ದಿನದ ಸುದ್ದಿ

ಸಭೆ-ಸಮಾರಂಭಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ

Published

on

ಸುದ್ದಿದಿನ,ದಾವಣಗೆರೆ : ಕೋವಿಡ್ – 19 ಪ್ರಕರಣಗಳ ಎರಡನೇ ಅಲೆಯ ಅಪಾಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಸಭೆ ಸಮಾರಂಭಗಳು ಹಾಗೂ ಆಚರಣೆಗಳನ್ನು ಮಾಡುವ ಪೂರ್ವದಲ್ಲಿ ಸಾರ್ವಜನಿಕರು ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ವಿವಿಧ ಸಂದರ್ಭಗಳಲ್ಲಿ ಸಮಾರಂಭಗಳು/ಆಚರಣೆಗಳಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡಬಹುದಾದ ಸಂಖ್ಯೆಯನ್ನು ಮೀರದಂತೆ ಅಗತ್ಯ ಮಾನದಂಡಗಳನ್ನು ಅನುಸರಿಸಿ ಸಾರ್ವಜನಿಕರಿಗೆ ಅವಕಾಶ ನೀಡಲು ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರಗಳು ಅನುಮತಿ ನೀಡಲಿವೆ.

ಇದನ್ನೂ ಓದಿ | ವಸತಿ ಶಾಲೆ ಸೀಟು ಹಂಚಿಕೆ 

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಸಭೆ, ಸಮಾರಂಭ ಮತ್ತು ಸಾರ್ವಜನಿಕರು ಸೇರುವ ಇತರೆ ಕಾರ್ಯಕ್ರಮಗಳಿಗೆ ಆಯುಕ್ತರು, ಮಹಾನಗರಪಾಲಿಕೆ ಈ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

ನಗರಸಭೆ/ಪುರಸಭೆ/ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಸಭೆ-ಸಮಾರಂಭಗಳಿಗೆ ಆಯುಕ್ತರು/ಪೌರಾಯುಕ್ತರು/ಮುಖ್ಯಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಕೋವಿಡ್ – 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಹಾಗೂ ವಿವಿಧ ಸಮಾರಂಭಗಳು ಹಾಗೂ ಆಚರಣೆಗಳ ಸಂದರ್ಭದಲ್ಲಿ ಹೆಚ್ಚು ಸಾರ್ವಜನಿಕರು ಗುಂಪು ಸೇರುವ ಹಿನ್ನೆಲೆಯಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ.

ಆದ್ದರಿಂದ ಸಮಾರಂಭ ಪೂರ್ವದಲ್ಲಿ ಮೇಲ್ಕಂಡ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version