ದಿನದ ಸುದ್ದಿ
ಅಮರನಾಥ ಯಾತ್ರಿಗಳ ಮೇಲೆ ದಾಳಿ ಮಾಡಲು ಸ್ಕೆಚ್ ಹಾಕಿದ್ದ ಐಸಿಸ್ ಉಗ್ರರು
ಸುದ್ದಿದಿನ ಡೆಸ್ಕ್ : ಕಾಶ್ಮೀರದಲ್ಲಿ ಶುಕ್ರವಾರ ಭಾರತೀಯ ಸೇನಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತರಾದ ಕಾಶ್ಮೀರ ಐಸಿಸ್ ಮುಖ್ಯಸ್ಥ ದಾವೂದ್ ಅಹ್ಮದ್ ಸೋಫಿ ಸೇರಿದಂತೆ ಮೂವರು ಉಗ್ರರು ಅಮರನಾಥ ಯಾತ್ರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸ್ಕೆಚ್ ಹಾಕಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಕಾಶ್ಮೀರದ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ತೆಹ್ರಿಕ್ ಉಲ್ ಮಜಾಹಿದ್ದೀನ್ ಸಂಘಟನೆಯು ತನ್ನ ಹೆಸರನ್ನು ಐಎಸ್‍ಕೆಜೆ ಎಂದು ಬದಲಾಯಿಸಿಕೊಂಡು ಕಾರ್ಯ ನಿರ್ವಹಿಸುತ್ತಿತ್ತು 1990ರಿಂದಲೂ ಕಣಿವೆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಈ ಉಗ್ರರು ಕಣಿವೆ ರಾಜ್ಯದಲ್ಲಿ ನಡೆದ ಹಲವು ಹಿಂಸಾತ್ಮಕ ಕೃತ್ಯಗಳನ್ನು ಎಸಗಿವೆ ಎಂದು ತಿಳಿದುಬಂದಿದೆ.
21 ಉಗ್ರರು ಕಣಿವೆಯಲ್ಲಿ
ಭಾರತೀಯ ಭದ್ರತಾಪಡೆಯ ಹಿಟ್‍ಲಿಸ್ಟ್‍ನಲ್ಲಿರುವ 21 ಉಗ್ರರು ಕಾಶ್ಮೀರದಲ್ಲಿ ಅವಿತುಕೊಂಡಿದ್ದಾರೆ. ಅವರನ್ನೆಲ್ಲ ಒಂದೇ ಕಾರ್ಯಾಚರಣೆಯಲ್ಲಿ ಮುಗಿಸಬೇಕೆಂಬುದು ಸೇನೆ ಮುಂದಿರುವ ಸವಾಲು.
ತೆಹ್ರಿಕ್ ಉಲ್ ಮುಜಾಹಿದೀನ್ ಸಂಘಟನೆಯ ಅನೇಕ ಉಗ್ರರು ಸೇನಾಪಡೆಯಿಂದ ಶಸ್ತ್ರಾಸ್ತ್ರಗಳನ್ನುಕಸಿದ ಹಾಗೂ ವಿವಿಧ ಉಗ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅಂದಹಾಗೆ ಈ ಪೈಕಿ ಆರು ಮಂದಿ ಎ+++ ವರ್ಗಕ್ಕೆ ಸೇರಿದವರಾಗಿದ್ದಾರೆ. ಎ+++ ವರ್ಗಕ್ಕೆ ಸೇರಿದ ಉಗ್ರರು ಸಂಘಟನೆಯ ಉನ್ನತ ಸ್ಥಾನದಲ್ಲಿರುತ್ತಾರೆ. ಅವರ ಬಗ್ಗೆ ಮಾಹಿತಿ ನೀಡಿದವರಿಗೆ 12 ಲಕ್ಷ ರೂ. ಇನಾಮು ನೀಡಲಾಗುತ್ತದೆ.