ದಿನದ ಸುದ್ದಿ

ಅಂತರ್ಜಾತಿ ವಿವಾಹದ ಬೆನ್ನಲ್ಲೇ ದೇವಸ್ಥಾನ ನೌಕರ ಅಮಾನತು? ಜಾತಿ ತಾರತಮ್ಯದ ಆರೋಪ!

Published

on

ಕಣ್ಣೂರು: ಮಗಳು ಬೇರೆ ಜಾತಿಯ ಯುವಕನನ್ನು ವಿವಾಹವಾದ ಬಳಿಕ ತಮ್ಮನ್ನು ದೇವಸ್ಥಾನದ ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಕಣ್ಣೂರಿನ ಮುಚ್ಚಿಲೋಟ್ ಭಗವತಿ ದೇವಸ್ಥಾನದ ಉಪಕರ್ಮಿ ಸಿ.ವಿ. ರಾಜನ್ ಆರೋಪಿಸಿದ್ದಾರೆ. ಈ ಆರೋಪವು ದೇವಸ್ಥಾನದ ಆಚರಣೆಗಳು, ಜಾತಿ ವ್ಯವಸ್ಥೆ ಹಾಗೂ ವೈಯಕ್ತಿಕ ಆಯ್ಕೆಯ ಹಕ್ಕಿನ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಾರ್ಚ್ 15, 2026ರಂದು ವಾಣಿ ಸಮುದಾಯಕ್ಕೆ ಸೇರಿದ ರಾಜನ್ ಅವರ ಮಗಳು ಪೊದುವಾಲ್ ಸಮುದಾಯದ ಯುವಕನನ್ನು ವಿವಾಹವಾಗಿದ್ದರು. ಮದುವೆಗೂ ಮುನ್ನವೇ, 2025ರ ಆಗಸ್ಟ್‌ನಲ್ಲಿ ನಡೆದ ನಿಶ್ಚಿತಾರ್ಥದ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ರಾಜನ್ ಅವರನ್ನು ಕೆಲಸದಿಂದ ದೂರವಿರಲು ಸೂಚಿಸಿತ್ತು ಎಂದು ಅವರು ಹೇಳಿದ್ದಾರೆ.

ಸುಮಾರು 30 ವರ್ಷಗಳಿಂದ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ರಾಜನ್, ದೇವಸ್ವಂ ಮಂಡಳಿಯ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಹಿಂದೆ ಕೆಲಸ ಮುಂದುವರಿಸಲು ಅವಕಾಶ ದೊರೆತಿತ್ತು. ಆದರೆ ಇದೀಗ ಹೊರಡಿಸಿರುವ ಅಮಾನತು ಆದೇಶದಲ್ಲಿ, ಸಮಿತಿ ಸದಸ್ಯರು ಹಾಗೂ ಭಕ್ತರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಮತ್ತು ಪೂರ್ವಜರಿಂದ ಬಂದ ಸಾಂಪ್ರದಾಯಿಕ ಆಚರಣೆಗಳನ್ನು ಉಲ್ಲಂಘಿಸಿರುವುದು ಕಾರಣವೆಂದು ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.

http://Visit : www.suddidina.com

ಈ ಆರೋಪಗಳಿಗೆ ಸೂಕ್ತ ಸಾಕ್ಷ್ಯ ನೀಡಲಾಗಿಲ್ಲ. ಹಾಗೂ ತಮ್ಮ ಮಗಳ ಅಂತರ್ಜಾತಿ ವಿವಾಹವೇ ತಮ್ಮ ವಿರುದ್ಧದ ಕ್ರಮಕ್ಕೆ ಪ್ರಮುಖ ಕಾರಣ ಎಂದು ಆರೋಪಿಸಿದ್ದು, ನನ್ನ ವಿರುದ್ಧದ ಆರೋಪಗಳಿಗೆ ಸಾಕ್ಷ್ಯ ನೀಡಿದ್ದಲ್ಲಿ ಅಥವಾ ತಪ್ಪು ಸಾಬೀತಾದಲ್ಲಿ ಕೆಲಸ ತೊರೆಯಲು ನಾನು ಸಿದ್ಧನಿದ್ದೇನೆ ಎಂದು ರಾಜನ್ ಅವರು ತಮ್ಮ ವಾದವನ್ನು ಮಂಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ದೇವಸ್ಥಾನದ ಸಮಿತಿ ಕಾರ್ಯದರ್ಶಿಗಳಾದ ಹರೀಂದ್ರನ್ ಅವರು, ರಾಜನ್ ಮುಂದುವರಿಯುವುದಕ್ಕೆ ಸಮಿತಿಗೆ ಯಾವುದೇ ಆಕ್ಷೇಪವಿಲ್ಲ ಮತ್ತು ಅಂತಿಮ ನಿರ್ಧಾರವನ್ನು ವ್ಯವಸ್ಥಾಪಕ ಟ್ರಸ್ಟಿ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಈ ನಡುವೆ ರಾಜನ್ ಅವರು ತಮಗೆ ಆದ ಅನ್ಯಾಯದ ಕುರಿತು ಮಲಬಾರ್ ದೇವಸ್ವಂ ಮಂಡಳಿ, ಮಾನವ ಹಕ್ಕುಗಳ ಆಯೋಗ ಹಾಗೂ ಸ್ಥಳೀಯ ಶಾಸಕರಾದ ವಿ ಕುಂಞಕೃಷ್ಣನ್ ಅವರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ಮುಂದಿನ ತಿಂಗಳು ದೇವಸ್ವಂ ಮಂಡಳಿಯಲ್ಲೇ ನಡೆಯಲಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಒಬ್ಬ ವಯಸ್ಕ ವ್ಯಕ್ತಿಯ ವಿವಾಹದ ಆಯ್ಕೆಗೆ ಆತನ ಪೋಷಕರೇ ಬೆಲೆ ತೆರಬೇಕೇ? ಎಂಬ ಪ್ರಶ್ನೆಯನ್ನು ಈ ಪ್ರಕರಣ ಮತ್ತೆ ಮುನ್ನೆಲೆಗೆ ತಂದಿದೆ.

Trending

Exit mobile version