ದಿನದ ಸುದ್ದಿ
ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ ; ಕಾಣದ ಕೈಗಳು ಕೆಲಸ ಮಾಡುತ್ತಿವೆ : ಸಚಿವೆ ಶಶಿಕಲಾ ಜೊಲ್ಲೆ
ಸುದ್ದಿದಿನ, ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದ್ದು, ವಯಕ್ತಿಕವಾಗಿ ನನ್ನ ತೇಜೊವಧೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೊಟ್ಟೆ ಖರೀದಿಗೆ ಇದುವರೆಗೂ ಯಾವದೇ ಟೆಂಡರ್ ಕರೆದಿಲ್ಲ. ಅಲ್ಲದೇ ಟೆಂಡರ್ ನೀಡಲು ನಾನು ವಯಕ್ತಿಕವಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ.
ನಮ್ಮ ಬಿಜೆಪಿ ಪಕ್ಷದ ಶಾಸಕರಾದ ಪರಣ್ಣ ಮುನವಳ್ಳಿಯವರು ತಮ್ಮ ಸಂಬಂಧಿಕರು ಎಂದು ಕರೆದುಕೊಂಡು ಬಂದಾಗ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದೇನೆ. ಇದರಲ್ಲಿ ಯಾವುದೇ ಹಣಕಾಸಿನ ವ್ಯವಹಾರದ ಕುರಿತು ನಾನು ಮಾತನಾಡಿಲ್ಲ.
ಆದರೆ, ಒಬ್ಬ ಮಹಿಳೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ರಾಜಕೀಯದಲ್ಲಿ ನನ್ನದೇ ಆದ ತತ್ವ ಸಿದ್ದಾಂತ ನಂಬಿಕೊಂಡು ಕೆಲಸ ಮಾಡುತ್ತಿರುವ ನನ್ನ ಏಳಿಗೆಯನ್ನು ಸಹಿಸದವರು, ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಅನುಮಾನ
ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243