ದಿನದ ಸುದ್ದಿ
ಹಿಂದುಳಿದ,ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಬಿಜೆಪಿಯಿಂದ ಅನ್ಯಾಯ ; ಹೋರಾಟ ನಡೆಸದೆ ನ್ಯಾಯಸಿಗದು : ಸಿದ್ದರಾಮಯ್ಯ
ಸುದ್ದಿದಿನ ಡೆಸ್ಕ್ : ರಾಜ್ಯದ ಬಿಜೆಪಿ ಸರ್ಕಾರ ದುರುದ್ದೇಶವಿಟ್ಟುಕೊಂಡು ಹಿಂದುಳಿದ ಜಾತಿ. ದಲಿತರು ಮತ್ತು ಅಲ್ಪಸಂಖ್ಯಾತರನ್ನು ತುಳಿಯುತ್ತಿರುವುದು ಸ್ಪಷ್ಟವಾಗಿದೆ. ಸರ್ಕಾರದ ಈ ಜನವಿರೋಧಿ ನಿಲುವಿನ ವಿರುದ್ಧ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಯಬೇಕು. ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ ಸೂಚಿದರು.
ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲ ರಾಜಕೀಯ ಕ್ಷೇತ್ರದಲ್ಲಿಯೂ ಹಿಂದುಳಿದ ಜಾತಿಗಳು ಮೀಸಲಾತಿ ಕೇಳುವ ಕಾಲ ಬಂದಿದೆ. ಹಿಂದುಳಿದ ಜಾತಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ರಾಜಕೀಯ ಮೀಸಲಾತಿಯನ್ನು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಕೂಡಾ ವಿಸ್ತರಿಸಬೇಕಾಗುತ್ತದೆ ಎಂದರು.
ಪ್ರತಿಯೊಂದು ಸಮುದಾಯಕ್ಕೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವಶ್ಯಕ ಪ್ರಮಾಣದ ಪ್ರಾತಿನಿಧ್ಯ ನೀಡಬೇಕೆಂಬುದೇ ಸಂವಿಧಾನದ ಆಶಯವಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಹಕಾರಿಕ್ಷೇತ್ರದಲ್ಲಿಯೂ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದ್ದೆ. ಸಾಮಾಜಿಕ ನ್ಯಾಯದ ಈ ರಥ ಮುಂದಕ್ಕೆ ಹೋಗಬೇಕಾಗುತ್ತದೆ.
ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳ ಹಿಂದೆ ಆರ್ ಎಸ್ ಎಸ್ ಕೈವಾಡ ಇದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ರಾಜ್ಯದ ಮಿಲ್ಲರ್ ಆಯೋಗದಿಂದ ಚಿನ್ನಪ್ಪರೆಡ್ಡಿ ಆಯೋಗದ ವರೆಗೆ ಹಾಗೂ ಕೇಂದ್ರದ ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿರುವುದು ಇತಿಹಾಸದ ಭಾಗವಾಗಿದೆ. ಇದನ್ನು ಹಿಂದುಳಿದ ಜಾತಿಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಹಿಂದುಳಿದ,ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿರುವ ಹದಿನೆಂಟು ನಿಗಮಗಳಿಗೆ ಕೇವಲ ರೂ.500 ಕೋಟಿ ನೀಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಶೋಷಿತ ಸಮುದಾಯಗಳಿಗೆ ಘೋರ ಅನ್ಯಾಯ ಎಸಗಿದೆ. ಅನ್ಯಾಯಕ್ಕೀಡಾಗಿರುವ ಈ ಸಮುದಾಯಗಳು ಬೀದಿಗಿಳಿಯದೆ ನ್ಯಾಯ ಸಿಗಲಾರದು.
ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗಾಗಿ ನಮ್ಮ ಸರ್ಕಾರ ಜಾರಿಗೆ ತಂದಿದ್ದ ವಿದ್ಯಾಸಿರಿ ಯೋಜನೆಯನ್ನು ನಿಲ್ಲಿಸಲಾಗಿದೆ. ಹಿಂದುಳಿದ ಜಾತಿಗಳ ಹಾಸ್ಟೆಲ್ ಗಳನ್ನು ನಿರ್ಲಕ್ಷಿಸಲಾಗುತ್ತಿದೆ. ವಿದ್ಯಾರ್ಥಿವೇತನಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ರಾಜ್ಯದ ಬಿಜೆಪಿ ಸರ್ಕಾರ ದುರುದ್ದೇಶವಿಟ್ಟುಕೊಂಡೇ ಹಿಂದುಳಿದ ಜಾತಿಗಳನ್ನು ತುಳಿಯುತ್ತಿದೆ ಎಂದು ಕಿಡಿಕಾರಿದರು.
ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕುರುಬರು ಕಾಲ್ನಡಿಗೆ-ಸಮಾವೇಶಗಳನ್ನು ನಡೆಸಿದರು. ನಾನೇನು ಈ ಬೇಡಿಕೆಯನ್ನು ವಿರೋಧಿಸಿಲ್ಲ, ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡ ನಂತರವೇ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲು ಸಾಧ್ಯ. ಹೀಗಿದ್ದರೂ ನನ್ನನ್ನು ಗುರಿಯಾಗಿಸಿಕೊಂಡು ಆರ್ ಎಸ್ ಎಸ್ ಕುಮ್ಮಕ್ಕಿನಿಂದ ಹೋರಾಟ ನಡೆಯಿತು. ಈಗ ಯಾಕೆ ಸುಮ್ಮನಾಗಿದ್ದಾರೆ? ಎಂದು ಪ್ರಶ್ನಿಸಿದರು.
ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿರುವ ಹದಿನೆಂಟು ನಿಗಮಗಳಿಗೆ ಕೇವಲ ರೂ.500 ಕೋಟಿ ನೀಡುವ ಮೂಲಕ ರಾಜ್ಯದ @BJP4Karnataka ಸರ್ಕಾರ ಶೋಷಿತ ಸಮುದಾಯಗಳಿಗೆ ಘೋರ ಅನ್ಯಾಯ ಎಸಗಿದೆ. ಅನ್ಯಾಯಕ್ಕೀಡಾಗಿರುವ ಈ ಸಮುದಾಯಗಳು ಬೀದಿಗಿಳಿಯದೆ ನ್ಯಾಯ ಸಿಗಲಾರದು. 5/7#OBC_Protest
— Siddaramaiah (@siddaramaiah) March 17, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243