ದಿನದ ಸುದ್ದಿ

ಲೈಸೆನ್ಸ್ ಶುಲ್ಕ ಬಾಕಿ: ಖಾಸಗಿ ಟೆಲಿಕಾಂ ಕಂಪನಿಗಳ ದಕ್ಷತೆ ಮತ್ತು ಸರಕಾರಕ್ಕೆ ನ್ಯಾಯಾಲಯದ ತರಾಟೆ

Published

on

  • ಸಂಚಾರ್ ಭವನ”ದಲ್ಲಿರುವ ಕೆಲವು ಕಿರಿಯ ಅಧಿಕಾರಿಗಳು ಸುಪ್ರಿಂ ಕೋರ್ಟ್ ಆದೇಶವನ್ನು ಉಲ್ಲಂಘಿಸುವ ನಿರ್ದೇಶನವನ್ನು ಕೊಟ್ಟಿದ್ದಾರೆ ಎಂದರೆ ನಂಬಬಹುದೇ?. ಇಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರ ಹೇಳಿದ ವಿಪುಲ ಹಣಬಲದ ಟಿಪ್ಪಣಿಯನ್ನು ನೆನಪಿಸಿಕೊಳ್ಳದಿರಲು ಸಾಧ್ಯವಿಲ್ಲ. ಇದಲ್ಲದೆ, ಗಂಭೀರ ಹಣಕಾಸು ಕೊರತೆಯನ್ನು ಎದುರಿಸುತ್ತಿರುವ ಸರಕಾರ 1.47 ಲಕ್ಷ ಕೋಟಿ ರೂ.ಗಳ ಒಂದು ಭಾರೀ ಮೊತ್ತವನ್ನು ಪಡೆಯಲು ಅನುವು ಮಾಡಿಕೊಟ್ಟ ಸುಪ್ರಿಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಉತ್ಸುಕವಾಗಿಲ್ಲ ಏಕೆ ಎಂಬ ಪ್ರಶ್ನೆಯೂ ಏಳುತ್ತದೆ. 2007ರಿಂದ 2012 ರ ನಡುವೆ ತನ್ನ ಒಡೆತನದ ಬಿಎಸ್‌ಎನ್‌ಎಲ್‌ನ್ನು ದುರ್ಬಲಗೊಳಿಸಿ, ಈ ಖಾಸಗಿ ಕಂಪನಿಗಳು ಅಪಾರ ಲಾಭಗಳನ್ನು ಪೇರಿಸಲು ಅವಕಾಶ ಕಲ್ಪಿಸಿದ ಸರಕಾರ ಮಾತ್ರವೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು.

ಪಿ. ಅಭಿಮನ್ಯು

ಫೆಬ್ರುವರಿ 14, 2020 ರಂದು ಸುಪ್ರಿಂ ಕೋರ್ಟ್, ಲೈಸೆನ್ಸ್ ಶುಲ್ಕ ಬಾಕಿಯನ್ನು ತೆರದೆ ತಪ್ಪಿಸಿಕೊಳ್ಳುತ್ತಿರುವ ಖಾಸಗಿ ಟೆಲಿಕಾಂ ಕಂಪನಿಗಳನ್ನು ಕಾಪಾಡುವ ಪ್ರಯತ್ನ ನಡೆಸುತ್ತಿದೆ ಎಂದು ಸರಕಾರವನ್ನು ತರಾಟೆಗೆ ತಗೊಂಡಿತು. ವೊಡಾಫೋನ್ ಇಂಡಿಯ, ಏರ್‌ಟೆಲ್ ಮತ್ತು ಟಾಟಾ ಟೆಲಿಸರ್ವಿಸಸ್ ಇವು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಇರುವುದಕ್ಕೆ ತೀವ್ರ ಟೀಕೆಗೆ ಒಳಗಾಗಿರುವ ಖಾಸಗಿ ಟೆಲಿಕಾಂ ಕಂಪನಿಗಳು.

ಅಕ್ಟೋಬರ್ 24, 2019ರಂದು ನ್ಯಾಯ ಮೂರ್ತಿಗಳಾದ ಅರುಣ್ ಮಿಶ್ರ, ಎಸ್.ಅಬ್ದುಲ್ ನಝೀರ್ ಮತ್ತು ಎಂ.ಆರ್.ಷಾ ಇದ್ದ ಸುಪ್ರಿಂ ಕೋರ್ಟ್ ಪೀಠ ಈ ಮೂರು ಕಂಪನಿಗಳು ಲೈಸೆನ್ಸ್ ಶುಲ್ಕ ಬಾಕಿ ರೂ.1.47 ಲಕ್ಷ ಕೋಟಿ ರೂ.ಗಳನ್ನು ಮೂರು ವಾರದೊಳಗೆ ಪಾವತಿ ಮಾಡಬೇಕು ಎಂದು ಆದೇಶಿಸಿತು. ಈ ಆದೇಶದ ಪ್ರಕಾರ ವೊಡಾಫೋನ್ 53,038 ಕೋಟಿ ರೂ., ಏರ್‌ಟೆಲ್ 35,586 ಕೊಟಿ ರೂ. ಮತ್ತು ಟಾಟಾ ಟೆಲಿಸರ್ವಿಸಸ್ 13,823 ಕೋಟಿ ರೂ.ಗಳನ್ನು ಪಾವತಿ ಮಾಡಬೇಕಾಗಿದೆ. ಆದರೆ ಈ ಆದೇಶದ ನಂತರ ನಾಲ್ಕು ತಿಂಗಳು ಕಳೆದರೂ ಈ ಖಾಸಗಿ ಕಂಪನಿಗಳು ಒಂದು ರೂಪಾಯಿಯನ್ನೂ ತೆರಲಿಲ್ಲ.

ಸುಪ್ರಿಂ ಕೋರ್ಟ್ ಅತ್ಯಂತ ಕೋಪೋದ್ರಿಕ್ರ ಗೊಂಡದ್ದು, ಇದಕ್ಕಿಂತ ಹೆಚ್ಚಾಗಿ, ಈ ಖಾಸಗಿ ಕಂಪನಿಗಳಿಂದ ಈ ಬಾಕಿಗಳನ್ನು ವಸೂಲಿ ಮಾಡಲು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದ ದೂರಸಂಪರ್ಕ ಇಲಾಖೆ ತನ್ನ ಕರ್ತವ್ಯ ನಿರ್ವಹಿಸುವ ಬದಲಿಗೆ, ಈ ಪಾವತಿಯನ್ನು ತಪ್ಪಿಸಿಕೊಳ್ಳಲು ಅದೇ ಅನುಕೂಲ ಕಲ್ಪಿಸಿಕೊಟ್ಟದ್ದು. ಜನವರಿ 23, 2020ರಂದು ಇಲಾಖೆ, ಸುಪ್ರಿಂ ಕೋರ್ಟ್ ಆದೇಶದಂತೆ ಈ ಟೆಲಿಕಾಂ ಕಂಪನಿಗಳಿಂದ ಯಾವುದೇ ಬಾಕಿ ಪಾವತಿಗೆ ಒತ್ತಾಯ ಹಾಕಬಾರದು ಎಂದು ಅಕೌಂಟೆಂಟ್ ಜನರಲ್‌ಗೆ ನಿರ್ದೇಶನ ನೀಡಿತು, ಮತ್ತು ಮುಂದಿನ ಆದೇಶದ ವರೆಗೆ, ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳಬಾರದು ಎಂದೂ ಹೇಳಿತು.

ಈ ನಿರ್ದೇಶನವನ್ನು ಪ್ರಸ್ತಾಪಿಸುತ್ತ ನ್ಯಾಯಮೂರ್ತಿ ಅರುಣ್ ಮಿಶ್ರ ಇಲ್ಲಿ ಎಷ್ಟೊಂದು ಹಣಬಲ ಇದೆ, ನನಗೆ ಬಹಳ ಯಾತನೆಯಾಗುತ್ತಿದೆ, ಈ ವ್ಯವಸ್ಥೆಯಲ್ಲಿ ಈ ನ್ಯಾಯಾಲಯದಲ್ಲಿ ಕೆಲಸ ಮಾಡಬಾರದು ಎಂದು ನನಗನಿಸುತ್ತಿದೆ ಎಂದು ಟಿಪ್ಪಣಿ ಮಾಡಿದರು.

ಈ ಮೊಕದ್ದಮೇ ಆರಂಭವಾದದ್ದು, 1999ರಲ್ಲಿ. 1995ರಲ್ಲಿ ಖಾಸಗಿ ಕಂಪನಿಗಳಿಗೆ ಟೆಲಿಕಾಂ ಸೇವೆಗಳನ್ನು ಒದಗಿಸಲು ಲೈಸೆನ್ಸ್‌ಗಳನ್ನು ಕೊಡಲಾಯಿತು. ಲೈಸೆನ್ಸ್ ಶರತ್ತುಗಳ ಪ್ರಕಾರ ಈ ಕಂಪನಿಗಳು ಒಂದು ನಿಗದಿತ ಲೈಸೆನ್ಸ್ ಶುಲ್ಕವನ್ನು ತೆರಬೇಕಾಗಿತ್ತು. ಆದರೆ 1995ರಿಂದ 1999ರ ವರೆಗೂ ಈ ಕಂಪನಿಗಳು ಯಾವುದೇ ಲೈಸೆನ್ಸ್ ಶುಲ್ಕವನ್ನು ತೆರಲಿಲ್ಲ. ಹೀಗೆ ಬಾಕಿಯಾದ ಶುಲ್ಕಗಳ ಮೊತ್ತ ಹಲವು ಸಾವಿರ ಕೋಟಿ ರೂ.ಗಳಿಗೇರಿತು. 1999ರಲ್ಲಿ ಆಗಿನ ಪ್ರಧಾನ ಮಂತ್ರಿ ವಾಜಪೇಯಿರುವರು ಉದಾರ ಮನಸ್ಸಿನಿಂದ ಸಂಪೂರ್ಣ ಲೈಸೆನ್ಸ್ ಶುಲ್ಕಗಳಿಗೆ ವಿನಾಯ್ತಿ ನೀಡಿದರು. ಅಲ್ಲದೆ, ನಿಗದಿತ ಲೈಸೆನ್ಸ್ ಶುಲ್ಕದ ಮಾದರಿಯ ಬದಲಿಗೆ, ರೆವಿನ್ಯೂ ಪಾಲುದಾರಿಕೆಯ ಮಾದರಿಯನ್ನು ತಂದರು.

ಇದರ ಪ್ರಕಾರ ಖಾಸಗಿ ಟೆಲಿಕಾಂ ಕಂಪನಿಗಳು, ತಮ್ಮ ರೆವಿನ್ಯೂ ಗಳಿಕೆಯ ಒಂದು ಭಾಗವನ್ನು ಲೈಸೆನ್ಸ್ ಶುಲ್ಕವಾಗಿ ತೆರಬೇಕು. ಆರಂಭದಲ್ಲಿ ಇದನ್ನು 15ಶೇ. ಎಂದು ನಿಗದಿ ಮಾಡಲಾಯಿತು, ನಂತರ ಇದನ್ನು 13ಶೇ.ಕ್ಕೆ ಇಳಿಸಲಾಯಿತು, ಅಂತಿಮವಾಗಿ 8ಶೇ. ಎಂದು ನಿಗದಿ ಮಾಡಲಾಯಿತು.

ಈ ರೆವಿನ್ನೂ ಪಾಲುದಾರಿಕೆ ಮಾದರಿಯನ್ನು ಬಳಸಿಕೊಂಡು ಈ ಟೆಲಿಕಾಂ ಕಂಪನಿಗಳು ತಮ್ಮ ರೆವಿನ್ಯೂ ಸಂಗ್ರಹವನ್ನು ಸತತವಾಗಿ ಕಡಿಮೆಗೊಳಿಸಿ ತೋರಿಸಲಾರಂಭಿಸಿ, ಸರಕಾರಕ್ಕೆ ಲೈಸೆನ್ಸ್ ಶುಲ್ಕವನ್ನು ವಂಚಿಸಿದರು. ದೂರಸಂಪರ್ಕ ಇಲಾಖೆ ಹೊರಗಣ ಆಡಿಟರ್‌ಗಳಿಂದ ನಡೆಸಿದ ತಪಾಸಣೆಗಳು ಈ ವಂಚನೆಯನ್ನು ತೋರಿಸಿಕೊಟ್ಟವು. ಇದರಿಂದಾಗಿ, ಅವು ಲೈಸೆನ್ಸ್ ಶುಲ್ಕ ತೆರುವಂತೆ ಮಾಡಲಾಯಿತು.

ಇದಲ್ಲದೆ, ಆರಂಭದಿಂದಲೇ, ಈ ಖಾಸಗಿ ಕಂಪನಿಗಳು ಎಜಿಆರ್(ಸರಿಹೊಂದಿಸಿದ ಒಟ್ಟು ರೆವಿನೂ ಆದಾಯ)ದ ಲೆಕ್ಕಾಚಾರದಲ್ಲಿ ಕೈಚಳಕ ನಡೆಸಿಕೊಂಡು ಬಂದವು. ಈ ಎಜಿಆರ್‌ನಲ್ಲಿ ಟೆಲಿಕಾಂ ಸೇವೆಯಿಂದ ಬರುವ ಆದಾಯವನ್ನು ಮಾತ್ರ ತೆಗೆದುಕೊಳ್ಳಬೇಕು, ಹ್ಯಾಂಡ್‌ಸೆಟ್‌ಗಳ ಮಾರಾಟ, ರದ್ದಿಗಳು ಇತ್ಯಾದಿಗಳಿಂದ ಬರುವ ಆದಾಯಗಳು ಇದರ ವ್ಯಾಪ್ತಿಗೆ ಬರುವುದಿಲ್ಲ ಎಂಬ ನಿಲುವು ತಳೆದವು. ಆದರೆ ಸರಕಾರ ಎಜಿಆರ್‌ನಲ್ಲಿ ಇವೆಲ್ಲ ಆದಾಯಗಳೂ ಸೇರುತ್ತವೆ ಎಂಬ ನಿಲುವು ತಳೆಯಿತು (ಆದರೆ ಈಗಿನ ಸರಕಾರ ಅಂತಹ ನಿಲುವು ತಳೆಯಬಾರದಿತ್ತು ಎಂದು ಖೇದಗೊಳ್ಳುತ್ತಿರಬಹುದು). ಈ ವಿವಾದ ಬಹಳ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಕಳೆದ ಅಕ್ಟೋಬರ್ ೨೪ರಂದು ಸುಪ್ರಿಂ ಕೋರ್ಟ್ ಆದೇಶದೊಂದಿಗೆ ಅದು ಇತ್ಯರ್ಥಗೊಂಡಿತು.

ನ್ಯಾಯಮೂರ್ತಿ ಅರುಣ್ ಮಿಶ್ರರವರ ಫೆಬ್ರುವರಿ 14, 2020ರ ಟಿಪ್ಪಣಿಯಿಂದ ಖಂಡಿತವಾಗಿಯೂ ಎರಡು ಪ್ರಶ್ನೆಗಳು ಏಳುತ್ತವೆ. ಮೊದಲನೆಯದ್ದು, ಜನವರಿ 23ರಂದು ದೂರಸಂಪರ್ಕ ಇಲಾಖೆ ಅಕೌಂಟೆಂಟ್ ಜನರಲ್‌ರಿಗೆ ಕೊಟ್ಟ ನಿರ್ದೇಶನಕ್ಕೆ ಸಂಬಂಧಪಟ್ಟಿದೆ. ದೂರಸಂಪರ್ಕ ಇಲಾಖೆಯ ಇಬ್ಬರು ಡೆಸ್ಕ್ ಅಧಿಕಾರಿಗಳು ಇಂತಹ ನಿರ್ದೇಶನಕ್ಕೆ ಹೊಣೆಗಾರರು ಎಂದು ಅಕೌಂಟೆಂಟ್ ಜನರಲ್ ತುಷಾರ್ ಮೆಹ್ತ ನ್ಯಾಯಾಲಯಕ್ಕೆ ತಿಳಿಸಿದರು. ಈ ಬಗ್ಗೆ ದೂರಸಂಪರ್ಕ ಮಂತ್ರಿಗಳಿಗಾಲೀ, ಇಲಾಖೆಯ ಕಾರ್ಯದರ್ಶಿಗಳಿಗಾಗಲಿ ತಿಳಿದೇ ಇರಲಿಲ್ಲ ಎಂದು ಹೇಳಲಾಗಿದೆ. ಆದರೆ ಸಂಚಾರ್ ಭವನದಲ್ಲಿರುವ ಕೆಲವು ಡೆಸ್ಕ್ ಅಧಿಕಾರಿಗಳು ಸುಪ್ರಿಂ ಕೋರ್ಟ್ ಆದೇಶವನ್ನು ಉಲ್ಲಂಘಿಸುವ ಇಂತಹ ನಿರ್ದೇಶನವನ್ನು ಕೊಟ್ಟಿದ್ದಾರೆ ಎಂದರೆ ನಂಬುವುದು ಕಷ್ಟವೇ. ಇಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರ ಹೇಳಿದ ವಿಪುಲ ಹಣಬಲದ ಟಿಪ್ಪಣಿಯನ್ನು ನೆನಪಿಸಿಕೊಳ್ಳದಿರಲು ಸಾಧ್ಯವಿಲ್ಲ.

ಎರಡನೆಯ ಪ್ರಶ್ನೆಯೆಂದರೆ, ಗಂಭೀರ ಹಣಕಾಸು ಕೊರತೆಯನ್ನು ಎದುರಿಸುತ್ತಿರುವ ಸರಕಾರ 1.47 ಲಕ್ಷ ಕೋಟಿ ರೂ.ಗಳ ಒಂದು ಭಾರೀ ಮೊತ್ತವನ್ನು ಪಡೆಯಲು ಅನುವು ಮಾಡಿಕೊಟ್ಟ ಸುಪ್ರಿಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಉತ್ಸುಕವಾಗಿಲ್ಲ ಏಕೆ ಎಂಬುದು.

ಈ ಖಾಸಗಿ ಟೆಲಿಕಾಂ ಕಂಪನಿಗಳ, ಅದರಲ್ಲೂ ವೊಡಾಫೋನ್‌ನ ಆರ್ಥಿಕ ಪರಿಸ್ಥಿತಿ ಎಷ್ಟು ನಾಜೂಕಾಗಿದೆಯೆಂದರೆ, ಇಷ್ಟೊಂದು ದೊಡ್ಡ ಮೊತ್ತವನ್ನು ಅವು ಎಲ್ಲಿಂದ ತಾನೇ ಹೊಂದಿಸ ಬಲ್ಲವು ಎಂದು ಮಾಧ್ಯಮಗಳು ಕಣ್ಣೀರು ಹಾಕುತ್ತಿವೆ. ಆದರೆ ಈ ಕಂಪನಿಗಳು ಭಾರತೀಯ ಟೆಲಿಕಾಂ ಉದ್ಯಮದಲ್ಲಿ ಗಳಿಸಿದ ಅಪಾರ ಸಂಪತ್ತು, ಅದರಲ್ಲೂ, 2007ರಿಂದ 2012 ರ ನಡುವೆ ಸರಕಾರವೇ ತನ್ನ ಒಡೆತನದ ಬಿಎಸ್‌ಎನ್‌ಎಲ್‌ನ್ನು ದುರ್ಬಲಗೊಳಿಸುತ್ತಿದ್ದ ಅವಧಿಯಲ್ಲಿ ಪೇರಿಸಿಟ್ಟ ದೈತ್ಯಪ್ರಮಾಣದ ಲಾಭಗಳು ಎಲ್ಲ ಎಲ್ಲಿಗೆ ಹೋದವು? ಸರಕಾರ ಮಾತ್ರವೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು.

(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version