ದಿನದ ಸುದ್ದಿ
ಭಾರತ – ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗಿ ; ನವೀಕರಿಸಬಹುದಾದ ಇಂಧನ ಕುರಿತು ಚರ್ಚೆ ನಿರೀಕ್ಷೆ
ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ಅವರು ಡೆನ್ಮಾರ್ಕ್‌ನಲ್ಲಿ ಇಂದು ಆಯೋಜಿಸಿರುವ ಎರಡನೇ ಭಾರತ-ನೋರ್ಡಿಕ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ನಂತರ ಆರ್ಥಿಕ ಪ್ರಗತಿ, ಹವಾಮಾನ ಬದಲಾವಣೆ, ನಾವಿನ್ಯತೆ ಮತ್ತು ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಮುಂತಾದ ವಿಚಾರಗಳ ಬಗ್ಗೆ ಶೃಂಗಸಭೆಯಲ್ಲಿ ಚರ್ಚೆ ನಡೆಯಲಿದೆ. ಸುಸ್ಥಿರತೆ, ನವೀಕರಿಸಬಹುದಾದ ಇಂಧನ, ಡಿಜಟಲೀಕರಣ ಮತ್ತು ನಾವೀನ್ಯತೆ, ಕ್ಷೇತ್ರಗಳಲ್ಲಿ ನೋರ್ಡಿಕ್ ರಾಷ್ಟ್ರಗಳು ಭಾರತದ ಜೊತೆಗೆ ಬಹುಮುಖ್ಯ ಭಾಗಿದಾರರಾಗಿದ್ದಾರೆ.
ಪ್ರಧಾನಮಂತ್ರಿ ಅವರ ಈ ಭೇಟಿಯಿಂದ ನೋರ್ಡಿಕ್ ವಲಯದಲ್ಲಿ ಭಾರತದ ಬಹು ಆಯಾಮಾಗಳ ಸಹಕಾರ ವಿಸ್ತರಿಸಿಕೊಳ್ಳಲು ಸಹಕಾರಿಯಾಗಲಿದೆ. ಪ್ರಧಾನಮಂತ್ರಿ ಅವರು ತಮ್ಮ ಪ್ರವಾಸದ ಕೊನೆಯ ಚರಣದಲ್ಲಿ ಫ್ಯಾರಿಸ್‌ನಲ್ಲಿ ಅಲ್ಪಕಾಲ ತಂಗಲಿದ್ದು, ಈ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ ನಂತರ ಉಭಯ ದೇಶಗಳ ನಡುವಿನ ಗರಿಷ್ಠ ಮಟ್ಟದ ಪಾಲುದಾರಿಕೆ ಕಾರ್ಯಕ್ರಮಗಳನ್ನು ಮುನ್ನಡೆಸಲು ಈ ಭೇಟಿ ಸಹಕಾರಿಯಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ಡೆನ್ಮಾರ್ಕ್ ನ ಕೋಪನ್ ಹೇಗನ್‌ನಲ್ಲಿ ಡೆನ್ಮಾರ್ಕ್ ನ ಪ್ರಧಾನಮಂತ್ರಿ ಮೆಟ್ಟೆ ಫ್ರೆಡೆರಿಕ್ಸೆನ್ ಜತೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು.
ಇಬ್ಬರೂ ನಾಯಕರು ಭಾರತ ಮತ್ತು ಡೆನ್ಮಾರ್ಕ್ ನಡುವಿನ ಮೊದಲ ರೀತಿಯ ವ್ಯವಸ್ಥೆಯಾದ ಹಸಿರು ವ್ಯೂಹಾತ್ಮಕ ಪಾಲುದಾರಿಕೆಯ ಪ್ರಗತಿಯನ್ನು ಪರಿಶೀಲಿಸಿದರು. ಮಾತುಕತೆಗೆ ಮುಂಚಿತವಾಗಿ, ನರೇಂದ್ರ ಮೋದಿ, ಮರಿಯೆನ್ ಬರ್ಗ್ ನಲ್ಲಿರುವ ಡೆನ್ಮಾರ್ಕ್ ಪ್ರಧಾನಮಂತ್ರಿ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದರು. ಈ ಭೇಟಿಯು ಭಾರತ-ಡೆನ್ಮಾರ್ಕ್ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಜಂಟಿ ಪತ್ರಿಕಾಗೋಷ್ಠಿಯ ತಮ್ಮ ಭಾಷಣದಲ್ಲಿ, ಭಾರತ ಮತ್ತು ಡೆನ್ಮಾರ್ಕ್ ಎರಡೂ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಾನೂನಿನ ಆಡಳಿತದ ಮೌಲ್ಯಗಳನ್ನು ಹಂಚಿಕೊಳ್ಳುವುದಲ್ಲದೆ, ಎರಡೂ ಪೂರಕ ಶಕ್ತಿಗಳನ್ನು ಹೊಂದಿವೆ ಎಂದು ಹೇಳಿದರು.
ಅಕ್ಟೋಬರ್ 2020 ರಲ್ಲಿ ನಡೆದ ಭಾರತ-ಡೆನ್ಮಾರ್ಕ್ ವರ್ಚುವಲ್ ಶೃಂಗಸಭೆಯಲ್ಲಿ, ನಾವು ನಮ್ಮ ಸಂಬಂಧಕ್ಕೆ ಹಸಿರು ವ್ಯೂಹಾತ್ಮಕ ಪಾಲುದಾರಿಕೆಯ ಸ್ಥಾನಮಾನವನ್ನು ನೀಡಿದ್ದೇವೆ ಎಂದು ನರೇಂದ್ರ ಮೋದಿ ಉಲ್ಲೇಖಿಸಿದರು. ಹಾಗೆಯೇ ನಮ್ಮ ಇಂದಿನ ಚರ್ಚೆಯ ಸಮಯದಲ್ಲಿ ನಾವು ನಮ್ಮ ಹಸಿರು ವ್ಯೂಹಾತ್ಮಕ ಪಾಲುದಾರಿಕೆಯ ಜಂಟಿ ಕಾರ್ಯ-ಯೋಜನೆಯನ್ನು ಪರಿಶೀಲಿಸಿದೆವು.
ನವೀಕರಿಸಬಹುದಾದ ಇಂಧನ, ಆರೋಗ್ಯ, ಬಂದರುಗಳು, ಹಡಗು, ಆರ್ಥಿಕತೆ ಮತ್ತು ನೀರಿನ ನಿರ್ವಹಣೆ ಕ್ಷೇತ್ರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಪ್ರಧಾನಮಂತ್ರಿ ಹರ್ಷ ವ್ಯಕ್ತಪಡಿಸಿದರು.
Met Her Majesty, the Queen of the Kingdom of Denmark, Margrethe II in Copenhagen. pic.twitter.com/YZkS1BJbIH
— Narendra Modi (@narendramodi) May 3, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243