ಕ್ರೀಡೆ
ಐಪಿಎಲ್ ಕ್ರಿಕೆಟ್; ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯ ಗಳಿಸಿದ ಪಂಜಾಬ್ ಕಿಂಗ್ಸ್ ತಂಡದ ಪ್ಲೇಆಫ್ ಆಸೆ ಜೀವಂತ
ಸುದ್ದಿದಿನ ಡೆಸ್ಕ್ : ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 54 ರನ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿತು.
ಇದರೊಂದಿಗೆ ಟೂರ್ನಿಯಲ್ಲಿ ಆರನೇ ಜಯ ದಾಖಲಿಸಿದ ಪಂಜಾಬ್ 12 ಅಂಕಗಳೊಂದಿಗೆ ತನ್ನ ಪ್ಲೇಆಫ್ ಸ್ಪರ್ಧೆಯನ್ನು ಜೀವಂತವಾಗಿರಿಸಿಕೊಂಡಿದೆ. 210ರನ್ ಕಠಿಣ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ನಿಗದಿತ 20ಓವರ್ ಗಳಲ್ಲಿ 9 ವಿಕೆಟ್ ಗೆ 155ರನ್ ಗಳಿಸಲಷ್ಟೇ ಶಕ್ತಗೊಂಡಿತು.
ಆರ್ ಸಿಬಿ ಪರ ಗ್ಲೆನ್ ಮ್ಯಾಕ್ಸ್ ವೆಲ್ ಗರಿಷ್ಠ 36ರನ್ ಗಳಿಸಿದರು. ಪಂಜಾಬ್ ಪರ ಕಗಿಸೊ ರಬಾಡ 3 ವಿಕೆಟ್ ಕಬಳಿಸಿದರೆ, ರಿಷಿ ಧವನ್ ಮತ್ತು ರಾಹುಲ್ ಚಾಹರ್ ತಲಾ 2 ವಿಕೆಟ್ ಹಂಚಿಕೊಂಡರು. ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಗಳಿಸಿದ ಪಂಜಾಬ್, ನಿಗದಿತ 20ಓವರ್ ಗಳಲ್ಲಿ 9ವಿಕೆಟ್ ಗೆ 209 ರನ್ ಕಲೆಹಾಕಿತು.
ಆರಂಭಿಕ ಬ್ಯಾಟರ್ ಜಾನಿ ಬೈರ್ ಸ್ಟೋವ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಲಿಯಾಮ್ ಲಿವಿಂಗ್ ಸ್ಟನ್ ಕ್ರಮವಾಗಿ 66ಮತ್ತು 70ರನ್ ಗಳಿಸಿದರು. ಬೆಂಗಳೂರು ತಂಡದ ಪರ ಹರ್ಷಲ್ ಪಟೇಲ್ 4 ವಿಕೆಟ್ ಗಳಿಸಿದರು. ಪುಣೆಯಲ್ಲಿಂದು ರಾತ್ರಿ 7.30ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಹೈದರಾಬಾದ್ ಸನ್ ರೈಸರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243