ಬಹಿರಂಗ
ತ್ರಿವರ್ಣ ಧ್ವಜ ಎಂಬ ಸುಳ್ಳು ಸೃಷ್ಟಿ..!
- ಡಾ.ವಡ್ಡಗೆರೆ ನಾಗರಾಜಯ್ಯ
“ಭಾರತದ ರಾಷ್ಟ್ರ ಧ್ವಜದಲ್ಲಿ ಕೇಸರಿ – ಬಿಳಿ – ಹಸಿರು 3 ಬಣ್ಣಗಳಿವೆ. ಆದುದರಿಂದ ಅದನ್ನು ತ್ರಿವರ್ಣ ಧ್ವಜ ಅಥವಾ ತಿರಂಗ ಎಂದು ಕರೆಯಲಾಗುತ್ತದೆ” ಎಂದು ನಮಗೆ ಶಾಲೆಯಲ್ಲಿ ಹೇಳಿಕೊಟ್ಟಿದ್ದರು. ನಾವು ಅದನ್ನೇ ಕಂಠಪಾಠ ಮಾಡಿ ಒಪ್ಪಿಸುತ್ತಾ ಬಂದಿದ್ದೇವೆ. ರಾಷ್ಟ್ರಧ್ವಜದ ನಡುವೆ ಚಕ್ರದ ಚಿತ್ರವಿದ್ದು ಅದು ನೀಲಿ ಬಣ್ಣದಲ್ಲಿದೆ. ಈಗ ರಾಷ್ಟ್ರ ಧ್ವಜದಲ್ಲಿ ನೀಲಿ ಬಣ್ಣವೂ ಸೇರಿದಂತೆ ಒಟ್ಟಾರೆ 4 ಬಣ್ಣಗಳಾದವು.
ಧ್ವಜದ ಮಧ್ಯದಲ್ಲಿ ನೀಲಿ ಬಣ್ಣದಲ್ಲಿ ಶೋಭಿಸುತ್ತಿರುವುದು ಭಾರತ ದೇಶದ ಮೊದಲ ರಾಷ್ಟ್ರಧರ್ಮವಾದ ಬೌದ್ಧಧರ್ಮದ ಅಶೋಕನ “ಧಮ್ಮಚಕ್ರ“ವೋ ಅಥವಾ ಗಾಂಧಿ ತಾತನು ಸ್ವಾವಲಂಬನೆಯ ಗುರುತಾಗಿ ಪ್ರತಿಪಾದಿಸಿದ ಚರಕದ ಚಕ್ರವೋ? ಹೀಗೊಂದು ಪ್ರಶ್ನೆ ಉದ್ಭವವಾಗುತ್ತದೆ.
ಇದು ಧಮ್ಮಚಕ್ರವಾಗಿದ್ದ ಪಕ್ಷದಲ್ಲಿ ಅಶೋಕ ಚಕ್ರವರ್ತಿ ಮತ್ತು ಡಾ.ಅಂಬೇಡ್ಕರ್ ಅಪ್ಪಿಕೊಂಡ ಬುದ್ಧಗುರುವಿನ ಧಮ್ಮದ ಲಾಂಛನವಾಗಿ ಮತ್ತು ಈ ನಾಡಿನ ಮೂಲನಿವಾಸಿಗಳ ದ್ರಾವಿಡರ ಸಂಕೇತವಾಗಿ ನೀಲಿಯನ್ನು ಗುರುತಿಸಲಾಗಿದೆ. ದ್ರಾವಿಡ ಮೂಲದ ಬುದ್ಧತ್ವವನ್ನು ಪ್ರಜ್ಞೆಯಿಂದ ದೂರವಿಡಲು ಬಯಸುವ ಆರ್ಯಸಂತಾನ ಮನಸ್ಸುಗಳು ಮೊದಲಿಗೆ ಅಕ್ಷರ ಕಲಿತು ಅವರ ರಾಜಕೀಯ ಒಳಸಂಚಿನ ಅಜೆಂಡಾದ ಪ್ರಕಾರ ನೀಲಿಯನ್ನು ಕೈಬಿಟ್ಟು ಕೇವಲ ಕೇಸರಿ – ಬಿಳಿ – ಹಸಿರು 3 ಬಣ್ಣಗಳನ್ನು ಮಾತ್ರ ಉಲ್ಲೇಖಿಸತೊಡಗಿದರೆ?
“ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು” ಎಂದು ಬಾವುಟದಲ್ಲಿರುವ ಚಕ್ರವನ್ನು ಗಾಂಧಿತಾತನ ಚರಕದ ಚಕ್ರವೆಂದು ನಮ್ಮನ್ನು ನಂಬಿಸಲಾಗಿದೆ. ಹಾಗೂ ಚಕ್ರವನ್ನು ಚಿತ್ರಿಸಲು ಬಳಸಲಾಗಿರುವ ನೀಲಿ ಬಣ್ಣವನ್ನು ಉಲ್ಲೇಖಿಸದೆ ಕೈಬಿಡಲಾಗಿದೆ. ಹಾಗಿದ್ದರೆ ಇದನ್ನು ಪ್ರಶ್ನಿಸದೆ ಮಗುಮ್ಮಾಗಿ ಒಪ್ಪಿಕೊಂಡಿರುವ ನಾವು, ಸತ್ಯವನ್ನು ಸುಳ್ಳುಮಾಡಲು ಪ್ರಯತ್ನಿಸುವ ಜನರ ಸಂಚಿಗೆ ಒಳಗಾಗಿದ್ದೇವೆ ಅನ್ನಿಸುತ್ತಿದೆ.
ಚಲನಶೀಲತೆಯ ಪ್ರತೀಕವಾದ ಅಶೋಕ ಚಕ್ರವನ್ನು ಸಾರನಾಥದ ಸ್ಥೂಪಸ್ತಂಭ ಶಾಸನದಿಂದ ಆರಿಸಿಕೊಂಡು ನಮ್ಮ ರಾಷ್ಟ್ರೀಯ ಚಿಹ್ನೆಗಳ ಕೇಂದ್ರನೆಲೆಯ ಲಾಂಛನವನ್ನಾಗಿ ಪ್ರತಿಷ್ಠಾಪಿಸಲಾಗಿದೆ.
ಧಮ್ಮಚಕ್ರ ಪ್ರವರ್ತನ’ ದುಃಖವನ್ನು ನೀಗುವುದಾಗಿದೆ. ಅರ್ಥಾತ್ ಶೋಕವನ್ನು ‘ಅ’-ಶೋಕ ಆಗುವಂತೆ ನಮ್ಮ ನಡೆಗಳನ್ನು ಪ್ರಜ್ಞೆಯಿಂದ ಉದ್ದೀಪಿಸುವುದು! ಶೋಕ ಇಲ್ಲದ್ದೇ ಅಶೋಕ! ಶೋಕ ಅಳಿಯುವ ಬುದ್ಧಭಾರತ ನಿರ್ಮಾಣದ ಘನವಾದ ಧ್ಯೇಯದಿಂದಲೇ ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನದಲ್ಲಿಯೂ, ಭಾರತದ ಬಾವುಟದಲ್ಲಿಯೂ ಅಶೋಕ ಚಕ್ರ ಅಥವಾ ಧಮ್ಮಚಕ್ರವನ್ನು ಅಳವಡಿಸಿದ್ದಾರೆ.
ನಮ್ಮ ಬಾವುಟದಲ್ಲಿ 4 ಬಣ್ಣಗಳು ಕಣ್ಣಿಗೆ ಕಂಡರೂ ತಿರಂಗ ಎಂದು ಹೇಳುತ್ತಿರುವುದರ ಹಿಂದಿರುವ ಒಳಮರ್ಮವೇನು? ನೀಲಿ ಬಣ್ಣಕ್ಕೂ ಘನತೆಯಿದೆ, ರಾಷ್ಟ್ರಧ್ವಜದಲ್ಲಿ ನೀಲಿ ಬಣ್ಣಕ್ಕೂ ಗೌರವದ ಸ್ಥಾನವಿದೆ ಎಂದು ತಿಳಿಸೋಣ. ಇನ್ನು ಮುಂದೆ ಭಾರತದ ರಾಷ್ಟ್ರ ಧ್ವಜದಲ್ಲಿ ನೀಲಿ- ಕೇಸರಿ – ಬಿಳಿ – ಹಸಿರು 4 ಬಣ್ಣಗಳಿವೆ ಎಂಬ ಸತ್ಯವನ್ನು ಪ್ರತಿಪಾದಿಸೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243