ಸಿನಿ ಸುದ್ದಿ
ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಅಷ್ಟೇ ಅಲ್ಲ..!
- ಚೇತನ್ ನಾಡಿಗೇರ್
ಹಿಂದಿ ರಾಷ್ಟ್ರ ಭಾಷೆ ಹೌದು, ಅಲ್ಲ ಎನ್ನುವುದರ ಕುರಿತು ಇಡೀ ದೇಶದಲ್ಲಿ ಕಳೆದೊಂದು ದಿನದಿಂದ ದೊಡ್ಡ ಚರ್ಚೆಯಾಗುತ್ತಿದೆ. ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರರಂಗಗಳ ನಡುವೆ ಯಾರು ಮೇಲು ಎಂಬುದರ ಕುರಿತು ಕೆಲವು ತಿಂಗಳುಗಳಿಂದ ತರ್ಕ ನಡೆಯುತ್ತಿದೆ. ಇದು ಒಂದೆಡೆಯಾದರೆ, ಇನ್ನೊಂದು ಕಡೆ ಚಿತ್ರರಂಗಗಳನ್ನು ಭಾಷೆ ಮತ್ತು ಪ್ರಾಂತ್ಯಗಳ ಆಧಾರದ ಮೇಲೆ ವಿಂಗಡಿಸುವುದನ್ನು ಬಿಟ್ಟು ನಾವು ಭಾರತೀಯರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು, ಒಂದು ಚಿತ್ರವನ್ನು ಒಂದು ಭಾಷೆಗೆ ಸೀಮಿತ ಮಾಡದೆ, ಭಾರತೀಯ ಚಿತ್ರ ಎಂದು ನೋಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಇಂತಹ ಚರ್ಚೆಗಳು ಇಲ್ಲಿ ಭಾಷೆಗಳು ಮತ್ತು ರಾಜ್ಯಗಳ ನಡುವೆ ನಡಯುತ್ತಿವೆ. ಆದರೆ, ಜಾಗತಿಕ ಚಿತ್ರರಂಗದಲ್ಲಿ ಭಾರತೀಯ ಚಿತ್ರರಂಗಕ್ಕೆ ಬೇರೆಯದೇ ಸ್ಥಾನವಿದೆ. ಬೇರೆಯದೇ ಮಹತ್ವವಿದೆ. ಏಕೆಂದರೆ, ಬೇರೆ ಭಾಷೆಗಳ ಚಿತ್ರರಂಗಗಳಿಗಿಂತ ಭಾರತೀಯ ಚಿತ್ರರಂಗ ವಿಭಿನ್ನವಾಗಿ ನಿಲ್ಲುವುದೇ ಇಲ್ಲಿನ ಭಾಷೆ, ಸೊಗಡು ಮತ್ತು ವೈವಿಧ್ಯತೆಯೇ ಕಾರಣ.
ಜಗತ್ತಿನಾದ್ಯಂತ ಎಲ್ಲಾ ದೇಶಗಳಲ್ಲೂ ಅದರದ್ದೇ ಆದ ಚಿತ್ರರಂಗಗಳಿವೆ. ಇಂಗ್ಲೀಷ್, ಫ್ರೆಂಚ್, ಪರ್ಶಿಯನ್, ಜರ್ಮನ್, ಕೊರಿಯನ್, ಜಾಪನೀಸ್, ಚೈನೀಸ್ (ಮಾಂಡರಿನ್), ಇಟಾಲಿಯನ್, ರಷ್ಯನ್ ಹೀಗೆ ಬೇರೆಬೇರೆ ದೇಶಗಳಲ್ಲಿ ಅದರದ್ದೇ ಆದ ಚಿತ್ರರಂಗಗಳಿವೆ. ಇಂಗ್ಲೀಷ್ ಚಿತ್ರಗಳು ಬರೀ ಹಾಲಿವುಡ್ನಲ್ಲಿ ಮಾತ್ರ ತಯಾರಾಗುವುದಿಲ್ಲ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನಲ್ಲೂ ತಯಾರಾಗುತ್ತಿವೆ.
ಎಲ್ಲಾ ದೇಶಗಳಲ್ಲಿ ವರ್ಷವೊಂದಕ್ಕೆ ನೂರಾರು ಚಿತ್ರಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಆದರೆ, ಭಾರತದಲ್ಲಿ ಕಂಡಂತೆ ಯಾವುದೇ ದೇಶದಲ್ಲೂ ಇಷ್ಟೊಂದು ಭಾಷೆಗಳ ಚಿತ್ರಗಳನ್ನು ಕಾಣುವುದಕ್ಕೆ ಸಾಧ್ಯವೇ ಇಲ್ಲ. ಅಲ್ಲಿ ಮುಖ್ಯ ಭಾಷೆಯಲ್ಲದೆ ಒಂದೆರೆಡು ಉಪಭಾಷೆಗಳ ಚಿತ್ರಗಳು ಬರಬಹುದು ಅಷ್ಟೇ. ಆದರೆ, ಭಾರತದಲ್ಲಿ ಹಾಗಿಲ್ಲ.
ಇಲ್ಲಿ ಭಾರತೀಯ ಚಿತ್ರರಂಗ ಎಂದು ಯಾವುದೋ ಒಂದು ಭಾಷೆಯ ಚಿತ್ರರಂಗಕ್ಕೆ ಹೇಳುವುದು ಸಾಧ್ಯವಿಲ್ಲ. ಸಾಮಾನ್ಯವಾಗಿ ಹೊರಜಗತ್ತಿಗೆ ಭಾರತೀಯ ಚಿತ್ರರಂಗವೆಂದರೆ, ಹಿಂದಿ ಚಿತ್ರರಂಗ ಅಥವಾ ಬಾಲಿವುಡ್ ಮಾತ್ರ ಕಾಣಬಹುದು. ಆದರೆ, ಅದರ ಹೊರತಾಗಿಯೂ ೨೦ಕ್ಕೂ ಹೆಚ್ಚು ಚಿತ್ರರಂಗಗಳಿವೆ ಮತ್ತು ಪ್ರತಿಯೊಂದು ರಾಜ್ಯದಲ್ಲೂ ಆಯಾ ಭಾಷೆಯ ಒಂದು ಚಿತ್ರರಂಗವಿದ್ದೇ ಇದೆ.
ಭಾರತದ ಮೊದಲ ಚಿತ್ರ `ರಾಜ ಹರಿಶ್ಚಂದ್ರ’ ಬಿಡುಗಡೆಯಾಗಿ ಕೆಲವು ವರ್ಷಗಳಲ್ಲೇ ಬೇರೆಬೇರೆ ಭಾಷೆಗಳಲ್ಲೂ ಚಿತ್ರಗಳ ನಿರ್ಮಾಣ ಪ್ರಾರಂಭವಾಗಿದೆ. ಆದರೆ, ಎಲ್ಲವೂ ಮೂಕಿ ಚಿತ್ರಗಳಾದ್ದರಿಂದ, ಅದು ಯಾವುದೋ ಒಂದು ಭಾಷೆಯ ಚಿತ್ರ ಎಂದು ಗುರುತಿಸುವುದು ಕಷ್ಟ. 1931ರಲ್ಲಿ ಭಾರತದ ಮೊದಲ ಟಾಕಿ ಚಿತ್ರವಾದ ‘ಆಲಂ ಅರಾ’ ಬಿಡುಗಡೆಯಾದ ಮೇಲೆ ಬೇರೆ ಭಾಷೆಗಳಲ್ಲೂ ಚಿತ್ರನಿರ್ಮಾಣ ಪ್ರಾರಂಭವಾಗಿ, ಬೇರೆ ಭಾಷೆಗಳ ಚಿತ್ರರಂಗಗಳೂ ಪ್ರಾರಂಭವಾಗಿವೆ. ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬಂಗಾಲಿ, ಮರಾಠಿ, ಭೋಜಪುರಿ, ಗುಜರಾತಿ, ರಾಜಸ್ತಾನಿ, ಒಡಿಯಾ, ಮಣಿಪುರಿ, ಅಸ್ಸಾಮಿ, ಡೋಗ್ರಿ, ಪಂಜಾಬಿ, ಹರಿಯಾಣ್ವಿ, ನಾಗ್ಪುರಿ, ಮೇಯ್ತಿ ಹೀಗೆ 20ಕ್ಕೂ ಹೆಚ್ಚು ಚಿತ್ರರಂಗಗಳಿವೆ.
ಇನ್ನು, ಇತ್ತೀಚಿನ ವರ್ಷಗಳಲ್ಲಿ, ಹೈದರಾಬಾದಿನ ಉರ್ದು ಮಾತನಾಡುವ ಜನರಿಗಾಗಿಯೇ ಡೆಕ್ಕನಿ ಎಂಬ ಚಿತ್ರರಂಗ ಹುಟ್ಟಿಕೊಂಡಿದ್ದು, ಡೆಕ್ಕನಿ ಭಾಷೆಯ ಚಿತ್ರಗಳು ನಿರ್ಮಾಣವಾಗುತ್ತಿವೆ. ಈ ಭಾಷೆಯ ಚಿತ್ರಗಳು ಆಂಧ್ರ ಪ್ರದೇಶ, ತೆಲಂಗಾಣ ಮುಂತಾದ ಕಡೆ ಪ್ರದರ್ಶನವಾಗುತ್ತವೆ. ಇವಿಷ್ಟು ಚಿತ್ರರಂಗಗಳಲ್ಲದೆ, ಪ್ರಾದೇಶಿಕ ಚಿತ್ರರಂಗಗಳು ಬೇರೆ ಇವೆ.
ಉದಾಹರಣೆಗೆ, ಕನ್ನಡದಲ್ಲೇ ಪ್ರಾದೇಶಿಕ ಭಾಷೆ ಎಂದು ಗುರುತಿಸಿಕೊಂಡಿರುವ ತುಳು, ಕೊಂಕಣಿ, ಕೊಡವ, ಬಂಜಾರ ಮತ್ತು ಬ್ಯಾರಿ ಭಾಷೆಗಳಿವೆ. ಈ ಎಲ್ಲಾ ಭಾಷೆಗಳಲ್ಲೂ ಚಿತ್ರ ನಿರ್ಮಾಣವಾಗುತ್ತಿರುವುದು ವಿಶೇಷ. ಮುಖ್ಯ ಭಾಷೆಯಂತೆ ಈ ಭಾಷೆಗಳಲ್ಲಿ ಸತತವಾಗಿ ಚಿತ್ರಗಳ ನಿರ್ಮಾಣವಾಗದಿದ್ದರೂ, ಆಗಾಗ ಒಂದೊಂದು ಪ್ರಯತ್ನ ಮತ್ತು ಪ್ರಯೋಗಗಳಾಗುತ್ತಲೇ ಇರುತ್ತವೆ. ಉದಾಹರಣೆಗೆ, ತುಳು ಚಿತ್ರರಂಗ 1931ರಿಂದಲೇ ಅಸ್ತಿತ್ವದಲ್ಲಿದ್ದರೂ, ನಿರ್ಮಾಣವಾಗುತ್ತಿದ್ದ ಚಿತ್ರಗಳ ಸಂಖ್ಯೆ ಕಡಿಮೆಯೇ ಇತ್ತು. ಇತ್ತೀಚಿನ ವರ್ಷಗಳಲ್ಲಿ ತುಳು ಭಾಷೆಯಲ್ಲಿ ನಿರ್ಮಾಣ ಹೆಚ್ಚಾಗಿದ್ದು, ಪ್ರತಿ ವರ್ಷ 10ಕ್ಕೂ ಹೆಚ್ಚು ಸಂಖ್ಯೆಯ ಚಿತ್ರಗಳು ನಿರ್ಮಾಣವಾಗುತ್ತಿವೆ.
ಇದಲ್ಲದೆ ಬಿಹಾರದಲ್ಲಿ ಹಿಂದಿ ಮತ್ತು ಭೋಜಪುರಿಯ ಜೊತೆಗೆ ಮಘಹಿ ಭಾಷೆಯ ಚಿತ್ರಗಳು ಬಿಡುಗಡೆಯಾಗುತ್ತವೆ. ಗುಜರಾತ್ನಲ್ಲಿ ಗುಜರಾತಿ ಭಾಷೆಯ ಚಿತ್ರಗಳ ಜೊತೆಗೆ ಕಛ್ಛಿ ಭಾಷೆಯ ಚಿತ್ರಗಳು ಸಹ ತೆರೆ ಕಾಣುತ್ತವೆ. ಇನ್ನು ಒಡಿಯಾದಲ್ಲಿ ಒಡಿಸ್ಸಿ ಭಾಷೆಯ ಜೊತೆಗೆ ಸಂಭಲಪುರಿ ಅಥವಾ ಖೋಸ್ಲಿ ಭಾಷೆಯ ಚಿತ್ರಗಳನ್ನು ನೋಡಬಹುದು. ಇದಲ್ಲದೆ ಭಾರತದ ಅತ್ಯಂತ ಪುರಾತನ ಭಾಷೆಯಾದ ಸಂಸ್ಕೃತದಲ್ಲೂ ಆಗಾಗ ಚಿತ್ರಗಳು ನಿರ್ಮಾಣವಾಗುವುದುಂಟು.
ಇಷ್ಟೆಲ್ಲಾ ಚಿತ್ರರಂಗಗಳು ಆಯಾ ಭಾಷೆಯ ಹೆಸರಿನಿಂದಲೇ ಗುರಿತಿಸಿಕೊಳ್ಳುತಿತ್ತು. ಆದರೆ, 90ರ ದಶಕದಿಂದಿತ್ತೀಚೆಗೆ, ಈ ಚಿತ್ರರಂಗಗಳನ್ನು ಗುರುತಿಸುವ ಪರಿಪಾಠ ಬದಲಾಯಿತು. ಇಂಗ್ಲೀಷ್ ಚಿತ್ರಗಳನ್ನು ಹೇಗೆ ಹಾಲಿವುಡ್ ಎಂದು ಗುರುತಿಸಲಾಯಿತೋ, ಭಾರತದಲ್ಲೂ ಒಂದೊಂದು ಭಾಷೆಗೂ ಒಂದೊಂದು ವುಡ್ ಎಂದು ಹೆಸರು ಕೊಡುವ ಟ್ರೆಂಡ್ ಶುರುವಾಯಿತು. ಮೊದಲಿಗೆ ಹಿಂದಿ ಚಿತ್ರರಂಗಕ್ಕೆ ಬಾಲಿವುಡ್ ಎಂದು ಕರೆಯಲಾಯಿತು.
ಕ್ರಮೇಣ ಈ ಚಾಳಿ ಎಲ್ಲಾ ಚಿತ್ರರಂಗಗಳಿಗೂ ವ್ಯಾಪಸಿತು. ತಮಿಳಿಗೆ ಕಾಲಿವುಡ್, ತೆಲುಗಿಗೆ ಟಾಲಿವುಡ್, ಕನ್ನಡದಕ್ಕೆ ಸ್ಯಾಂಡಲ್ವುಡ್, ತುಳು ಚಿತ್ರಗಳಿಗೆ ಕೋಸ್ಟಲ್ವುಡ್, ಮಲಯಾಳಂಗೆ ಮಾಲಿವುಡ್, ಭೋಜಪುರಿಗೆ ಭೋಜಿವುಡ್, ಡೋಗ್ರಿ ಚಿತ್ರಗಳಿಗೆ ಪಹಾಡಿವುಡ್, ಗುಜರಾತಿ ಸಿನಿಮಾಗಳಿಗೆ ಗಾಲಿವುಡ್, ಒಡಿಯಾ ಭಾಷೆಯ ಚಿತ್ರಗಳಿಗೆ ಒಲಿವುಡ್, ಪಂಜಾಬಿಗೆ ಪಾಲಿವುಡ್ … ಹೀಗೆ ಏನೇನೋ ಚಿತ್ರ-ವಿಚಿತ್ರ ಹೆಸರುಗಳಿವೆ. ಹೀಗೆ ಪ್ರತಿಯೊಂದು ಚಿತ್ರರಂಗಕ್ಕೂ ಒಂದೊಂದು ಹೆಸರು ಬಂದು, ಆ ಹೆಸರಿನಿಂದಲೇ ಆ ಚಿತ್ರರಂಗವನ್ನು ಗುರುತಿಸಲಾಗುತ್ತಿದೆ.
ಇದೆಲ್ಲದರಿಂದಲೇ ಭಾರತದಲ್ಲಿ ಪ್ರತೀ ವರ್ಷ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆ 1400 ದಾಟುತ್ತಿದೆ. ಇದರಲ್ಲಿ ಹಿಂದಿಯ ಪಾಲು ಹೆಚ್ಚೆಂದರೆ 200-250 ಇರಬಹುದು. ಮಿಕ್ಕಂತೆ ದಕ್ಷಿಣ ಭಾರತೀಯ ಚಿತ್ರರಂಗಗಳಿಂದ 850ಕ್ಕೂ ಹೆಚ್ಚು ಚಿತ್ರಗಳು ತಯಾರಾಗುತ್ತಿವೆ. ಮಿಕ್ಕೆಲ್ಲ ಭಾಷೆಯ ಚಿತ್ರಗಳನ್ನು ಒಟ್ಟುಗೂಡಿಸಿದರೆ ವರ್ಷವೊಂದಕ್ಕೆ 1400 ಪ್ಲಸ್ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇಲ್ಲಿ ಯಾವುದೇ ಚಿತ್ರರಂಗ ದೊಡ್ಡದಲ್ಲ, ಯಾವುದೂ ಚಿಕ್ಕದಲ್ಲ.
ಕೆಲವು ಚಿತ್ರರಂಗಗಳ ರೀಚ್ ಚಿಕ್ಕದಿರಬಹುದು, ಅಲ್ಲಿ ತಯಾರಾಗುವ ಚಿತ್ರಗಳ ಬಜೆಟ್ ಕಡಿಮೆ ಇರಬಹುದು, ಆ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆ ಇರಬಹುದು … ಆದರೆ, ಎಲ್ಲ ಚಿತ್ರರಂಗಗಳಿಗೂ ಅದರದ್ದೇ ಆದ ಐತಿಹಾಸಿಕ ಮಹತ್ವವಿದೆ ಮತ್ತು ಎಲ್ಲ ಚಿತ್ರರಂಗಗಳು ಸಹ ತಮ್ಮದೇ ರೀತಿಯಲ್ಲಿ ಸಂಸ್ಕೃತಿ ಮತ್ತು ಸೊಗಡನ್ನು ಬಿಂಬಿಸುತ್ತಿವೆ ಎನ್ನುವುದಷ್ಟೇ ಮುಖ್ಯ.
(ಚೇತನ್ ನಾಡಿಗೇರ್ ಅವರ ಫೇಸ್‌ಬುಕ್ ನಿಂದ ಆಯ್ದುಕೊಂಡ ಬರಹ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243