ದಿನದ ಸುದ್ದಿ
ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಭಾರತ-ಅಮೆರಿಕ ಕಾರ್ಯತಂತ್ರ ಪಾಲುದಾರಿಕೆ ಮಹತ್ವದ್ದು : ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ ಡೆಸ್ಕ್ : ಭಾರತ ಮತ್ತು ಅಮೆರಿಕ ಜಗತ್ತಿನ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ಸಹಜ ಪಾಲುದಾರರಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ನಿನ್ನೆ ವರ್ಚುವಲ್ ಮೂಲಕ ಮಾತುಕತೆ ನಡೆಸಿದ ಪ್ರಧಾನಮಂತ್ರಿ, ಪ್ರಸ್ತುತ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಮುಂದಿನ 25 ವರ್ಷಗಳಲ್ಲಿ ಭಾರತ-ಅಮೆರಿಕ ಬಾಂಧವ್ಯ ಮಹತ್ವದ ಪಾತ್ರವಹಿಸಲಿದೆ ಎಂದರು.
ಉಕ್ರೇನ್‌ನಲ್ಲಿ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಭಾರತ-ಅಮೆರಿಕ ನಡುವಿನ ಮಾತುಕತೆ ಮಹತ್ವದ್ದಾಗಿದ್ದು, ಉಕ್ರೇನ್‌ನ ನಾಗರಿಕರ ಸುರಕ್ಷತೆ ಹಾಗೂ ಅವರಿಗೆ ಔಷಧ ಸೇರಿದಂತೆ ಎಲ್ಲ ಮಾನವೀಯ ನೆರವಿನ ತಡೆರಹಿತ ಪೂರೈಕೆಗೆ ಭಾರತ ಹೆಚ್ಚಿನ ಒತ್ತು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗೆ ರಷ್ಯಾ ಮತ್ತು ಉಕ್ರೇನ್ ಮುಂದಾಗಬೇಕು ಎಂದು ಭಾರತ ಬಯಸಿದ್ದು, ಈ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳ ಅಧ್ಯಕ್ಷರೊಂದಿಗೆ ತಾವು ದೂರವಾಣಿ ಮೂಲಕ ಮನವಿ ಮಾಡಿಕೊಂಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಸಂಘರ್ಷಪೀಡಿತ ಉಕ್ರೇನ್‌ನಿಂದ ಸುಮಾರು 20ಸಾವಿರಕ್ಕೂ ಹೆಚ್ಚು ಭಾರತೀಯ ನಾಗರಿಕರನ್ನು ಸತತ ಪ್ರಯತ್ನಗಳ ಮೂಲಕ ಸ್ವದೇಶಕ್ಕೆ ಕರೆತರಲಾಯಿತು.
ದೇಶದ ಸಂಸತ್‌ನಲ್ಲಿ ಉಕ್ರೇನ್ ಸಂಘರ್ಷ ಕುರಿತು ವಿಸ್ತೃತ ಚರ್ಚೆ ನಡೆಯಿತು ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು.
ಉಕ್ರೇನ್‌ನ ಬೂಚಾದಲ್ಲಿ ಇತ್ತೀಚೆಗೆ ನಡೆದ ನಾಗರಿಕರ ಹತ್ಯೆ ಆತಂಕಕಾರಿಯಾಗಿದ್ದು, ಇದನ್ನು ಭಾರತ ಬಲವಾಗಿ ಖಂಡಿಸುತ್ತದೆ ಮತ್ತು ಹತ್ಯಾಕಾಂಡ ಕುರಿತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸುತ್ತದೆ ಎಂದು ಪ್ರಧಾನಿ ತಿಳಿಸಿದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಪಾಲುದಾರಿಕೆ ಬಲಗೊಳ್ಳುತ್ತಿದೆ ಎಂದರು.
ಎರಡೂ ರಾಷ್ಟ್ರಗಳ ನಡುವಿನ ಕಾರ್ಯತಂತ್ರ ಪಾಲುದಾರಿಕೆ ಮತ್ತಷ್ಟು ಬಲಗೊಳ್ಳಲು ನಿರಂತರ ಮಾತುಕತೆ ಮತ್ತು ಸಮಾಲೋಚನೆ ಅತ್ಯಗತ್ಯ ಎಂದು ಜೋ ಬೈಡೆನ್ ತಿಳಿಸಿದರು.
Addressing the India-US virtual summit with @POTUS @JoeBiden. https://t.co/sgYlj2nqSG
— Narendra Modi (@narendramodi) April 11, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243