ದಿನದ ಸುದ್ದಿ

ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಹೆಚ್ಚಳ

Published

on

ಸುದ್ದಿದಿನ,ದಾವಣಗೆರೆ : ಪರಿಶಿಷ್ಟ ಪಂಗಡದ ಸಮುದಾಯದವವರು ಅಂತರ್ಜಾತಿ ವಿವಾಹವಾದಲ್ಲಿ ಪ್ರೋತ್ಸಾಹ ಧನವನ್ನು ಹೆಚ್ಚಿಸುವ ಕುರಿತಾಗಿ ಸರ್ಕಾರವು ಈ ಕೆಳಗಿನಂತೆ ಷರತ್ತುಗಳಿಗೆ ಒಳಪಟ್ಟು ಮಂಜೂರಾತಿ ನೀಡಿ ಆದೇಶಿಸಿದೆ.

ಪರಿಶಿಷ್ಟ ಪಂಗಡದ ಪುರುಷರು ಬೇರೆ ಜಾತಿಯ ಹೆಣ್ಣು ಮಕ್ಕಳನ್ನು ಮದುವೆ ಆದಲ್ಲಿ ರೂ. 2.50 ಲಕ್ಷಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು. ಅಂತರ್ಜಾತಿ ವಿವಾಹವಾದ ಪರಿಶಿಷ್ಟ ಪಂಗಡದ ದಂಪತಿಗಳು ಮದುವೆಯಾದ ದಿನದಿಂದ 18 ತಿಂಗಳೊಳಗಾಗಿ ವಿವಾಹದ ಬಗ್ಗೆ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿ ಮಾಡಿಕೊಂಡು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸತಕ್ಕದ್ದು. ಈ ಅವಧಿ ಮೀರಿದ ನಂತರದ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸುವಂತಿಲ್ಲ.

ಇತರೆ ಸವರ್ಣೀಯ ಜಾತಿಯ ಹೆಣ್ಣು ಪರಿಶಿಷ್ಟ ಪಂಗಡದ ಪುರುಷರನ್ನು ವಿವಾಹವಾದಲ್ಲಿ ಒಂದೇ ಕಂತಿನಲ್ಲಿ ರೂ. 2.50 ಲಕ್ಷಗಳಲ್ಲಿ ರೂ. 1.25 ಲಕ್ಷಗಳನ್ನು ದಂಪತಿಗಳ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ನೀಡುವುದು ಮತ್ತು ರೂ. 1.25 ಲಕ್ಷಗಳನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ನಿಶ್ಚಿತ ಠೇವಣಿಯನ್ನು ದಂಪತಿಗಳ ಹೆಸರಿನಲ್ಲಿ ಇಡತಕ್ಕದ್ದು.

ಪರಿಶಿಷ್ಟ ಪಂಗಡದ ಹೆಣ್ಣು ಇತರೆ ಸವರ್ಣಿಯ ಜಾತಿಯ ಪುರುಷರನ್ನು ವಿವಾಹವಾದಲ್ಲಿ ಒಂದೇ ಕಂತಿನಲ್ಲಿ ರೂ.3.00 ಲಕ್ಷಗಳಲ್ಲಿ ರೂ. 1.50 ಲಕ್ಷಗಳನ್ನು ದಂಪತಿಗಳ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ನೀಡುವುದು ಮತ್ತು ರೂ. 1.50 ಲಕ್ಷಗಳನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ನಿಶ್ಚಿತ ಠೇವಣಿಯನ್ನು ದಂಪತಿಗಳ ಹೆಸರಿನಲ್ಲಿ ಇಡತಕ್ಕದ್ದು.

ಮೂರು ವರ್ಷಗಳ ಮುಂಚೆ ಈ ಮೊತ್ತವನ್ನು ನಗದೀಕರಿಸಿಕೊಳ್ಳಲು ಅವಕಾಶವಿರುವುದಿಲ್ಲ.ಪತಿ ಅಥವಾ ಪತ್ನಿ ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದವಾರಾಗಿರಬೇಕು ಮತು ಕರ್ನಾಟಕ ರಾಜ್ಯದ ಸಕ್ಷಮ ಪ್ರಾಧಿಕಾರಗಳಿಂದ ಜಾತಿ ಪ್ರಮಾಣ ಪತ್ರ ಪಡೆಯತಕ್ಕದ್ದು, ದಂಪತಿಗಳು ಕರ್ನಾಟಕ ರಾಜ್ಯದ ಖಾಯಂ ವಾಸಿಯಾಗಿರಬೇಕು. ಆದರೆ ಇತರೆ ರಾಜ್ಯದ ಪುರುಷ/ಮಹಿಳೆಯನ್ನು ಮದುವೆಯಾದಲ್ಲಿ ಪತಿ/ಪತ್ನಿ ಇಬ್ಬರು ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು ಮತ್ತು ಖಾಯಂ ವಾಸಿಯಾಗಿರಬೇಕು.

ದಂಪತಿಗಳ ವಾರ್ಷಿಕ ಆದಾಯವು ರೂ. 5.00 ಲಕ್ಷಗಳ ಒಳಗಿರಬೇಕು. ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ ವೆಬ್‍ಸೈಟ್ www.tw.kar.nic.in ವಿಳಾಸದಲ್ಲಿ ಅಂತರ್ಜಾತಿ ವಿವಾಹ ಪ್ರೋತ್ಸಾಹಧನಕ್ಕಾಗಿ ಆನ್‍ಲೈನ್ ತಂತ್ರಾಂಶದಲ್ಲಿ ಅರ್ಜಿದಾರರು ಅರ್ಜಿ ಸಲ್ಲಿಸುವುದು. ಅದರಂತೆ, ಪರಿಶಿಷ್ಟ ಪಂಗಡದ ಸಮುದಾಯದವರು ಅಂತರ್ಜಾತಿ ವಿವಾಹವಾದಲ್ಲಿ ಪ್ರೋತ್ಸಾಹಧನವನ್ನು ಪಡೆಯಲು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ, ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version