ಬಹಿರಂಗ

ದೇಹವನ್ನೇ ವಿಷವಾಗಿಸುವ ದ್ವೇಷ

Published

on

  • ವಿವೇಕಾನಂದ. ಹೆಚ್.ಕೆ

ನಸ್ಸನ್ನೇ ಘಾಸಿಗೊಳಿಸುವ ಅಸೂಯೆ.ವ್ಯಕ್ತಿತ್ವವನ್ನೇ ನಾಶ ಪಡಿಸುವ ಆಕ್ರೋಶ. ಪಾಕಿಸ್ತಾನ ಹಾಳಾಗಿದ್ದು ಏಕೆ ಗೊತ್ತೆ?ಅದು ಒಂದು ಧರ್ಮದ ಆಧಾರದಲ್ಲಿ ದೇಶವನ್ನು ಸ್ಥಾಪಿಸಿಕೊಂಡಿದ್ದರಿಂದ. ಧರ್ಮ ಯಾವಾಗಲೂ ಬದಲಾವಣೆಯ ಮತ್ತು ಪ್ರಗತಿಯ ವಿರೋಧಿ.
ಸ್ವತಂತ್ರ ಚಿಂತನೆಗಿಂತ ಗುಲಾಮಗಿರಿಯ ಮನೋಭಾವವನ್ನು ಪ್ರೋತ್ಸಾಹಿಸುತ್ತದೆ.ಅದರ ಪರಿಣಾಮ ನಿಂತ ನೀರು ಕೊಳೆಯಲಾರಂಬಿಸಿದೆ.

ಎರಡನೆಯದಾಗಿ,
ಹಿಂದು ಧರ್ಮವನ್ನು, ಅದರ ಜನರನ್ನು, ಅವರು ವಾಸಿಸುವ ಭಾರತವನ್ನು ಅತಿಯಾಗಿ ದ್ವೇಷಿಸಲಾರಂಭಿಸಿತು. ಅದರ ಎಲ್ಲಾ ಕಾರ್ಯಚಟುವಟಿಕೆಗಳು ಭಾರತದ ವಿರೋಧಿ ನೀತಿಯಾಗಿಯೇ ರೂಪಿಸಲ್ಪಟ್ಟಿತು. ಎಲ್ಲವೂ ನಕಾರಾತ್ಮಕ ಚಿಂತನೆ. ಪರಿಣಾಮ ಆಧೋಗತಿ.

ಮೂರನೆಯದಾಗಿ,
ತನ್ನ ಭೂಪ್ರದೇಶವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದಕ್ಕಿಂತ ತನ್ನದಲ್ಲದ ಆದರೆ ತನ್ನ ಧರ್ಮದವರು ಹೆಚ್ಚಾಗಿದ್ದಾರೆ ಎಂಬ ಕಾರಣದಿಂದ ಕಾಶ್ಮೀರದ ಸ್ವತಂತ್ರ ಹೋರಾಟಕ್ಕೆ ಅಸೂಯೆಯಿಂದ ಪ್ರೋತ್ಸಾಹ ನೀಡಿದ್ದು. ಅದೂ ಯುದ್ಧದ ಮುಖಾಂತರ, ಭಯೋತ್ಪಾದನೆಯ ಮುಖಾಂತರ ಮತ್ತು ಸಾಧ್ಯವಿರುವ ಎಲ್ಲಾ ದುಷ್ಟ ಮಾರ್ಗಗಳ ಮೂಲಕ ಭಾರತವನ್ನು ದುರ್ಬಲ ಗೊಳಿಸಲು ಪ್ರಯತ್ನಿಸುತ್ತಾ ಅಪಾರ ಹಣ ಮತ್ತು ಶ್ರಮವನ್ನು ಕಳೆದುಕೊಂಡಿತು. ಅತ್ಯಂತ ಅಮಾನವೀಯ ಭಯೋತ್ಪಾದನೆಯನ್ನು ಹುಟ್ಟುಹಾಕಿತು. ಅಂತರರಾಷ್ಟ್ರೀಯವಾಗಿಯೂ ಕೆಟ್ಟ ಹೆಸರು ಪಡೆಯಿತು. ಪರಿಣಾಮ ವಿನಾಶ.

ಇದು ಅದರ ವ್ಯಾಪಾರ ವ್ಯವಹಾರ ಕ್ರೀಡೆ ಸಿನಿಮಾ ಮುಂತಾದ ಎಲ್ಲಾ ಕ್ಷೇತ್ರಗಳಿಗೂ ಹರಡಿ ಈಗ‌ ಕೆಲವು ಮಾಧ್ಯಮಗಳು ವರ್ಷಿಸುವಂತೆ ಭಿಕ್ಷೆ ಬೇಡುವ ಸ್ಥಿತಿ ತಲುಪಿದೆ. ಇದು ಸಹಜವೇ ಅಲ್ಲವೇ ? ನೋಡಿ, ದ್ವೇಷ ಅಸೂಯೆ ಜೊತೆಗೆ ಧರ್ಮದ ಅಮಲು ಸೇರಿದರೆ ವ್ಯಕ್ತಿ ಅಥವಾ ದೇಶ ಹೇಗೆ ಅಧಃಪತನದತ್ತ ಸಾಗುತ್ತದೆ ಎಂದು.

ಹಾಂ,..ಎಚ್ಚರ…,ಪಾಕಿಸ್ತಾನ ಮಾಡಿದ ತಪ್ಪುಗಳನ್ನೇ ಭಾರತವೂ ಇತ್ತೀಚಿನ ವರ್ಷಗಳಲ್ಲಿ ಮಾಡುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯೇ ?ಇಲ್ಲ ಎನ್ನವುದಾದರೆ ನೀವು ಸಹ ಅದೇ ರೀತಿ ದ್ವೇಷ ಅಸೂಯೆ ಧರ್ಮದ ಅಮಲಿನಲ್ಲಿ ಇರುವಿರಿ ಎಂದು ಭಾವಿಸಬೇಕಾಗುತ್ತದೆ.ಬಹಳಷ್ಟು ಜನ ಭಾರತದ ಅಭಿವೃದ್ಧಿ ಎಂದರೆ ಪಾಕಿಸ್ತಾನ ಚೀನಾವನ್ನು ವಿರೋಧಿಸುವುದು, ಮುಸ್ಲಿಮರನ್ನು ಭಯೋತ್ಪಾದಕರು ಎಂದು ಜರಿಯುವುದು, ಸೈನ್ಯಿಕ ಶಕ್ತಿಗೆ ಅವಶ್ಯತೆಗಿಂತ ಹೆಚ್ಚು ಮಹತ್ವ ನೀಡುವುದು ಎಂಬ ಭ್ರಮೆಗೆ ಒಳಗಾಗಿದ್ದಾರೆ.

ಇದು ಎಷ್ಟರಮಟ್ಟಿಗೆ ಇದೆ ಎಂದರೆ…ದೀಪಾವಳಿ ಹಬ್ಬದ ಪಟಾಕಿ ನಮ್ಮ ಪರಿಸರಕ್ಕೆ ಹಾನಿ ಎಂದರೆ ರಂಜಾನ್ ಕ್ರಿಸ್ಮಸ್ ನ್ಯೂ ಇಯರ್ ನಿಮಗೆ ಕಾಣುವುದಿಲ್ಲವೇ ಎನ್ನುತ್ತಾರೆ.ಪ್ರಾಣಿ ಹಿಂಸೆಯ ಕೆಲವು ಸಾಂಪ್ರದಾಯಿಕ ಕ್ರೀಡೆಗಳ ಬಗ್ಗೆ ವಿರೋಧಿಸಿದರೆ ಬಕ್ರೀದ್ ಬಕ್ರೀದ್ ಬಕ್ರೀದ್.ಮಹಿಳೆಯರ ದೇವಸ್ಥಾನ ಪ್ರವೇಶದ ವಿಷಯದಲ್ಲಿ ಸ್ವಾತಂತ್ರ್ಯ ಸಮಾನತೆಯ ಬಗ್ಗೆ ಮಾತನಾಡಿದರೆ ಮುಸ್ಲಿಂ ಮುಸ್ಲಿಂ ಮುಸ್ಲಿಂ.

ಭಾರತದ ಹಿಂದೂ ಜೀವನಶೈಲಿಯ ಮೂಡನಂಬಿಕೆಯ ಬಗ್ಗೆ ಹೇಳಿದರೆ ಇಸ್ಲಾಂ ಇಸ್ಲಾಂ ಇಸ್ಲಾಂ. ಭಾರತದ ಕೆಲವು ಶೋಷಿತ ವರ್ಗಗಳ ಮೇಲೆ ನಡೆಯುವ ದೌರ್ಜನ್ಯ ಪ್ರಸ್ತಾಪಿಸಿದರೆ ಪಾಕಿಸ್ತಾನದ ಟೆರರಿಸ್ಟ್ ಟೆರರಿಸ್ಟ್ ಟೆರರಿಸ್ಟ್.

ಹೀಗೆ ಸಾಲು ಸಾಲು ಅಭಿಪ್ರಾಯಗಳು ಎಲ್ಲಾ ವಿಷಯಗಳಲ್ಲೂ ಬರುತ್ತದೆ. ಮುಖ್ಯ ವಿಷಯ ಬಿಟ್ಟು ನಮ್ಮ ಬಹುತೇಕ ಅನಿಸಿಕೆಗಳು ಇಸ್ಲಾಂ ಮತ್ತು ಪಾಕಿಸ್ತಾನದ ಸುತ್ತಲೇ ತಿರುಗುತ್ತಿವೆ ಎಂದಾಯಿತು. ನಮ್ಮ ಬದಲಾವಣೆ ಅಥವಾ ಆತ್ಮಾವಲೋಕನಕ್ಕಿಂತ ಪಾಕಿಸ್ತಾನದ ಮೇಲಿನ ದ್ವೇಷವೇ ಹೆಚ್ಚಾಗಿದೆ.

ಅಷ್ಟೇ ಅಲ್ಲ ಆಂತರಿಕವಾಗಿಯೂ ಭಾರತದ ಒಳಗಡೆ ವಿವಿಧ ವರ್ಗ ಪಂಗಡಗಳ ನಡುವೆ ಸಾಕಷ್ಟು ದ್ವೇಷ ಅಸೂಯೆಗಳು ಹೊಗೆಯಾಡುತ್ತಿದೆ.

ವೈಚಾರಿಕ ಪ್ರಜ್ಞೆಯ ಪ್ರಗತಿಪರ ಚಿಂತನೆಯ ಶೋಷಿತ ವರ್ಗದ ಜಾಗೃತ ಮನಸ್ಥಿತಿಯ ಜನರು ಸಾರಾಸಗಟಾಗಿ ಇಡೀ ವೇದ ಉಪನಿಷತ್ತು ರಾಮಾಯಣ ಮಹಾಭಾರತ ಭಗವದ್ಗೀತೆ ಸೇರಿ ಎಲ್ಲವನ್ನೂ ತಿರಸ್ಕರಿಸುವ ಮಟ್ಟಕ್ಕೆ ದ್ವೇಷಿಸುತ್ತಾರೆ. ಕನಿಷ್ಠ ಅವುಗಳಲ್ಲಿ ಇರಬಹುದಾದ ಒಳ್ಳೆಯ ಅಂಶಗಳನ್ನು ಸಹ ಪರಿಶೀಲಿಸುವ ತಾಳ್ಮೆ ಮಾಯವಾಗಿದೆ. ತಲಾತಲಾಂತರದ ದ್ವೇಷ ಈಗ ಹೆಡೆ ಎತ್ತಿದೆ.

ಇದೇ ರೀತಿ ಇನ್ನೊಂದು ವರ್ಗ ಎಲ್ಲಾ ಸಂಪ್ರದಾಯಗಳನ್ನು ಅತ್ಯಂತ ಶ್ರೇಷ್ಠ ಎಂದು ಭಾವಿಸಿ ಅದನ್ನು ವಿರೋಧಿಸುವ ಎಲ್ಲರನ್ನೂ ಧರ್ಮ ವಿರೋಧಿಗಳು ದೇಶ ವಿರೋಧಿಸಗಳು ಎಂಬಂತೆ ಕಠಿಣ ಶಬ್ದಗಳಲ್ಲಿ ನಿಂದಿಸುತ್ತಾರೆ. ನಮ್ಮದೇ ಜನಗಳು ಪಡೆಯುವ ಮೀಸಲಾತಿ ಅವಕಾಶಗಳನ್ನು ಅಸೂಯೆಯಿಂದ ವಿರೋಧಿಸುತ್ತಾರೆ.

ಭಾರತದ ಪರಿಸ್ಥಿತಿ ಹಾಳಾಗಲು ಇಷ್ಟು ಸಾಕಲ್ಲವೇ..,ಆರ್ಥಿಕ ಕುಸಿತದಿಂದ ಕಂಗಾಲಾಗಿರುವ, ಜಾತಿ ವ್ಯವಸ್ಥೆಯ ಕಾರಣದಿಂದ ದೇಶಾಭಿಮಾನವೇ ಕಡಿಮೆಯಾಗಿರುವ,ಭ್ರಷ್ಟಾಚಾರದಿಂದ ಆಡಳಿತದ ಮೇಲೆ ನಂಬಿಕೆಯೇ ಇಲ್ಲದಿರುವ, ಪ್ರಕೃತಿಯ ವಿಕೋಪದ ಕಾರಣದಿಂದ ಬಹಳಷ್ಟು ಜನರು ನಿರ್ಗತಿರಾಗುತ್ತಿರುವ, ನಿರುದ್ಯೋಗಿಗಳಾಗುತ್ತಿರುವ ಭಾರತವನ್ನು ಮೇಲ್ದರ್ಜೆಗೆ ಏರಿಸುವ ವಿಷಯಗಳ ಕುರಿತು ಚಿಂತಿಸದೆ ಪಕ್ಕದ ಧರ್ಮ ದೇಶವನ್ನು ದೂಷಿಸುತ್ತಾ ಕುಳಿತರೆ ಭಾರತದ ಅಭಿವೃದ್ಧಿ ಸಾಧ್ಯವೇ ?
ಜಾತಿ ವ್ಯವಸ್ಥೆ ಇರುವವರಿಗು ಸಾಮಾಜಿಕ ನ್ಯಾಯ ಸಿಗುವುದೇ ?

ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಮೀರಿ ಈ ದ್ವೇಷ ಅಸೂಯೆಗಳು ನಮ್ಮನ್ನು ಆಕ್ರಮಿಸಿದೆ.ಹೇಗೆ ಕಾಶ್ಮೀರ – ಯುದ್ಧ – ಚಂದ್ರಯಾನ ಮುಂತಾದ ವಿಷಯಗಳು ನಮ್ಮನ್ನು ಭಾವನಾತ್ಮಕವಾಗಿ ಜೋಡಿಸಿದೆಯೋ ಹಾಗೆಯೇ ಜಾತಿ ಭಾಷೆ ಪ್ರಾಂತ್ಯ ಸಂಪ್ರದಾಯ ಮತ್ತು ವೈಚಾರಿಕತೆ ನಮ್ಮನ್ನು ಭಾವನಾತ್ಮಕವಾಗಿ ಬೇರ್ಪಡಿಸಿದೆ ಎಂಬ ಸೂಕ್ಷ್ಮ ಅಂಶಗಳನ್ನು ಸಹ ಗಮನಿಸಬೇಕಿದೆ.

ನಮ್ಮ ಜನಗಳನ್ನು ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಯಿಂದ ಇರುವವರನ್ನು ಈ ಬಗ್ಗೆ ಜಾಗೃತಗೊಳಿಸಬೇಕಿದೆ. ಇಲ್ಲದಿದ್ದರೆ ಭಾರತ ವಿಶ್ವ ಗುರು ಎಂದು ಕನಸು ಕಾಣುತ್ತಿದ್ದರೆ ಮತ್ತೊಂದು ಪಾಕಿಸ್ತಾನವಾಗುವ ಅಪಾಯಕ್ಕೆ ‌ಸಿಲುಕಬಹುದು.

ಭಾರತ ಪ್ರೀತಿಯ ನೆಲ. ವಿಶ್ವಾಸದ ಜನ,
ಸಹಕಾರದ ಸಮಾಜ, ಆಧ್ಯಾತ್ಮದ ತವರೂರು. ಅದೇ ನಮ್ಮ ಶಕ್ತಿ. ನೆನಪಿಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version