ಸೈಬರ್ ಕ್ರೈಮ್ ಗಳ ಬಗ್ಗೆಯೂ ಸಹಾ ಅರಿವು ಮೂಡಿಸುವ ಕಾರ್ಯಕ್ರಮವನ್ನು ಓಬವ್ವ ಪಡೆ ಮಾಡಲಿದೆ. ಪೋಕ್ಸೋ ಕಾಯಿದೆ ಅತ್ಯಂತ ಕಠಿಣವಾದ ಕಾನೂನು. ಗ್ಯಾಂಗ್ ರೇಪ್, ಮತ್ತು ಮಕ್ಕಳ ಮೇಲೆ ಅತ್ಯಾಚಾರ ನಡೆದರೆ ಮರಣ ದಂಡನೆ ಶಿಕ್ಷೆ ಇದೆ ಇವೆಲ್ಲದರ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು.
ಮಕ್ಕಳ ಶೈಕ್ಷಣಿಕ ಅವಧಿ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರಬೇಕು. ಪ್ರೇಮ ಪ್ರಕರಣದಲ್ಲಿ ಸಿಲುಕುವುದಕ್ಕೆ ಅಲ್ಲಾ ಎಂಬದನ್ನು ತಿಳಿದುಕೊಳ್ಳಬೇಕು ಎಂದು ಶರತ್ ಚಂದ್ರ ಕರೆ ನೀಡಿದರು.
ಜಿ.ಪಂ.ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಿಲ್ಲಾಧಿಕಾರಿ ವಿವಿ ಜೋತ್ಸ್ನಾ ಜಿ.ಪಂ.ಸಿಇಓ ರವೀಂದ್ರ, ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ್ ಎಂ.ಜೋಶಿ, ಹೆಚ್ಚುವರಿ ರಕ್ಷಣಾಧಿಕಾರಿ ರಾಮಲಕ್ಷ್ಮಣ್ ಅರೆಸಿದ್ದಿ, ಪ್ರಾಧ್ಯಾಪಕ ನಟರಾಜ್, ಉಪವಿಭಾಗಾಧಿಕಾರಿ ವಿಜಯಕುಮಾರ್, ನಗರಸಭೆ ಅಧ್ಯಕ್ಷ ತಿಮ್ಮಣ್ಣ ಸೇರಿದಂತೆ ಇತರರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401