ಲೈಫ್ ಸ್ಟೈಲ್
ಭಾರತದ ಸ್ವಾತಂತ್ರ್ಯಕ್ಕಿಂದು ಅಮೃತ ಮಹೋತ್ಸವ
- ಹನುಮಂತ ದಾಸರ ಹೊಗರನಾಳ
ಜಗತ್ತಿನ ಅತ್ಯಂತ ವೈವಿಧ್ಯಮಯ, ಹಾಗೂ ಸಂಪದ್ಭರಿತವಾದ, ಕಲೆ ಸಾಹಿತ್ಯ ಸಂಸ್ಕೃತಿ ವಿಜ್ಞಾನ ಮತ್ತು ತಂತ್ರಜ್ಞಾನ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿದ ದೇಶ ಭಾರತ. ಇಂತಹ ಅಸಾಮಾನ್ಯ ರಾಷ್ಟ್ರದ ಶಾಂತಿ ಸಂಪತ್ತನ್ನು ಕೊಳ್ಳೇ ಹೊಡೆಯಲು ಬ್ರಿಟಿಷರು ಭಾರತವನ್ನು 200 ವರ್ಷಗಳ ವರೆಗೆ ಆಳಿ ಅಪಾರ ಸಂಪತ್ತನ್ನು ದೋಚಿದರು.
ಮೂಲ ಭಾರತೀಯರನ್ನು ತಮ್ಮ ಸೇವಕರನ್ನಾಗಿ ಮಾಡಿಕೊಂಡು ನಮ್ಮ ನೆಲದಲ್ಲೇ ಬೆಳೆಯುವ ಫಸಲಿಗೆ ತೆರಿಗೆ ಪಡೆದು ನಾವು ಬದುಕುವ ಕೆಲ ಹಕ್ಕನ್ನೇ ಕಿತ್ತುಕೊಂಡು ಬ್ರಿಟಿಷರ ಪ್ರತೀ ನಿಯಮಗಳಿಗೆ ಶರಣಾಗಿ ಅವರ ದಬ್ಬಾಳಿಕೆಗೆ ಗುರಿಯಾಗಿ ಬದುಕು ಸಾಗಿಸಿದ ದೇಶ ಕೊನೆಗೊಂದು ದಿನ ದೇಶಕ್ಕಾಗಿ ಜೀವ ಹೋದರೂ ಚಿಂತೆಯಿಲ್ಲ ನಮ್ಮ ಭಾರತ ಮಾತೆಗಾಗಿ ಭಾರತೀಯ ನೆಲಕ್ಕಾಗಿ ನಮ್ಮ ಪ್ರಾಣವನ್ನು ತ್ಯಾಗ ಮಾಡಿ ಬ್ರಿಟಿಷರನ್ನು ಭಾರತೀಯ ಭವ್ಯ ಭೂಮಿಯಿಂದ ಓಡಿಸಬೇಕು ನಮ್ಮ ಭಾರತ ಮಾತೆಯನ್ನು ಅವರಿಂದ ಬಿಡುಗಡೆಗೊಳಿಸಿಕೊಳ್ಳಬೇಕೆಂಬ ಕಠೋರವಾದ ನಿರ್ಧಾರಗಳು ಪ್ರತಿಯೊಬ್ಬ ಭಾರತೀಯ ವೀರರಲ್ಲಿ ಹುಟ್ಟತೊಡಗಿದವು.
ಅಂತೆಯೇ ಅಂತಹ ಕಠೋರ ನಿರ್ಧಾರಗಳಿಗೆ ಅಣಿಯಾಗಿ ಬ್ರಿಟಿಷರ ವಿರುದ್ಧ ಹಲವಾರು ದಂಗೆಗಳು ಜರುಗಿದವು ಮತ್ತು ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸಲು ಹಲವಾರು ಚಳುವಳಿಗಳು ಕೂಡ ನಡೆದವು. ಹೀಗೆ ದಂಗೆಗಳು ಚಳುವಳಿಗಳನ್ನು ಹಮ್ಮಿಕೊಂಡು ಬ್ರಿಟಿಷರ ಎದುರಿಗೆ ಎದೆಗೊಟ್ಟು ನಿಂತು ಹೋರಾಡಿದ ಕ್ಷಣಗಳೇ ಸ್ವಾತಂತ್ರ್ಯ ದಂಗೆಗಳು.
ಈ ಸ್ವಾತಂತ್ರ್ಯ ದಂಗೆಗಳ ಮೂಲಕ ಭಾರತೀಯ ವೀರನಾಯಕರ ಧೈರ್ಯ ಶೌರ್ಯ ಹೊತ್ತ ತೀವ್ರಗಾಮಿಗಳ ಮತ್ತು ಶಾಂತಿ ಸಮ್ಮತಿ ಭಾವನೆಯ ಮಂದಗಾಮಿಗಳ ಆತ್ಮಾಭಿಮಾನ ಮತ್ತು ದೇಶಭಕ್ತಿಗಾಗಿ ರಕ್ತವನ್ನೇ ಚೆಲ್ಲಲು ಸಿದ್ಧವಾಗಿರುವ ಭಾರತೀಯ ಮಹಾನ್ ನಾಯಕರರ ಹೋರಾಟಗಳನ್ನು ಅರಿತ ಬ್ರಿಟಿಷರು ಕೊನೆಗೆ ” ಭಾರತವನ್ನು ಬಿಟ್ಟು ತೊಲಗಿ ” ಎಂಬ ಕಠೋರ ವಾಕ್ಯದಂತೆ ರಾತ್ರೋರಾತ್ರಿ ಬ್ರಿಟಿಷರು ಭಾರತ ಬಿಟ್ಟು ಹೊರಡುವ ಮೂಲಕ ಮಧ್ಯೆ ರಾತ್ರಿ ಭಾರತೀಯರಿಗೆ ಸ್ವಾತಂತ್ರ್ಯ ದೊರಕುವಂತಾಯಿತು.
ಆದರೇ ಅಷ್ಟೊತ್ತಿಗಾಗಲೇ ಭಾರತದ ಪ್ರಮುಖ ಸಂಪತ್ತನ್ನು ದೋಚಿ ನಡೆಯುವುದಷ್ಟೇ ಅಲ್ಲದೇ ಅವರು ಶಿಕ್ಷಣಕ್ಕೆ ಸಂಬಂಧಿಸಿದ ಹೊಸ ನೀತಿ ನಿಯಮಗಳನ್ನು ಜಾರಿಗೊಳಿಸಿದ್ದು , ಇಂಗ್ಲಿಷ್ ಶಿಕ್ಷಣವನ್ನು ಹುಟ್ಟುಹಾಕಿದ್ದು ಬ್ರಿಟಿಷರು ಭಾರತಕ್ಕೆ ಕೊಟ್ಟ ಕೊಡುಗೆಯಾಗಿವೆ ಎಂಬುದಕ್ಕೆ ಅವರ ವಾಸ್ತುಶಿಲ್ಪದ ಕಟ್ಟಡಗಳೇ ಕಾರಣ.
ಹೀಗೆ ಮುಂದುವರೆದ ಭಾರತ ವೀರ ನಾಯಕರ ತ್ಯಾಗ ಬಲಿದಾನಗಳಿಂದ, ದಂಗೆ ಚಳುವಳಿ ಹೋರಾಟಗಳಿಗೆ ಫಲ ದೊರೆಯುವಂತೆ 15 ಆಗಸ್ಟ್ 1947ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು, ದೇಶದ ತುಂಬೆಲ್ಲಾ ಸ್ವಾತಂತ್ರ್ಯ ಜಯಕಾರಗಳ ಕಹಳೆ ಮೊಳಗತೊಡಗಿದವು, ಮನೆ ಮನೆಯಲ್ಲಿ ಮನ ಮನದಲ್ಲಿ ಮಹೋತ್ಸವಗಳು ಮೊಳಗಿದವು, ಎಲ್ಲೆಡೆಯಲ್ಲಿ ಜಯಕಾರಗಳ ಕೂಗು ಮುಗಿಲಿಗೆ ಮುಟ್ಟುವಂತಿತ್ತು.
ಮುಂದೆ 9 ಡಿಸೇಂಬರ್ 1947 ರಿಂದ 26 ನವೆಂಬರ್ 1949 ರವರೆಗೆ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು 26 ಜನೆವರಿ 1950 ರಂದು ಅಂಗೀಕರಿಸಲ್ಪಡುತ್ತದೆ. ಅದೇ ದಿನವನ್ನು ಪ್ರತೀ ವರ್ಷ ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ.
ಭಾರತ ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೆ ಬದುಕನ್ನು ಕಟ್ಟಿಕೊಳ್ಳಲು ಸರ್ಕಾರವನ್ನು ರಚನೆ ಮಾಡುತ್ತದೆ.
ಸ್ವಾತಂತ್ರ್ಯ ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರಪ್ರಸಾದ್(1950-1962) ಹಾಗೂ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು( 15 ಆಗಸ್ಟ್ 1947 – 27 ಮೇ 1964) ರವರ ಅಧಿಕಾರ ಮತ್ತು ಆಡಳಿತದ ದಿನದಿಂದ ಇಂದಿಗೆ ಸ್ವಾತಂತ್ರ್ಯ ಭಾರತಕ್ಕೆ 75 ವರ್ಷ ತುಂಬುತಲಿದೆ. ಈ ಸಂಭ್ರಮವು ಪ್ರಸ್ತುತ ಹಾಗೂ ವಿಶೇಷ ಬುಡಕಟ್ಟು ಜನಾಂಗದಿಂದ ರಾಷ್ಟ್ರಪತಿ ಹುದ್ದೆಗೇರಿದ ಶ್ರೀಮತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತಧಿಕಾರದಲ್ಲಿ ಸ್ವಾತಂತ್ರ್ಯತ್ಸವದ ” ಅಜಾದಿ ಕಾ ಅಮೃತ್ ಮಹೋತ್ಸವ ” ಎಂಬ ಶೀರ್ಷಿಕೆಯಡಿಯಲ್ಲಿ ಸ್ವಾತಂತ್ರ್ಯತ್ಸವವನ್ನು ಆಚರಣೆ ಮಾಡಲು ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿರುವುದು ತುಂಬಾ ಸಂತೋಷದ ಸಂಗತಿ.
ಹಾಗೆಯೇ ಭಾರತಕ್ಕೆ ಅಸಾಧ್ಯವೆನಿಸಿದ್ದ ಪ್ರತಿಯೊಂದು ಕ್ಷಣಗಳನ್ನೊಮ್ಮೆ ತಿರುಗಿ ನೋಡಿದಾಗ ನಮಗೆ ನಮ್ಮ ಮೇಲೆ ತುಂಬಾ ಸಂತೋಷ ಉಂಟಾಗುವಂತಾಗಿದೆ. ಇಂದು ಇಡೀ ವಿಶ್ವವೇ ನಮ್ಮನ್ನು ತಲೆ ಎತ್ತಿ ನೋಡುವಂತಹ ಸಮಯ ನಮ್ಮದಾಗಿದೆ. ಅಷ್ಟೇ ಅಲ್ಲದೇ ಈ 75ನೇ ಸ್ವಾತಂತ್ರತ್ಯೋತ್ಸವ ಆಚರಣೆ ಮುಂದಿನ 25 ವರ್ಷಗಳ ಅಂದರೆ ಮುಂದಿನ ಶತಮಾನಕ್ಕೆ (100 ವರ್ಷಗಳು )ಪೂರಕವಾಗುವಂತಿರಬೇಕು.
ಈ ಅಜಾದಿ ಕಾ ಅಮೃತ ಮಹೋತ್ಸವವು ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ದೇಶದ ಏಕತೆಗಾಗಿ ದುಡಿದ ವೀರ ನಾಯಕರಿಗೆ, ದೇಶವನ್ನು ವಿಶ್ವ ಮಟ್ಟಕ್ಕೆ ಪರಿಚಯಿಸುತ್ತಿರುವ ಪ್ರತಿಯೊಂದು ಕ್ಷೇತ್ರದ ಮಾಹಾನ್ ಸಾಧಕರಿಗೆ ಗೌರವ ಸಲ್ಲಬೇಕಿದೆ ಮತ್ತು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಾನ್ ನಾಯಕರುಗಳ ಕನಸನ್ನು ನನಸು ಮಾಡುವಲ್ಲಿ ನಾವು ನಿರತರಾಗಬೇಕಿದೆ ಹಾಗೂ ಈ ಅಮೃತ ಮಹೋತ್ಸವವೂ ಕೂಡ ಅವರ ಉಸಿರಿಗೆ ಸಲ್ಲಬೇಕಿದೆ.
ದೇಶದ ಹುತಾತ್ಮರಿಗೆ ಹಾಗೂ ಹೋರಾಟಗಾರರಿಗೆ ಅವರ ಕನಸಿನ ಭಾರತದ ಕನಸನ್ನು ನಾವು ನನಸು ಮಾಡುವಲ್ಲಿ ಮುಂದೆ ಸಾಗಬೇಕಿದೆ ಮತ್ತು 2047 ರ ಸ್ವಾತಂತ್ರತ್ಯೋತ್ಸವ ಹಬ್ಬವನ್ನು ಆಚರಿಸುವ ಹೊತ್ತಿಗೆ ಭಾರತವನ್ನು ಮತ್ತಷ್ಟು ಎತ್ತರದ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಿದೆ, ವಿಶ್ವಕ್ಕೆ ಭಾರತದ ಪ್ರತಿಷ್ಠೆಯನ್ನು ತೋರಿಸಬೇಕಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರ, ಹೋರಾಟಕ್ಕೆ ಸಾಕ್ಷಿಯಾದವರನ್ನು ಮತ್ತು ಹೋರಾಟದಲ್ಲಿ ಭಾಗಿಯಾದವರನ್ನು ಗುರುತಿಸದೇ ಇರುವಂತಹ ಮಹಾನ್ ವ್ಯಕ್ತಿಗಳನ್ನು ಹಾಗೂ ರಾಷ್ಟ್ರ ಸಮಾಜಕ್ಕಾಗಿ ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಈ ಅಮೃತ ಮಹೋತ್ಸವಕ್ಕೆ ಸ್ಫೂರ್ತಿಯಾಗಬೇಕಿದೆ. ಹಾಗೂ ವಿಶೇಷವಾಗಿ ಸ್ವಾತಂತ್ರ್ಯತ್ಸವದ ದಿನದಂದು ಜನಿಸಿ ಗಣರಾಜ್ಯೋತ್ಸವ ದಿನದಂದು ಬ್ರಿಟಿಷರಿಂದ ಗಲ್ಲಿಗೆ ಶರಣಾದ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾದ ವೀರಯೋಧ ಸಂಗೊಳ್ಳಿ ರಾಯಣ್ಣನನ್ನು ಸ್ಮರಿಸಬೇಕಿದೆ.
ರಾಷ್ಟ್ರ ನಿರ್ಮಾಣಕ್ಕಾಗಿ ಅವಶ್ಯವಾಗಿ ಬೇಕಾಗಿರುವ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯ ಹಾಗೂ ವಿಭಿನ್ನ ಅಭಿರುದ್ಧಿಪರ ಯೋಜನೆಗಳನ್ನು ಜಾರಿಗೆಗೊಳಿಸುವ ಮೂಲಕ ಜಾತಿ ವ್ಯವಸ್ಥೆ, ಧರ್ಮ ವ್ಯವಸ್ಥೆ, ಲಿಂಗ ತಾರತಮ್ಯ, ಅಸಮಾನತೆ, ನಿರುದ್ಯೋಗ, ಮಹಿಳಾ ದೌರ್ಜನ್ಯ ಹೀಗೆ ಮುಂತಾದ ರಾಷ್ಟ್ರ ಪ್ರಗತಿಗೆ ಮುಳ್ಳಾದ ಸಮಸ್ಯೆಗಳನ್ನು ಬೇರು ಸಮೇತ ಕಿತ್ತು ಒಗೆಯುವಂತಹ ಪರಿಹಾರಗಳನ್ನು ರೂಪಿಸಬೇಕು ಜೊತೆಗೆ ಸಂವಿಧಾನವನ್ನು ಗೌರವಿಸಿ ಸಂವಿಧಾನದ ಪ್ರತಿಯೊಂದು ಆಶಯಕ್ಕೆ ಬದ್ಧರಾಗಬೇಕು, ಒಳ್ಳೆಯ ವಿಚಾರಗಳನ್ನು ಯುವಕರ ಮನದಲ್ಲಿ ಬಿತ್ತುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಯುವಕರಲ್ಲಿ ಉತ್ತೇಜನ ತುಂಬುವತಾಗಬೇಕು, ರಾಷ್ಟ್ರ ನಿರ್ಮಾಣಕ್ಕೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹಾನ್ ನಾಯಕರ ಕನಸಿನ ಭಾರತಕ್ಕೆ ಅವರಿವರೆನ್ನದೆ ನಾವೆಲ್ಲರೂ ಕೈ ಜೋಡಿಸಿ ವಿಶ್ವವೇ ಭಾರತದತ್ತ ತಲೆಎತ್ತಿ ನೋಡುವಂತಹ ಕಾರ್ಯ ಮಾಡಬೇಕಿದೆ ಹಾಗೂ ಈ 75ನೇ ಸ್ವಾತಂತ್ರ್ಯತ್ಸವದ ಅಮೃತ ಮಹೋತ್ಸವ ದಿನದಿಂದಲೇ 100 ವರ್ಷದ ಸ್ವಾತಂತ್ರ್ಯತ್ಸವದ ಸಂಭ್ರಮಕ್ಕಾಗಿ ನಾವು ಮತ್ತಷ್ಟು ಈಗಿಂದಲೇ ರೂಪುರೇಷಗಳನ್ನು ಹಾಕಿಕೊಳ್ಳಬೇಕಿದೆ ಆಗಲೇ ಭಾರತಕ್ಕೆ ಅಸಾಧ್ಯವೆಂಬುದು ಯಾವ ಪದವೂ ಇಲ್ಲ ಎಂದು ಇಡೀ ವಿಶ್ವಕ್ಕೆ ತೋರಿಸಲು ಸಾಧ್ಯವಾಗುತ್ತದೆ.
(ಲೇಖಕರು : ಹನುಮಂತ ದಾಸರ ಹೊಗರನಾಳ.
ಮೊ : 9945246234)